ಬೀದರ: ದೇಶ ಕಂಡ ಮಹಾನ್ ಮುತ್ಸದ್ಧಿ, ಪ್ರಚಂಡ ವಾಗ್ಮಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1983ರಿಂದ 1996ರ ವರೆಗೆ ಬೀದರ ಜಿಲ್ಲೆಗೆ ಮೂರು ಬಾರಿ ಭೇಟಿ ನೀಡಿದ್ದರು. 1983ರಲ್ಲಿ ಪ್ರಥಮ ಬಾರಿಗೆ ಬೀದರ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಬಿಜೆಪಿ ಸಂಘಟನೆಗೆ ಒತ್ತು ನೀಡಿ, ಈ ಭಾಗದಲ್ಲಿ ಬಿಜೆಪಿ ಬೇರೂರಲು ಕಾರಣಿಕರ್ತರಾಗಿದ್ದರು. ಅವರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೈಕಲ್ ಮೂಲಕ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದನ್ನು ಇಲ್ಲಿನ ಹಳೆ ಕಾರ್ಯಕರ್ತರು ಸ್ಮರಿಸಿದರು.
1996ರಲ್ಲಿ ಸುಭಾಷ ಕಲ್ಲೂರ ಅವರು ಬೀದರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು. ಈ ವೇಳೆ ಬಿಜೆಪಿಯಿಂದ ಸ್ಪರ್ಧಿಸಿದ್ದ ದಿ| ರಾಮಚಂದ್ರ ವೀರಪ್ಪ ಆರ್ಯ ಅವರ ಗೆಲುವಿಗಾಗಿ ಬೀದರ- ಹುಮನಾಬಾದ ಪಟ್ಟಣಕ್ಕೆ ಅಟಲ್ ಬಿಹಾರಿ ವಾಜಪೇಯಿ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ್ದರು. ವಿಶೇಷ ಹೆಲಿಕಾಪ್ಟರ್ ಮೂಲಕ ಬೀದರ ನಗರಕ್ಕೆ ಆಗಮಿಸಿದ ವಾಜಪೇಯಿ ಬಿಜೆಪಿ ಪರ ಪ್ರಚಾರ ನಡೆಸಿ ರಾಮಚಂದ್ರ ವೀರಪ್ಪ ಆರ್ಯ ಅವರ ಗೆಲುವಿಗೆ ಕಾರಣವಾಗಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಸುಬ್ಬಯ್ನಾ ಅವಧಿಯಲ್ಲಿ ಬೀದರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಅಟಲ್ ಗೌರವ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗಿತ್ತು. ಬೀದರ ಜಿಲ್ಲೆಗೆ 55 ರೂ. ಸಂಗ್ರಹದ ಗುರಿ ಇತ್ತು. ಆದರೆ, ಬೀದರ ನಗರದ ಜನರು ಸ್ಪಂದಿಸದ ಹಿನ್ನೆಲೆಯಲ್ಲಿ ಹುಮನಾಬಾದ ಪಟ್ಟಣದಲ್ಲಿ ನಿಧಿ ಸಂಗ್ರಹ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಹುಮನಾಬಾದ ಪಟ್ಟಣಕ್ಕೆ ವಾಜಪೇಯಿ ಅವರು ಆಗಮಿಸಿ ಪಕ್ಷ ಸಂಘಟನೆ ಕುರಿತು ಭಾಷಣ ಮಾಡಿದ್ದರು. ಅಲ್ಲದೇ ಪಟ್ಟಣದ ಗುರುದಾಸ ಖಾನಾವಳಿಯಲ್ಲಿ ಮಧ್ಯಾಹ್ನದ ಊಟ ಸವಿದಿದ್ದರು. ಅತಿ ಸರಳ ಸ್ವಭಾವದ ವಾಜಪೇಯಿ ಅವರ ಮಾತುಗಳನ್ನು ಕೇಳಿದ ಪ್ರತಿಯೊಬ್ಬರೂ ಹುಮ್ಮಸಿನಿಂದ ಪಕ್ಷದ ಕಾರ್ಯಕ್ಕೆ ಮುಂದಾಗುತ್ತಿದರು ಎಂದು ಆರ್ಯ ಸಮಾಜದ ಮುಖಂಡ ಸುಭಾಷ ಅಷ್ಟಿಕರ್ ಸ್ಮರಿಸಿದರು.
