Advertisement

ಸಮಾನತೆ ಚೌಕಟ್ಟಿನಲ್ಲಿ ಬದುಕನ್ನು ನಿರ್ದೇಶಿಸಿ

05:24 PM Oct 29, 2017 | Team Udayavani |

ಕೆ.ಆರ್‌.ಪೇಟೆ: ರಾಜಕೀಯ ಮತ್ತು ಜಾತಿ ಜನರ ಉಸಿರಾಗುತ್ತಿದ್ದು ಅವುಗಳೇ ಬದುಕಿನ ಧರ್ಮವಾಗುತ್ತಿದೆ. ಇವುಗಳಿಂದಾಗಿ ಅಂಬೇಡ್ಕರ್‌ ರೂಪಿಸಿದ ಸಂವಿಧಾನದ ಆಶಯಗಳು ಸಂಪೂರ್ಣ ವಿಫ‌ಲವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ವಿಲ್ಫೆಂಡ್‌ ಡಿಸೋಜಾ ಆತಂಕ ವ್ಯಕ್ತಪಡಿಸಿದರು.

Advertisement

ಪಟ್ಟಣದ ಕೆ.ಖಾಸಿಂಖಾನ್‌ ಪುರಸಭಾ ಸಮುದಾಯ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ ಮತ್ತು ಸಹಬಾಳ್ವೆಯ ಚೌಕಟ್ಟಿನಲ್ಲಿ ಮಾನವನ ಬದುಕಿನ ನಡೆಯನ್ನು ನಿರ್ದೇಶಿಸಬೇಕಾದ ಧರ್ಮ ಇಂದು ದಾರಿ ತಪ್ಪಿದೆ. ಧರ್ಮದ ಹೆಸರಿನಲ್ಲಿಯೇ ಮಾನವೀಯತೆಗೆ ವಿರುದ್ಧವಾದ ಭಯೋತ್ಪಾದನೆ ವಿಜೃಂಭಿಸುತ್ತಿದೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಬಂಧುತ್ವ ಎನ್ನುವುದು ನಾಶವಾಗುತ್ತಿದೆ ಎಂದು ವಿಷಾದಿಸಿದರು.

ನಶಿಸಿದ ಮಾನವೀಯತೆ: ಮನುಷ್ಯತ್ವ ಮತ್ತು ಮಾನವೀಯತೆ ನಶಿಸಿ ಪರಸ್ಪರ ಅಪನಂಬಿಕೆ ಮತ್ತು ವೈರತ್ವ ಬೆಳೆಯುತ್ತಿದೆ. ಧರ್ಮ, ಜಾತಿ ಮತ್ತು ರಾಜಕಾರಣದ ಹೆಸರಿನಲ್ಲಿ ಮನುಷ್ಯನನ್ನು ವಿಭಜಿಸಿ ವೈರತ್ವವನ್ನು ಪೋಷಿಸುವ ವರ್ಗ ದೇಶದಲ್ಲಿಂದು ಸಕ್ರಿಯವಾಗಿದೆ. ಶೋಷಣೆ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಹೊಸ ಸ್ವರೂಪ ಪಡೆದುಕೊಂಡಿದೆ. ಧರ್ಮದ ಹೆಸರಿನಲ್ಲಿ ಜನರ ಮನಸ್ಸನ್ನು ಒಡೆಯುವ ಸ್ಥಾಪಿತ ಹಿತಾಸಕ್ತಿಗಳ ಕೈ ಮೇಲಾಗುತ್ತಿದೆ.

ಇಂತಹ ಕಠಿಣ ಸಂದರ್ಭದಲ್ಲಿ ಸಾಮಾಜಿಕ ಸಂಘಟನೆಗಳು ಜನರಲ್ಲಿ ಅರಿವು ಮೂಡಿಸಬೇಕು. ಯುವಶಕ್ತಿಯನ್ನು ವೈಚಾರಿಕವಾಗಿ ಜಾಗೃತಗೊಳಿಸಿ ವೈಚಾರಿಕ ಚಳವಳಿಗಳನ್ನು ಕಟ್ಟುವ ಕೆಲಸ ಆಗಬೇಕು. ಪ್ರಗತಿಪರ ಚಿಂತನೆಗಳು ಸಮಾಜದ ಮುಂಚೂಣಿಗೆ ಬರಬೇಕು. ವಿಭಜಕ ಶಕ್ತಿಗಳನ್ನು ದುರ್ಬಲಗೊಳಿಸಿ ಭಾರತೀಯ ಸಮಾಜವನ್ನು ಕುವೆಂಪುರವರ ವಿಶ್ವಮಾನವತೆ ಪರಿಕಲ್ಪನೆಯ ಮೇಲೆ ಪುನರ್‌ ರೂಪಿಸಬೇಕೆಂದು ಕರೆ ನೀಡಿದರು.

