Advertisement

ಕುಗ್ಗದ ದೀಪಾವಳಿ ಖುಷಿ

01:31 PM Oct 20, 2017 | Team Udayavani |

ರಾಯಚೂರು: ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಪಟಾಕಿ, ಪೂಜಾ ಸಾಮಗ್ರಿ ಸೇರಿ ಅಗತ್ಯ
ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಖರೀದಿ ಜೋರಾಗಿತ್ತು. ಹಬ್ಬವನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸಿದರು.
ಬೆಳಕಿನ ಹಬ್ಬಕ್ಕೆ ಎಂದಿನಂತೆ ಈ ಬಾರಿಯೂ ಅದ್ಧೂರಿ ಸ್ವಾಗತ ದೊರೆತಿದೆ. ಕಳೆದ ಕೆಲ ದಿನಗಳಿಂದ ಎಡೆಬಿಡದೆ
ಸುರಿದಿದ್ದ ಮಳೆಯಿಂದ ಹಳ್ಳಿಗಳಲ್ಲಿ ಹಬ್ಬಕ್ಕೆ ಮಂಕು ಕವಿದಂತೆ ಕಂಡರೂ ನಗರ ಪ್ರದೇಶಗಳಲ್ಲಿ ಯಾವುದೇ ಬದಲಾವಣೆ
ಕಂಡು ಬರಲಿಲ್ಲ. ನರಕ ಚತುರ್ದಶಿ, ದೀಪಾವಳಿ ಅಮಾವಾಸ್ಯೆ ಹಾಗೂ ಬಲಿ ಪಾಡ್ಯಮಿಗೆ ಸಿದ್ಧತೆಗಳು ಜೋರಾಗಿದ್ದವು.

Advertisement

ಎರಡು ದಿನಗಳ ಮುಂಚೆಯೇ ಸಡಗರ ಶುರುವಾಗಿತ್ತು. ಹಬ್ಬದ ನಿಮಿತ್ತ ಎಲ್ಲ ಅಂಗಡಿ ಮುಂಗಟ್ಟುಗಳನ್ನು, ಮನೆಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಎಲ್ಲೆಡೆ ಅಲಂಕಾರಿಕ ದೀಪಗಳನ್ನು ಹಾಕಿದ್ದು ಝಗಮಗಿಸುವಂತೆ ಕಂಡು ಬಂತು. ಮನೆಗಳ ಮುಂದೆ ಬಿಡಿಸಿದ ಬಣ್ಣದ ಬಣ್ಣದ ರಂಗೋಲಿ ಹಬ್ಬದ ಕಳೆ ಹೆಚ್ಚಿಸಿದ್ದವು. 

ಖರೀದಿ ಜೋರು: ಹಬ್ಬದ ನಿಮಿತ್ತ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಬೆಲೆ ಏರಿಕೆ ನಡುವೆಯೂ ಜನ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡುಬಂತು. ಮಾರುಕಟ್ಟೆಯಲ್ಲಿ ಗಿಜಿಗುಡುವ ವಾತಾವರಣವಿತ್ತು. ಬಾಳೆದಿಂಡು, ಹಣ್ಣು, ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಂಗಡಿ ಪೂಜೆಗಳಿಗಾಗಿ ಕುಂಬಳಕಾಯಿ ಖರೀದಿ ಜೋರಾಗಿತ್ತು. ಒಟ್ಟಾರೆ ಹಬ್ಬದ ಖರೀದಿ ಜೋರಾಗಿದ್ದರಿಂದ ವರ್ತಕರಲ್ಲಿ ಲಾಭದ ಮಂದಹಾಸ ಕಂಡು ಬಂತು. ಇನ್ನು ಆಕಾಶ ಬುಟ್ಟಿಗಳ ಮಾರಾಟ ಜೋರಾಗಿದ್ದು, ಬಣ್ಣ ಬಣ್ಣದ
ವಿವಿಧ ಆಕಾರಗಳ ಆಕಾಶ ಬುಟ್ಟಿಗಳ ಮಾರಾಟವಾಗಿದೆ. ಇನ್ನು ರಾಜಸ್ಥಾನದಿಂದ ಬಂದ ಹಣತೆ ವ್ಯಾಪಾರಿಗಳು ಕೂಡ ವಿವಿಧ
ಆಕೃತಿಗಳ ಹಣತೆಗಳನ್ನು ಮಾರಾಟ ಮಾಡಿ ಲಾಭದ ರುಚಿ ಕಂಡಿದ್ದಾರೆ.

ದೀಪಾವಳಿ ಪೂಜೆಗೆ ಅಗತ್ಯವಾದ ಕಬ್ಬು, ಬಾಳೆದಿಂಡು, ಮಾವಿನಎಲೆ, ಚಂಡುಹೂವು, ಚಂಡುಹೂವಿನ ಗಿಡ, ಹೂವಿನ ಹಾರಗಳ ಬೆಲೆ ಹೆಚ್ಚಿದ್ದರೂ ಸಾರ್ವಜನಿಕರು ಮಾತ್ರ ತಮ್ಮ ಇತಿಮಿತಿಯಲ್ಲಿ ಚೌಕಾಸಿ ಮಾಡುತ್ತ ಖರೀದಿಸುತ್ತಿರುವುದು ಕಂಡುಬಂತು.

ಪಟಾಕಿ ವ್ಯಾಪಾರ ಡಲ್‌: ಈ ಬಾರಿ ಪಟಾಕಿ ವ್ಯಾಪಾರ ಎಂದಿನಂತಿಲ್ಲ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ನಗರಸಭೆಯೇ ಮಳಿಗೆಗಳನ್ನು ಸಿದ್ಧಪಡಿಸುತ್ತಿದ್ದು, ವರ್ತಕರು ಇಂತಿಷ್ಟು ಹಣ ನೀಡಿ ವ್ಯಾಪಾರ ಮಾಡುತ್ತಿದ್ದರು. ಆದರೆ, ಈ ಬಾರಿ ಮಳಿಗೆಗಳನ್ನು ವರ್ತಕರೇ ಹಾಕಿಕೊಳ್ಳುವಂತಾಗಿದೆ. ಅಲ್ಲದೇ, ಜನ ಕೂಡ ಪಟಾಕಿ ಖರೀದಿಸಲು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ವ್ಯಾಪಾರ ನಿರೀಕ್ಷೆಯಷ್ಟಾಗಿಲ್ಲ ಎನ್ನುತ್ತಿದ್ದಾರೆ. ಚೀನಾ ಪಟಾಕಿಗಳ ನಿಷೇಧ, ಪರಿಸರ ಸ್ನೇಹಿ ಆಚರಣೆಗೆ ಜನ ಒತ್ತು ಕೊಟ್ಟಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಬೆಲೆ ಏರಿಕೆ, ಮಳೆ ಕಾಟದ ಮಧ್ಯಯೂ ಹಬ್ಬಕ್ಕೆ ಯಾವುದೇ ಕುಂದುಟಾಗಿಲ್ಲ. ಎಲ್ಲರೂ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಿರುವುದು ವಿಶೇಷ 

Advertisement
Advertisement

Udayavani is now on Telegram. Click here to join our channel and stay updated with the latest news.

Next