Advertisement

ದಿನೇಶ್‌ ಮೇಲೆ ಹುದ್ದೆ ತ್ಯಾಗದ ತೂಗುಗತ್ತಿ!

03:11 AM Jul 05, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್‌ ಪಡೆಯದಿರುವುದರಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮೇಲೂ ಹುದ್ದೆ ಬಿಟ್ಟುಬಿಡುವ ‘ನೈತಿಕತೆಯ ತೂಗುಗತ್ತಿ’ ಎದುರಾಗಿದೆ.

Advertisement

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಹೀನಾಯ ಸೋಲು ಕಂಡ ನಂತರ ರಾಹುಲ್ ಗಾಂಧಿ ಸೋಲಿನ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದರು. ಆದರೆ, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಅವರ ರಾಜೀನಾಮೆಯನ್ನು ಅಂಗೀಕರಿಸದೇ ಅಧ್ಯಕ್ಷರಾಗಿ ಮುಂದುವರಿಯುವಂತೆ ಮನವಿ ಮಾಡಿತ್ತು. ಅಲ್ಲದೇ ರಾಷ್ಟ್ರದ ಎಲ್ಲ ರಾಜ್ಯಗಳ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೂ ರಾಹುಲ್ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಒತ್ತಡವಿ ದ್ದರೂ, ರಾಹುಲ್ ನಿಲುವು ಬದಲಿಸದೇ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ಅವರ ಈ ನಡೆ ರಾಜ್ಯ ಕಾಂಗ್ರೆಸ್‌ ಮೇಲೂ ಪರಿಣಾಮ ಬೀರಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೂ ಪಕ್ಷದ ರಾಜ್ಯಘಟಕದ ಅಧ್ಯಕ್ಷರಾಗಿ ಚುನಾವಣೆ ಎದುರಿಸಿದ್ದಾರೆ. ಅಲ್ಲದೇ ಈ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಕೇವಲ 1 ಸ್ಥಾನ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಗೆಲುವು ಕೂಡ ಅವರ ವೈಯಕ್ತಿಕ ಪರಿಶ್ರಮದ ಮೇಲೆ ಆಗಿದೆ ಎನ್ನುವ ಅಭಿಪ್ರಾಯ ಪಕ್ಷದ ವಲಯದಲ್ಲಿದೆ. ಹೀಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಶೂನ್ಯ ಸಾಧನೆ ಮಾಡಿದೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ನೆರಳು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ 28 ಸ್ಥಾನಗಳಲ್ಲಿ ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಅವುಗಳಲ್ಲಿ 16 ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್‌ಗಳನ್ನು ಸಿದ್ದ ರಾಮಯ್ಯ ತಮ್ಮ ಸೂಚನೆಯಂತೆ ಕೊಡಿಸಿದ್ದರು ಎನ್ನ ಲಾಗಿದೆ. ಅವುಗಳಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲುವು ದಾಗಿ ರಾಹುಲ್ ಎದುರು ಭರವಸೆ ನೀಡಿ ಸಿದ್ದ ರಾಮಯ್ಯ ಟಿಕೆಟ್ ಪಡೆದುಕೊಂಡಿದ್ದರು ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್‌ ಅವರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆಯಂತೆ ನಡೆದುಕೊಂಡಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಎಲ್ಲವೂ ಅವರ ಅಣತಿಯಂತೆಯೇ ನಡೆಯಿತು. ಹೀಗಾಗಿ ಅಧ್ಯಕ್ಷರು ಸ್ವಂತ ಬುದ್ಧಿ ಶಕ್ತಿಯಿಂದ ತೀರ್ಮಾನ ತೆಗೆದುಕೊಂಡಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

Advertisement

ರಾಹುಲ್ ನಡೆ ಮೇಲೆ ನಿರ್ಧಾರ: ರಾಜ್ಯದಲ್ಲಿ ಹೀನಾಯ ಸೋಲು ಕಂಡ ತಕ್ಷಣ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಚ್.ಕೆ. ಪಾಟೀಲ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಬೆನ್ನಲ್ಲೇ ದಿನೇಶ್‌ ಕೂಡ ನೈತಿಕ ಹೊಣೆ ಹೊರುವುದಾಗಿ ಘೋಷಿಸಿದ್ದರು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮುಂದಾಗಿದ್ದರು. ಆದರೆ, ರಾಹುಲ್ ಗಾಂಧಿ ರಾಜೀನಾಮೆ ಹಿಂಪಡೆಯುವಂತೆ ರಾಷ್ಟ್ರ ಮಟ್ಟದಲ್ಲಿ ಒತ್ತಡ ಕೇಳಿ ಬಂದಿದ್ದರಿಂದ ಅವರ ನಿರ್ಧಾರದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತಿದೆ.

ನೈತಿಕತೆಯ ತೂಗುಕತ್ತಿ: ರಾಹುಲ್ ಗಾಂಧಿ ರಾಜೀನಾಮೆ ನೀಡಿ, ಹುದ್ದೆಯಿಂದ ನಿರ್ಗಮಿಸಿದ್ದರಿಂದ ಕೆಪಿಸಿಸಿ ಅಧ್ಯಕ್ಷರೂ ನೈತಿಕ ಹೊಣೆ ಹೊತ್ತು ಸ್ಥಾನ ತ್ಯಾಗ ಮಾಡಬೇಕೆಂಬ ಆಗ್ರಹ ರಾಜ್ಯ ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿದೆ. ಸದ್ಯ ವಿದೇಶ ಪ್ರವಾಸ ಕೈಗೊಂಡಿರುವ ದಿನೇಶ್‌ ಗುಂಡೂರಾವ್‌, ರಾಜ್ಯಕ್ಕೆ ವಾಪಸ್‌ ಬಂದ ಮೇಲೆ ತಾವೂ ನೈತಿಕ ಜವಾಬ್ದಾರಿ ಹೊತ್ತು ಹುದ್ದೆಯಿಂದ ನಿರ್ಗಮಿಸುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಬೇರೆ ರಾಜ್ಯಗಳ ಪಿಸಿಸಿ ಅಧ್ಯಕ್ಷರ ರಾಜೀನಾಮೆ
ಲೋಕಸಭೆ ಚುನಾವಣೆಯಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಒಂದೇ ಸ್ಥಾನ ಪಡೆದಿದೆ. ಇದರ ಪರಿಣಾಮ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಒರಿಸ್ಸಾ, ಛತ್ತೀಸ್‌ಘಡ್‌ ಸೇರಿ ಎಂಟು ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರಾಜ್ಯದ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ದಿನೇಶ್‌ ಗುಂಡೂರಾವ್‌ ಕೂಡ ನೈತಿಕ ಜವಾಬ್ದಾರಿ ಹೊರಬೇಕು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next