Advertisement

ಬಿಎಸ್‌ವೈ ಡಿನೊಟಿಫಿಕೇಶನ್‌ ಪ್ರಕರಣಕ್ಕೆ ಹೊಸ ತಿರುವು

06:00 AM Aug 20, 2017 | |

ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯಲ್ಲಿ ಅಕ್ರಮ ಡಿನೊಟಿಫೀಕೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ತಪ್ಪು ಮಾಡಿದ್ದಾರೆಂದು ಹೇಳಿಕೆ ನೀಡುವಂತೆ ಎಸಿಬಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತನಿಖಾ ದಳದ ಉಪ ಕಾರ್ಯದರ್ಶಿ ಕೆಎಎಸ್‌ ಅಧಿಕಾರಿ ಬಸವರಾಜೇಂದ್ರ “ಬಾಂಬ್‌’ಸಿಡಿಸಿದ್ದಾರೆ.

Advertisement

ಈ ಕುರಿತು ಬಸವರಾಜೇಂದ್ರ ಅವರು ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರಿಗೆ ಪತ್ರ ಸಹ ಬರೆದಿದ್ದು,  ಯಡಿಯೂರಪ್ಪ ವಿರುದ್ಧ ಎಫ್ಐಆರ್‌ ದಾಖಲಿಸಿರುವ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಪುಷ್ಟಿ ದೊರೆತಂತಾಗಿದೆ.

ಡಾ.ಶಿವರಾಮ ಕಾರಂತ ಬಡಾವಣೆಯ ಡಿನೊಟಿಫೀಕೇಶನ್‌ ಪ್ರಕರಣದ ಬಗ್ಗೆ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವಂತೆ ಎಸಿಬಿ ಡಿವೈಎಸ್ಪಿ ಬಾಲರಾಜ್‌ ಹಲವು ಬಾರಿ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ. 2010 ಜುಲೈನಿಂದ 2011ರ ಸೆಪ್ಟಂಬರ್‌ ವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಾನು ಸರ್ಕಾರದ ಇಲಾಖೆ ಮತ್ತು ಮೇಲಧಿಕಾರಿಗಳ ಆದೇಶದಂತೆ ಕಾನೂನು ಬದ್ಧವಾಗಿಯೇ ಕಾರ್ಯ ನಿರ್ವಹಿಸಿದ್ದೇನೆ.

ಆಗಸ್ಟ್‌ 6 ಮತ್ತು 10 ರ ನಡುವೆ ಎಸಿಬಿ ಡಿವೈಎಸ್ಪಿ ಬಾಲರಾಜ್‌ ಹಲವು ಬಾರಿ ಕರೆ ಮಾಡಿ, ಎಸಿಬಿ ಕಚೇರಿಗೆ ಭೇಟಿ ನೀಡುವಂತೆ ಒತ್ತಡ ಹೇರಿದ್ದಾರೆ.ಅದರಂತೆ ಎಸಿಬಿ ಕಚೇರಿಗೆ ಭೇಟಿ ನೀಡಿ, ಎಸಿಬಿ ಇನ್ಸ್‌ಪೆಕ್ಟರ್‌ ಮಂಜುನಾಥ ಅವರಿಗೆ ಶಿವರಾಮ ಕಾರಂತ ಬಡಾವಣೆ ಡಿ ನೊಟಿಫೀಕೇಶನ್‌ ಕುರಿತಂತೆ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ಮತ್ತೆ ಎಸಿಬಿ ಡಿವೈಎಸ್ಪಿ ಬಾಲರಾಜ್‌ ಆಗಸ್ಟ್‌ 10 ರಂದು ಎಸಿಬಿ ಕಚೇರಿಗೆ ಆಗಮಿಸುವಂತೆ ಸೂಚಿಸಿದರು. ಆಗಸ್ಟ್‌ 10 ರಂದು ಸಂಜೆ ಎಸಿಬಿ ಕಚೇರಿಗೆ ತೆರಳಿದೆ, ಆ ಸಂದರ್ಭದಲ್ಲಿ ಎಸಿಬಿಯ ಇನ್ನೊಬ್ಬ ಡಿವೈಎಸ್ಪಿ ಜೆ.ಕೆ. ಆಂಟೋನಿ ಜಾನ್‌ ನಮ್ಮೊಂದಿಗೆ ಸೇರಿಕೊಂಡರು.