ಬೀದರ ಜಿಲ್ಲೆಗೆ ವಾಜಪೇಯಿ ಅವರ ಕೊಡುಗೆ ಪಾರವಾಗಿದೆ. ಬೀದರ-ಕಲಬುರಗಿ ರೈಲು ಮಾರ್ಗಕ್ಕೆ ತಂದೆಯವರು ಪ್ರಸ್ತಾವನೆ ಸಲ್ಲಿಸಿದ ಕೂಡಲೆ ಅದಕ್ಕೆ ಅಂಕಿತ ಹಾಕಿ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿತ್ತು. ಅಲ್ಲದೇ ಮಹಾತ್ಮಾ ಗಾಂಧಿ ಕಾರ್ಖಾನೆ ಸ್ಥಾಪನೆಗೂ ಕೂಡ ವಾಜಪೇಯಿ ಅವರ ಶ್ರಮವಿದೆ. ತಂದೆಯವರಾದ ರಾಮಚಂದ್ರ ವೀರಪ್ಪ ಆರ್ಯಾ ಅವರೊಂದಿಗೆ ಅಟಲ್ ಜೀ ಅವರ ನಿಕಟ ಸಂಕರ್ಪ ಇತ್ತು. ಇಬ್ಬರು ಜನಸ್ನೇಹಿಯಾಗಿ ಗುರುತಿಸಿಕೊಂಡವರು. ತಂದೆಯವರು ಯಾವುದೇ ಅಪಾಯಿಂಟ್‌ಮೆಂಟ್ ಇಲ್ಲದೆ ನೇರವಾಗಿ ಭೇಟಿಯಾಗಿ ಈ ಭಾಗದ ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದರು. ಲೋಕ ಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸುವ ಮೂಲಕ ತಂದೆಯವರನ್ನು ಗೆಲ್ಲಿಸಲು ಅವರು ಶ್ರಮಿಸಿದ್ದಾರೆ.
ಬಸವರಾಜ ಆರ್ಯ
ವಾಜಪೇಯಿ ಅವರೊಂದಿಗೆ ವಿವಿಧ ರಾಜಕೀಯ ರ್ಯಾಲಿಗಳಲ್ಲಿ ಭಾಗವಹಿಸಿದ್ದು, ಆ ರ್ಯಾಲಿಗಳಲ್ಲಿ ಪಕ್ಷದ
ಮುಖಂಡರು ಮೈಕಿನ ಎದುರಿಗೆ ನಿಂತು “ದೇಶ ಕಾ ಪ್ರಧಾನಿ ಕೈಸಾ ಹೋ’ ಎಂದು ಕೂಗಿದರೆ ರ್ಯಾಲಿಯಲ್ಲಿ ಭಾಗವಹಿಸಿದ ಜನಸ್ತೋಮ “ಅಟಲ್ ಬಿಹಾರಿ ಜೈಸಾ ಹೋ’ ಎಂದು ಪ್ರತಿಕ್ರಿಯೆ ನೀಡುತ್ತಿದ್ದರು. ಆ ಒಂದು ಕ್ಷಣ ರೋಮಾಂಚನಗೊಳಿಸುತ್ತಿತ್ತು.
ವಾಜಪೇಯಿ ಅವರ ಭಾಷಣ ಕೇಳಲು ಸಾರ್ವನಿಕರು ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಿದ್ದರು. ತಮ್ಮದೇ ಆದ ಶೈಲಿಯಲ್ಲಿ ಭಾಷಣ ಮಾಡುವ ಮೂಲಕ ನೆರೆದ ಜನರ ಮನ ಗೆಲ್ಲುತ್ತಿದ್ದರು. ಪ್ರಧಾನಿ ಇದ್ದರೆ ಇಂತವರು ಇರಬೇಕು ಎನ್ನುವ
ಮನೋಭಾವ ಜನರಲ್ಲಿ ಮೂಡುತ್ತಿತ್ತು. ವಾಜಪೇಯಿ ಅವರು ದೇಶದೊಡನೆ ಹೆಚ್ಚು ಪ್ರೀತಿ ಹೊಂದಿದ್ದರು. ದೇಶಕ್ಕಾಗಿ
ದುಡಿಯಬೇಕು ಎಂಬ ಮನೋಭಾವ ಅವರದ್ದಾಗಿತ್ತು. ವಿರೋಧ ಪಕ್ಷದಲ್ಲಿದ್ದವರೂ ಕೂಡ ಅವರನ್ನು ಗೌರವದಿಂದಲ್ಲೆ ನೋಡುತ್ತಿದ್ದ ಮಹಾನ್ ನಾಯಕರು.
ಸುಭಾಷ ಕಲ್ಲೂರ, ಮಾಜಿ ಶಾಸಕ