Advertisement

ಹೈಕಮಾಂಡ್ ನಿರ್ಣಯ ಉಲ್ಟಾ ಮಾಡಿಸಿದ ಹೆಮ್ಮೆ ಇದೆ: ದಿಂಗಾಲೇಶ್ವರ ಶ್ರೀ

10:00 PM Aug 17, 2021 | Suhan S |

ಮುದ್ದೇಬಿಹಾಳ: ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಕೆಟ್ಟ ಜಾತಿ ವ್ಯವಸ್ಥೆ ಕೆಲಸ ಮಾಡಿತ್ತು. ಅದರ ವಿರುದ್ಧ ಸ್ವಾಮೀಜಿಗಳೆಲ್ಲ ಒಟ್ಟಾಗಿ ನಿಂತು ಬಿಜೆಪಿ ಹೈಕಮಾಂಡ್ ನಿರ್ಣಯ ಉಲ್ಟಾ ಮಾಡಿಸಿರುವ ಹೆಮ್ಮೆ ನಮಗಿದೆ ಎಂದು ಯಡಿಯೂರಪ್ಪ ಪರ ಮಠಾಧೀಶರನ್ನು ಸಂಘಟಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಮಹಾಸ್ವಾಮೀಜಿಯವರು ಹೇಳಿದರು.

Advertisement

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕುಂಟೋಜಿ ಸಂಸ್ಥಾನ ಹಿರೇಮಠದಲ್ಲಿ ಮಠದ ಮುಖ್ಯಸ್ಥರಾದ ಚನ್ನವೀರ ದೇವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಕೊರೊನಾ ಆಪದ್ಘಾಂಧವರಿಗೆ ಪ್ರಶಸ್ತಿ ಪ್ರದಾನ, ಧರ್ಮ ಸಮನ್ವಯ ಸಮಾರಂಭದಲ್ಲಿ ಅವರು ಮಾತನಾಡಿದರು. ಯಡಿಯೂರಪ್ಪನವರು ರಾಜ್ಯದ ತುಂಬೆಲ್ಲ ಸಂಚರಿಸಿ, ತಮ್ಮ ಜೀವನದ ಸುಧೀರ್ಘ ಆಯುಷ್ಯವನ್ನು ಪಕ್ಷ ಕಟ್ಟಲು ಸವೆಸಿದ್ದರು. ಇಂಥ ವ್ಯಕ್ತಿಗೆ ರಾಜ್ಯವಾಳಲು ಕೆಲವರು ಬಿಡಲಿಲ್ಲ. ಅನ್ಯ ಕಾರ್ಯಕ್ಕೆ ಬೆಂಗಳೂರಿಗೆ ತೆರಳಿದ್ದ ನಮಗೆ ಈ ವಿಷಯ ಗೊತ್ತಾಯ್ತು. ಇದರ ಹಿನ್ನೆಲೆ ಕೆದಕಿದಾಗ ಕೆಟ್ಟ ಜಾತಿ ವ್ಯವಸ್ಥೆ ಯಡಿಯೂರಪ್ಪನವರಿಗೆ ತೊಂದರೆ ಕೊಡ್ತಿರೋದು ಗೊತ್ತಾಯ್ತು. ಈ ನಾಡನ್ನು, ನಮ್ಮ ಸಂಸ್ಕೃತಿಯನ್ನು ಜಾತಿ ಅನ್ನೋ ಶತೃ ನಾಶ ಮಾಡಬಾರದು ಅನ್ನೋ ಕಾರಣಕ್ಕಾಗಿ ನಾವು ಯಡಿಯೂರಪ್ಪನವರ ಪರ ನಿಲ್ಲಬೇಕಾಯಿತು ಎಂದರು.

ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಸೋತಿತು ಅಂತ ನಾವು ಹೇಳೊಲ್ಲ ಆದರೆ ಯಡಿಯೂರಪ್ಪಗೊಂದು ಬೆಲೆ ಕೊಟ್ತು ಅನ್ನೋ ಸಮಾಧಾನ ನಮಗಿದೆ. ಆದರೂ ಇವರಿಗೆ ಆಡಳಿತ ನಡೆಸಲು ಅವಕಾಶ ಕೊಡಲಿಲ್ಲ ಅನ್ನೋ ನೋವೂ ಇದೆ. ಸ್ವಾಮೀಜಿಗಳಿಗೇಕೆ ರಾಜಕೀಯ ಉಸಾಬರಿ ಅಂತ ಅನೇಕರು ಟೀಕಿಸಿದರು. ಆದರೆ ನಮ್ಮ ದೃಷ್ಟಿಯಲ್ಲಿ ಕಾವಿ ಹಾಕಿಕೊಳ್ಳೋದು ಊಟ ಮಾಡಿ ಮಠದಲ್ಲಿ ಮಲಗಲು ಅಲ್ಲ. ನಾಡಿನೊಳಗೆ ನ್ಯಾಯ, ನೀತಿ, ಸಂಸ್ಕೃತಿಯ ಉಳಿವಿಗಾಗಿ ಹೋರಾಡಲು. ಸ್ವಾಮೀಜಿಗಳು ಅನ್ಯಾಯ, ಅಸಂಸ್ಕೃತಿ, ದಾರಿದ್ರ್ಯ, ದುಷ್ಟ ಶಕ್ತಿ ವಿರುದ್ಧ ಹೋರಾಡಬೇಕು. ಅನ್ಯಾಯದ ವಿರುದ್ದ ಸೋಲೊಪ್ಪಿಕೊಳ್ಳಬಾರದು. ಅದನ್ನು ನಾವು ಮಾಡಿದ್ದೇವೆ ಎಂದರು.

ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಇಟಗಿ ಮೇಲಗದ್ದುಗೆ ಭೂಕೈಲಾಸ ಮಠದ ಗುರುಶಾಂತವೀರ ಶಿವಾಚಾರ್ಯರು ಸೇರಿ ಹಲವರು ಇದ್ದರು. ಕೊರೊನಾದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿದ ಡಾ| ಮಹಮ್ಮದ ನಾಯ್ಕೋಡಿ, ಡಾ| ರಾಘವೇಂದ್ರ ಮುರಾಳ, ಸಿದ್ದಲಿಂಗ ದೇವರು, ಅಶೋಕ ನಾಡಗೌಡ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಾಲತವಾಡದ ಸಂಜನಾ ಹಿರೇಮಠಳನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next