Advertisement

ದೇಗುಲಗಳಿಗೆ ಹಿರಿಯರ ನೇರ ಪ್ರವೇಶ ಸ್ವಾಗತಾರ್ಹ

12:22 AM Jun 23, 2023 | Team Udayavani |

ರಾಜ್ಯದ ಧರ್ಮಾದಾಯ ದತ್ತಿ ಇಲಾಖೆಯ ಅಧೀನದಲ್ಲಿರುವ “ಎ’ ಮತ್ತು “ಬಿ’ ವರ್ಗಗಳ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟವರು ತಮ್ಮ ವಯಸ್ಸಿನ ದಾಖಲೆಯನ್ನು ತೋರಿಸಿ ನೇರವಾಗಿ ದೇವಾಲಯದ ಒಳಗಡೆ ಪ್ರವೇಶಿಸಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ಸರಕಾರದ ಈ ನಿರ್ಧಾರದಿಂದ ಹಿರಿಯ ನಾಗರಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

Advertisement

ರಾಜ್ಯದ ಪ್ರಮುಖ ದೇವಾಲಯಗಳು ಧರ್ಮಾದಾಯ ಇಲಾಖೆಯ ಅಧೀನದಲ್ಲಿದ್ದು ಪ್ರತೀ ವರ್ಷ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಈ ದೇಗುಲಗಳಿಗೆ ಭೇಟಿ ನೀಡಿ ತಮ್ಮ ಹರಕೆ, ಪ್ರಾರ್ಥನೆಗಳನ್ನು ಸಲ್ಲಿಸು ತ್ತಿರುತ್ತಾರೆ. ದೇಗುಲವನ್ನು ಪ್ರವೇಶಿಸಿ, ದೇವರ ದರ್ಶನ ಪಡೆಯಲು ಹಿರಿಯ ನಾಗರಿಕರು ಕೆಲವೊಮ್ಮೆ ಸರದಿ ಸಾಲಿನಲ್ಲಿ ತಾಸುಗಳ ಕಾಲ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಹಿರಿಯ ನಾಗರಿಕರು ಬಹಳಷ್ಟು ತೊಂದರೆ ಎದುರಿಸಬೇಕಾಗಿ ಬರುತ್ತಿತ್ತು. ಅದರಲ್ಲೂ ಅನಾರೋಗ್ಯ ಪೀಡಿತರಿಗಂತೂ ಸರದಿ ಸಾಲಿನಲ್ಲಿ ನಿಲ್ಲುವುದು ತ್ರಾಸದಾಯಕವಾಗಿ ಪರಿಣಮಿಸುತ್ತಿದೆ. ಈ ಕಾರಣದಿಂದಾಗಿ ಹಿರಿಯ ನಾಗರಿಕರು ಈ ಕ್ಷೇತ್ರಗಳಿಗೆ ಭೇಟಿ ನೀಡಿದರೂ ದೇವಾಲಯದೊಳಗೆ ಪ್ರವೇಶಿಸಿ, ದೇವರ ದರ್ಶನ ಮಾಡಲಾಗದೆ ನಿರಾಶೆಯಿಂದ ಹಿಂದಿ ರುಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ಉಪಾದಿ ವಂತರ ಒಕ್ಕೂಟದ ನಿಯೋಗ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಹಿರಿಯ ನಾಗರಿಕರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡುವಂತೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು, ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಇನ್ನು ಮುಂದೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸರದಿ ಸಾಲಲ್ಲಿ ನಿಲ್ಲದೆ ನೇರವಾಗಿ ದೇವಾಲಯದೊಳಕ್ಕೆ ಪ್ರವೇಶಿಸಬಹುದಾಗಿದೆ. ಹಿರಿಯ ನಾಗರಿಕರ ಪ್ರವೇಶಕ್ಕಾಗಿ ದೇವಾಲಯದಲ್ಲಿ ಸ್ಥಳಾವಕಾಶವಿದ್ದರೆ ಪ್ರತ್ಯೇಕ ಜಾಗವನ್ನು ಗೊತ್ತುಪಡಿಸಬೇಕು. ಮಾತ್ರವಲ್ಲದೆ ದೇವಾಲಯದ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿಯೇ ಸಹಾಯ ಕೇಂದ್ರವನ್ನು ಸ್ಥಾಪಿಸಿ ಸಿಬಂದಿಯನ್ನು ನಿಯೋಜಿಸಿ ದೇವರ ದರ್ಶನದ ವ್ಯವಸ್ಥೆ ಮಾಡು ವಂತೆಯೂ ಆದೇಶದಲ್ಲಿ ಸೂಚನೆ ನೀಡಲಾಗಿದೆ.

ಈಗಾಗಲೇ ರಾಜ್ಯ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಪರಿಣಾಮವಾಗಿ ರಾಜ್ಯದ ಪ್ರಮುಖ ದೇಗುಲಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದ್ದು ದೇವಾಲಯಗಳ ಆವರಣದಲ್ಲಿ ನೂಕುನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂಥ ಸಂದರ್ಭದಲ್ಲಿಯೇ ಹಿರಿಯ ನಾಗರಿಕರಿಗೆ ದೇಗುಲವನ್ನು ನೇರವಾಗಿ ಪ್ರವೇಶಿಸಲು ಅವಕಾಶ ಕಲ್ಪಿಸಿ ಕೊಡುವ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ನಡೆಯಾಗಿದೆ.

ಮುಜರಾಯಿ ಇಲಾಖೆಗೆ ಸೇರಿದ ಬಹುತೇಕ ದೇವಾಲಯಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಒಟ್ಟಾರೆ ವ್ಯವಸ್ಥೆಯಲ್ಲಿ ಲೋಪ ದೋಷ ಗಳು ಭಕ್ತರನ್ನು ಕಾಡುತ್ತಿದ್ದು ಇತ್ತ ಸರಕಾರ ಶೀಘ್ರ ಗಮನಹರಿಸಬೇಕು. ಕಾಲಕಾಲಕ್ಕೆ ದೇವಾಲಯಗಳಲ್ಲಿ ಅಗತ್ಯ ಮೂಲ ಸೌಕರ್ಯಗಳ ಸುಧಾರಣೆ, ಅಭಿವೃದ್ಧಿ ಯೋಜನೆಗಳಿಗೆ ದೇವಾಲಯಗಳ ಆದಾಯ ದಲ್ಲಿಯೇ ಒಂದಿಷ್ಟು ಮೊತ್ತವನ್ನು ವಿನಿಯೋಗಿಸಬೇಕು. ಇದರಿಂದ ಈ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚುವುದಲ್ಲದೆ ದೇವಾಲಯದ, ಆ ಮೂಲಕ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next