ಅರ್ಧ ಗಂಟೆಯ ಚರ್ಚೆಯ ನಂತರ ಡಿವೈಎಸ್ಪಿ ಬಾಲರಾಜ್‌ ಯಡಿಯೂರಪ್ಪ ವಿರುದ್ಧ ಡಿನೊಟಿಫಿಕೇಶ್‌ ಮಾಡಿರುವ ಬಗ್ಗೆ ನಾನೇ ಹೇಳಿಕೆ ನೀಡಿರುವಂತೆ ತಾವೇ ತಮ್ಮ ಟೈಪ್‌ರೈಟರ್‌ ರಮೇಶ್‌ಗೆ ಹೇಳಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ಕಾನೂನು ಬಾಹಿರವಾಗಿ ಡಿನೊಟಿಫೀಕೇಶನ್‌ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಸುಮಾರು 2000 ಕೋಟಿ ರೂ. ನಷ್ಟವಾಗಿದೆ ಎಂದು ಟೈಪ್‌ ಮಾಡಿಸಿದರು.

Advertisement

ಆ ಸಂದರ್ಭದಲ್ಲಿ ನಾನು ಮಧ್ಯ ಪ್ರವೇಶಿಸಿ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಭೂಸ್ವಾಧೀನಾಧಿಕಾರಿಯಾಗಿ ನಾನು ಮೇಲಾಧಿಕಾರಿಯ ಆದೇಶ ಪಾಲನೆ ಮಾಡಿದ್ದೇನೆ ಎಂದು ವಿವರಣೆ ನೀಡಿದೆ. ಆದರೆ, ಡಿವೈಎಸ್ಪಿ ಬಾಲರಾಜ್‌ ತಾವು ಹೇಳಿದಂತೆ ಹೇಳಿಕೆ ನೀಡದ್ದಿದರೆ, ಈ ಪ್ರಕರಣದಲ್ಲಿ ಆರೋಪಿಯಾಗಬೇಕಾಗುತ್ತದೆ ಎಂದು ಹೆದರಿಸಿದರು. ಅಷ್ಟೆ ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಾನು ಐಎಎಸ್‌ ಹುದ್ದೆಗೆ ಬಡ್ತಿ ನಿರೀಕ್ಷೆಯಲ್ಲಿದ್ದೇನೆ. ಹೀಗಾಗಿ ಬಾಲರಾಜ್‌ ತಾವು ಹೇಳಿದಂತೆ ಒಪ್ಪುವಂತೆ ಆಗ್ರಹಿಸಿದರು. ಆ ಸಂದರ್ಭದಲ್ಲಿ ನಾನು ಅವರ ಕಾನೂನು ಬಾಹಿರ ಬೇಡಿಕೆಗೆ ಸ್ಪಂದಿಸದೆ ಎಸಿಬಿ ಕಚೇರಿಯಿಂದ ಹೊರ ಬಂದೆ. ಎಸಿಬಿ ಅಧಿಕಾರಿಗಳ ಒತ್ತಡಕ್ಕೆ ಮಣಿಯದಿರುವುದಕ್ಕೆ ನನ್ನನ್ನು ಎರಡನೇ ಆರೋಪಿ ಎಂದು ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆಗಸ್ಟ್‌ 17 ರಂದು ಎಸಿಬಿ ಅಧಿಕಾರಿಗಳು ಮತ್ತೂಂದು ನೋಟಿಸ್‌ ನೀಡಿ, ಆಗಸ್ಟ್‌ 19 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ನನ್ನನ್ನು ಬಲಿ ಪಶು ಮಾಡಲಾಗುತ್ತಿದೆ. ಎಸಿಬಿ ಅಧಿಕಾರಿಗಳಿಂದ ನನಗೆ ಆಗುತ್ತಿರುವ ಕಿರುಕುಳವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ನನಗೆ ರಕ್ಷಣೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ  ತಿಳಿಸಿದ್ದಾರೆ.

ಕಾಲಾವಕಾಶ ಕೋರಿದ ಬಿಎಸ್‌ವೈ
ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನೋಟಿಸ್‌ ನೀಡಿತ್ತು. ಆದರೆ, ಯಡಿಯೂರಪ್ಪ ಅವರು ಹಾಜರಾಗದೆ ಕಾಲಾವಕಾಶ ಕೇಳಿದ್ದಾರೆ.
 