ಚಳವಳಿ ವಿಭಜನೆ: ಉತ್ತಮ ಧ್ಯೇಯೋದ್ದೇಶದಿಂದ ಹುಟ್ಟಿಕೊಂಡ ರೈತ ಚಳವಳಿ ಮತ್ತು ದಲಿತ ಚಳವಳಿಗಳು ಕೆಲವು ಮುಖಂಡರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ವಿಭಜನೆಗೊಂಡಿವೆ. ಬಂಡಾಯ ಚಳವಳಿ ತೆರೆಮರೆಗೆ ಸರಿದಿದೆ. ನಮ್ಮ ರಾಜಕಾರಣವೂ ಜಾತ್ಯತೀತ ಸಮಾಜ ನಿರ್ಮಿಸುವುದರಲ್ಲಿ ಸೋತಿದ್ದು ಮೌಡ್ಯ, ಕಂದಾಚಾರ, ವಾಮಾಚಾರ, ಧರ್ಮಾಂಧತೆ ಮತ್ತು ಜಾತಿ ಪ್ರಜ್ಞೆಗಳು ನಮ್ಮ ಬದುಕನ್ನು ಬಾಧಿಸುತ್ತಿವೆ. ಜನರನ್ನು ಎಚ್ಚರಿಸಬೇಕಾದ ಮಾಧ್ಯಮಗಳೇ ಮೌಡ್ಯವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.  

Advertisement

ದಾರ್ಶನಿಕರ ಚಿಂತನೆ: ರಾಜಕೀಯ ವಾಸನೆಯಿಂದ ಆಚೆ ನಿಂತು ಯುವಕರು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಗೌತಮ ಬುದ್ದ, ಬಸವಣ್ಣ, ಅಂಬೆಡ್ಕರ್‌, ಜ್ಯೋತಿಬಾ ಪುಲೆ, ಸಾವಿತ್ರಿ ಬಾಯಿ ಪುಲೆ, ಶಾಹು ಮಹಾರಾಜ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ನಾರಾಯಣ ಗುರು, ಕುದ್ಮಲ್‌ ರಂಗರಾವ್‌, ಮಹಾತ್ಮ ಗಾಂಧಿ, ಕುವೆಂಪು ಮುಂತಾದ ಸಮಾಜ ಸುಧಾರಕರು ಮತ್ತು ದಾರ್ಶನಿಕರ ಚಿಂತನೆಗಳ ಅಡಿಯಲ್ಲಿ ನಮ್ಮ ಚಳವಳಿಗಳು ಸಾಗಬೇಕು ಎಂದು  ಡಿಸೋಜಾ ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಶಿವಕಾಳಯ್ಯ ವಹಿಸಿದ್ದರು.  ವೇದಿಕೆ ಮೈಸೂರು ಜಿಲ್ಲಾ ಸಂಚಾಲಕ ಎಂ.ಲೋಕೇಶ್‌, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್‌, ಪ್ರಾಧ್ಯಾಪಕ ಡಾ.ಉಮಾಶಂಕರ್‌, ಉಪನ್ಯಾಸಕ ಕೆ.ಎಂ.ವಾಸು ಮಾತನಾಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್‌, ಕರವೇ ಘಟಕದ ಅಧ್ಯಕ್ಷ ವೇಣು, ವೇದಿಕೆ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಪ್ರಭಾವತಿ, ಮುಖಂಡರಾದ ಶಿವಣ್ಣ, ಮಾದಣ್ಣ, ವೆಂಕಟಣ್ಣ, ಜಗದೀಶ್‌, ಮೂಡನಹಳ್ಳಿ ನಾಗರಾಜು, ಪಾಂಡು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next