Advertisement

ಕಾಲಿವುಡ್‌ಗೆ ಹೊರಟ ಗುರುಪ್ರಸಾದ್‌

12:49 PM Dec 17, 2017 | |

ನಿರ್ದೇಶಕ ಗುರುಪ್ರಸಾದ್‌ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಅವರಿಗೆ ಕಿರುತೆರೆ ಹೊಸದೇನಲ್ಲ. ಈಗಾಗಲೇ ಆರು ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಹೊಸ ಸುದ್ದಿಯೇನೆಂದರೆ, ಅವರೊಂದು ಹೊಸ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ. ಅರೇ, ಅವರು ಈ ಹಿಂದೆ “ಅದೇಮಾ’ ಎಂಬ ಚಿತ್ರ ಶುರುಮಾಡಿ, ಆರು ತಿಂಗಳಲ್ಲೇ ಮುಗಿಸುವುದಾಗಿ ಹೇಳಿದ್ದರಲ್ಲಾ ಎಂಬ ಪ್ರಶ್ನೆ ಎದುರಾಗಬಹುದು. ನಿಜ, ಆ ಚಿತ್ರ ನಿಂತಿಲ್ಲ, ಚಿತ್ರೀಕರಣದಲ್ಲಿದೆ. ಈಗ ಶೇ.25 ರಷ್ಟು ಶೂಟಿಂಗ್‌ ಮುಗಿಸಿರುವ ಗುರುಪ್ರಸಾದ್‌, ಈಗ ತಮಿಳು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರು ತಮಿಳು ಚಿತ್ರಕ್ಕೆ ಕೈ ಹಾಕಿರುವುದು ಅವರದೇ ನಿರ್ದೇಶನದಲ್ಲಿ ಮೂಡಿಬಂದ “ಎದ್ದೇಳು ಮಂಜುನಾಥ’ ಚಿತ್ರ. ಹೌದು, ಈ ಚಿತ್ರವನ್ನು ಅವರು ತಮಿಳಿನಲ್ಲಿ ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಕಥೆ,ಚಿತ್ರಕಥೆ, ಸಂಭಾಷಣೆ ಕೂಡ ಅವರದೇ ಎಂಬುದು ವಿಶೇಷ. 

Advertisement

“ತಮಿಳಿನಲ್ಲಿ ಚಿತ್ರ ಮಾಡುತ್ತಿರುವುದು ನಿಜ. ಆದರೆ, ಇನ್ನೂ ಹೀರೋ ಪಕ್ಕಾ ಆಗಿಲ್ಲ. ಎರಡೂ¾ರು ನಾಯಕರ ಹೆಸರುಗಳು ಓಡಾಡುತ್ತಿವೆ. ಯಾವುದನ್ನೂ ಅಂತಿಮಗೊಳಿಸಿಲ್ಲ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ತಮಿಳಿಗೆ ಒಂದಷ್ಟು ಬದಲಾವಣೆ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿ ಜಗ್ಗೇಶ್‌ ಅವರ ಮ್ಯಾನರಿಸಂಗೆ ಕಥೆ ಮಾಡಿದ್ದೆ. ಅಲ್ಲಿ ಹೀರೋ ಯಾರು ಅಂತ ನೋಡಿ, ಅವರ ಮ್ಯಾನರಿಸಂಗೆ ಕಥೆ ಬದಲಿಸಿಕೊಂಡು, ಕ್ಲೈಮ್ಯಾಕ್ಸ್‌ ಕೂಡ ಬದಲಾಗಲಿದೆ. ಅಲ್ಲಿನ ಜನರ ಮನಸ್ಥಿತಿಯೇ ಬೇರೆ, ಅದೆಲ್ಲವನ್ನೂ ಗಮನದಲ್ಲಿರಿಸಿಕೊಂಡು “ಎದ್ದೇಳು ಮಂಜುನಾಥ’ ಚಿತ್ರವನ್ನು ತಮಿಳಿಗೆ ಮಾಡುತ್ತಿದ್ದೇನೆ. ಇನ್ನೂ ಶೀರ್ಷಿಕೆಯೂ ಇಟ್ಟಿಲ್ಲ. ಸದ್ಯ, “ಭರ್ಜರಿ ಕಾಮಿಡಿ’ ಕಾರ್ಯಕ್ರಮ ಮುಗಿಸಿ, ಜನವರಿಯ ಅಂತ್ಯದಲ್ಲಿ “ಅದೇಮಾ’ ಚಿತ್ರದ ಚಿತ್ರೀಕರಣ ಶುರುಮಾಡುತ್ತೇನೆ. ಏಪ್ರಿಲ್‌ ಹೊತ್ತಿಗೆ ಅದನ್ನು ಮುಗಿಸಿ, ಜೂನ್‌, ಜುಲೈನಲ್ಲಿ ತಮಿಳು ಚಿತ್ರಕ್ಕೆ ಕೈ ಹಾಕುತ್ತೇನೆ. 2018 ರ ಅಂತ್ಯದಲ್ಲಿ ತಮಿಳು ಚಿತ್ರ ರಿಲೀಸ್‌ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಗುರುಪ್ರಸಾದ್‌.