ನೋಟಿಸ್‌ನಲ್ಲಿರುವಂತೆ ಶನಿವಾರ ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಬದಲಾಗಿ ತಮ್ಮ ಪರ ಇಬ್ಬರು ವಕೀಲರನ್ನು ಕಳುಹಿಸಿ,ವಿಚಾರಣೆಗೆ ಹಾಜರಾಗಲು 10 ದಿನಗಳ ಕಾಲಾವಕಾಶ ನೀಡುವಂತೆ ವಕೀಲರ ಮೂಲಕ ಕೋರಿಕೊಂಡಿದ್ದಾರೆ. ಈ ಸಂಬಂಧ ಎಸಿಬಿ ಅಧಿಕಾರಿಗಳಿಗೆ ಪತ್ರ ಬರೆದಿರುವ ಬಿಎಸ್‌ವೈ, ನೋಟಿಸ್‌ನಲ್ಲಿ ನಮೂದಿಸಿರುವ ಆರೋಪಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ, ತಮ್ಮ ಮುಂದೆ ಹಾಜರುಪಡಿಸಲು ಕಾಲಾವಕಾಶದ ಅಗತ್ಯ ಇದೆ ಎಂದೂ ಕೋರಿದ್ದಾರೆ.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿ.ಎಸ್‌.ವೈ ಅವರು ಮುಖ್ಯಮಂತ್ರಿಯಾಗಿದ್ದಾಗ 257.25 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಎಸಿಬಿಗೆ 20 ದೂರು ದಾಖಲಾಗಿದ್ದವು. 20 ದೂರುಗಳಲ್ಲಿ 2 ದೂರುಗಳನ್ನು ಪರಿಶೀಲಿಸಿದ ಎಸಿಬಿ,ಬಿಎಸ್‌ವೈ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದೆ. ಇನ್ನುಳಿದ ದೂರುಗಳಿಗೆ ಸಂಬಂಧಿಸಿ ದಂತೆಯೂ ಎಫ್ಐಆರ್‌ ದಾಖಲಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಎರಡು ಪ್ರಕರಣಕ್ಕೆ ಸಂಬಧಿಸಿದಂತೆ ಅಂದಿನ ಬಿಡಿಎ ಭೂ ಸ್ವಾಧೀನಾಧಿಕಾರಿ ಚ್‌.ಬಸವರಾಜೇಂದ್ರ, ಭೂಸ್ವಾಧಿನ ಉಪ ಆಯುಕ್ತ ಗೌರಿ ಶಂಕರ್‌, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಪ್ರೇಮಚಂದ್ರ, ಅಂದಿನ ಉಪ ಕಾರ್ಯದರ್ಶಿ ಬಸವರಾಜು, ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಯಾಗಿದ್ದ ಸುಭೀರ್‌ ಹರಿಸಿಂಗ್‌ ಸೇರಿ 7 ಮಂದಿ ವಿರುದಟಛಿ ದೂರು ದಾಖಲಾಗಿತ್ತು.

ದೂರು ರದ್ದು ಕೋರಿ ಹೈಕೋರ್ಟ್‌ ಮೊರೆ
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿನೋಟಿಫೈಆರೋಪ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪ ಅವರು ತಮ್ಮ ವಿರುದ್ಧದ ದೂರನ್ನು ರದ್ದುಪಡಿಸಲು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿರುವ ಅವರು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಎಸಿಬಿಯಲ್ಲಿ ದಾಖಲಿಸಿರುವ ಎಫ್ಐಆರ್‌ ರದ್ದುಪಡಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಗದರಿಸಿದ್ದರಾ ಕುಂಟಿಯಾ?
ಎಸಿಬಿ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಮುಖ್ಯಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಮನೆಗೆ ಬಸವರಾಜೇಂದ್ರ ದೂರು ನೀಡಲು ಹೋದಾಗ ದೂರು ಸ್ವೀಕರಿಸಲು ಹಿಂದೇಟು ಹಾಕಿದ ಅವರು, ಮನೆಗೇಕೆ
ಬಂದಿದ್ದೀಯಾ ಎಂದು ಗದರಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ನಂತರ ಬಸವರಾಜೇಂದ್ರ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯ ಕಾರ್ಯದರ್ಶಿ ಕಚೇರಿಗೆ ತೆರಳಿ ಅಲ್ಲಿದ್ದ ಆಪ್ತ ಸಹಾಯಕರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

ಎಸಿಬಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಭಾನುವಾರ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ.ಡಿನೋಟಿಫಿಕೇಷನ್‌ ಈಗಾಗಲೇ ವಿಚಾರಣೆ ನಡೆಸಿದ ಕೋರ್ಟ್‌ ಖುಲಾಸೆಗೊಳಿಸಿದೆ.
– ಕೆ.ಎಸ್‌.ಈಶ್ವರಪ್ಪ,
ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next