ಬೆಂಗಳೂರು : ಕೋವಿಡ್ ಸೋಂಕು ದೃಢಪಟ್ಟಿರುವ “ಮಠ” ನಿರ್ದೇಶಕ ಗುರುಪ್ರಸಾದ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ರಾಘವೇಂದ್ರ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಇಂದು ಫೇಸ್‌ಬುಕ್ ಲೈವ್ ನಲ್ಲಿ ಆಕ್ರೋಶ ಹೊರಹಾಕಿರುವ ಅವರು, ‘ಒಂದು ವೇಳೆ ನಾನು ಕೋವಿಡ್‍ದಿಂದ ಸತ್ತರೆ ಅದಕ್ಕೆ ಈ ಸರ್ಕಾರದ ಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದ್ದಾರೆ.
ಪ್ರಧಾನಿ ಮೋದಿ ಪ್ರಾಮಾಣಿಕ, ಹಾಗಂತ ಬಿಜೆಪಿಯವರೆಲ್ಲ ಪ್ರಾಮಾಣಿಕರಲ್ಲ. ಒಂದು ವರ್ಷ ಟೈಮ್ ತೆಗೆದುಕೊಂಡು, ಎರಡ್ಮೂರು ತಿಂಗಳು ಲಾಕ್ ಡೌನ್ ಮಾಡಿದಿರಲ್ಲ ? ಒಂದು ವೈರಸ್ ಮಟ್ಟ ಹಾಕಲು ಆಗಲಿಲ್ಲ ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಗುರು ಪ್ರಸಾದ್, ಡಿಕೆ ಶಿವಕುಮಾರ್ ಮೇಲೂ ಹರಿಹಾಯ್ದಿದ್ದಾರೆ.
“ನಾನು ಕೋವಿಡ್ ಪಾಸಿಟಿವ್ ಬಂದಿರುವ ನೋವಿನಲ್ಲಿ ಮಾತನಾಡುತ್ತಿದ್ದೇನೆ. ನನ್ನ ಮನೆಯವರೆಗೆ ಈ ಸೋಂಕು ತಂದು ಬಿಟ್ಟ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರಿಗೆ ಧನ್ಯವಾದ.
“ಒಂದೊಂದು ಮನೆಗೂ ವೈರಸ್ ಹಂಚುತ್ತಿದ್ದೀರಲ್ಲಾ, ನನಗೆ ವೈರಸ್ ತಂದು ಕೊಟ್ಟವರಿಗೆ ಧಿಕ್ಕಾರವಿರಲಿ. ರಾಜಕೀಯ ಅನ್ನೋದು ಬ್ಯುಸಿನೆಸ್ ಅಲ್ಲ, ಮನೆ ಮನೆಯಲ್ಲಿಯೂ ಕೊರೋನಾದಿಂದ ಸಾಯುತ್ತಿರುವುದಕ್ಕೆ ಆರೋಗ್ಯ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಅವರೇ ಕಾರಣ, ರಾಜಕಾರಣಿಗಳಾರೂ ಸಾಚಾಗಳಲ್ಲ ಎಂದು ಕಿಡಿ ಕಾರಿದ್ದಾರೆ.
“ದುಡ್ಡು ಮುಖ್ಯವಲ್ಲ, ಮನುಷ್ಯ ಮುಖ್ಯ, ಮೆಡಿಕಲ್ ಮಾಫಿಯಾ ಮಾಡಬೇಡಿ. ಹಾನೆಸ್ಟ್ ಆಗಿ ದುಡಿಯುವವರ ಶಾಪಗಳು ನಿಮ್ಮನ್ನು ಸುಮ್ಮನೆ ಬಿಡಲಾರದು” ಎಂದು ಅವರು ಎಚ್ಚರಿಸಿದ್ದಾರೆ.