“ಅದೇಮಾ’ ಚಿತ್ರವನ್ನು ಅವರು ಆರು ತಿಂಗಳಲ್ಲಿ ಮುಗಿಸುವುದಾಗಿ ಹೇಳಿದ್ದರು. ಆದರೆ, ಚಿತ್ರ ಶುರುವಾಗಿಯೇ ಆರು ತಿಂಗಳಾಗಿವೆ. ಇನ್ನು ಸ್ವಲ್ಪ ಚಿತ್ರೀಕರಣ ಮಾತ್ರ ಆಗಿದೆ. ಈ ಕುರಿತು ಕೇಳಿದರೆ, “ಕೆಲ ಕಾರಣಗಳಿಂದ ತಡವಾಗಿದೆ. ಮುಗಿಸೋದಷ್ಟೇ ಸಿನಿಮಾ ಅಲ್ಲ. ಅದು ಚೆನ್ನಾಗಿ ಬರಬೇಕು ಅಂದರೆ, ಸಮಯ ಬೇಕು. ಏನೋ ಸುತ್ತಿ ಮಾಡುವುದು ದೊಡ್ಡ ವಿಷಯವಲ್ಲ. “ಅದೇಮಾ’ ಚಿತ್ರ ಹೊರಗಡೆ ಚಿತ್ರೀಕರಣವಾಗುತ್ತಿದೆ. ಸಿಂಗಲ್‌ ಶಾಟ್‌ ಕೂಡ ಒಳಾಂಗಣ ಚಿತ್ರೀಕರಣವಿಲ್ಲ. ಅದೊಂದು ಬೇರೆ ರೀತಿಯ ಚಿತ್ರ. ಹಾಗಾಗಿ ಸಮಯ ಹಿಡಿಯುತ್ತಿದೆ. ಆರಂಭದಲ್ಲಿ ಬರುವ ನಿರ್ಮಾಪಕರು ಮುಗಿಯೋ ಹೊತ್ತಿಗೆ ಬದಲಾಗಿರುತ್ತಾರೆ. ಅದಕ್ಕೆ ಕಾರಣ ನಾನಲ್ಲ. ಈಗ ಆ ವಿಷಯ ಮಾತಾಡುವುದೂ ಸರಿಯಲ್ಲ. ಒಬ್ಬ ಒಳ್ಳೆಯ ನಿರ್ದೇಶಕ, ಒಳ್ಳೆಯ ಚಿತ್ರ ಕೊಡ್ತಾನೆ ಅಂದಾಗ, ಕಾಯಬೇಕು. ನನ್ನ ಮೇಲೆ ನಂಬಿಕೆ ಇಟ್ಟು ಬಂದವರಿಗೆ ಮೋಸ ಆಗಿಲ್ಲ. ಆದರೆ, ಅದೇಕೋ ಗೊತ್ತಿಲ್ಲ. ನನ್ನ ಮೇಲೆಯೇ ಈ ರೀತಿಯ ಅಪವಾದ ಬರುತ್ತವೆ. ಬಹುಶಃ ಅದು ಪ್ರಾಮಾಣಿಕತೆಯ, ಪ್ರತಿಭೆಯ, ನಂಬಿಕೆಯ ದ್ಯೋತಕ. ನನಗೂ

ಒಂದೇ ವರ್ಷಕ್ಕೆ ಐದು ಕೋಟಿ ಮಾಡುವುದು ಗೊತ್ತು. ಆಮೇಲೆ ಏನು ಮಾಡಲಿ? ನನ್ನಲ್ಲಿರುವ ಪ್ರತಿಭೆಯಿಂದ ಈಗ ತಮಿಳು ಮಾಡುತ್ತಿದ್ದೇನೆ. ಆಮೇಲೆ ಹಿಂದಿ ಚಿತ್ರ ಮಾಡುವ ಯೋಚನೆಯೂ ಇದೆ. ತಮಿಳಿನಲ್ಲಿ ಸಿನಿಮಾ ಮಾಡುವುದು ನನ್ನ ಬಹುದಿನಗಳ ಆಸೆ. ಅದಕ್ಕೆ ಈಗ ವೇದಿಕೆ ರೆಡಿಯಾಗುತ್ತಿದೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಗುರುಪ್ರಸಾದ್‌.
 

Advertisement

Udayavani is now on Telegram. Click here to join our channel and stay updated with the latest news.

Next