Advertisement

ಪುತ್ತೂರು ಎಪಿಎಂಸಿ ಅಧ್ಯಕ್ಷರಾಗಿ ದಿನೇಶ್‌ ಮೆದು

09:10 AM Feb 06, 2019 | |

ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎರಡನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಮಂಗಳವಾರ ನಡೆಯಿತು. ನೂತನ ಅಧ್ಯಕ್ಷರಾಗಿ ದಿನೇಶ್‌ ಮೆದು, ಉಪಾಧ್ಯಕ್ಷರಾಗಿ ಮಂಜುನಾಥ ಎಸ್‌. ಅವಿರೋಧವಾಗಿ ಆಯ್ಕೆಯಾದರು.

Advertisement

13 ನಿರ್ದೇಶಕರನ್ನೊಳಗೊಂಡ ಎಪಿಎಂ ಸಿಯ ಅಧ್ಯಕ್ಷರಾಗಿದ್ದ ಬೂಡಿಯಾರು ರಾಧಾಕೃಷ್ಣ ರೈ ಹಾಗೂ ಉಪಾಧ್ಯಕ್ಷರಾಗಿದ್ದ ಬಾಲಕೃಷ್ಣ ಬಾಣಜಾಲು ಅವರ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಮುಂದಿನ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣ ಪ್ರಕ್ರಿಯೆ ನಡೆಯಿತು. ಪುತ್ತೂರು ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌ ಚುನಾವಣಾ ಧಿಕಾರಿಯಾಗಿದ್ದರು. ಉಪ ತಹಶೀಲ್ದಾರ್‌ ನಾಗೇಶ್‌ ಸಹಕರಿಸಿದರು. ಎರಡೂ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿ, ಅವು ನಿಯಮಾನುಸಾರ ಇದ್ದ ಹಿನ್ನೆಲೆಯಲ್ಲಿ ಸರ್ವ ಸದಸ್ಯರ ಅನುಮೋದನೆಯಂತೆ ಚುನಾವಣಾ ಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಯನ್ನು ಘೋಷಿಸಿದರು.

ಪುತ್ತೂರು ಎಪಿಎಂಸಿಯ ಒಟ್ಟು 13 ಸದಸ್ಯ ಸ್ಥಾನಗಳಲ್ಲಿ 11 ಬಿಜೆಪಿ ಬೆಂಬಲಿತ ಹಾಗೂ ಇಬ್ಬರು ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿ ಬೆಂಬಲಿತ ಮಾಜಿ ಸದಸ್ಯ ಬೂಡಿಯಾರು ರಾಧಾಕೃಷ್ಣ ರೈ, ಬಾಲಕೃಷ್ಣ ಬಾಣಜಾಲು, ಪುಲಸ್ತ್ಯಾ ರೈ, ತ್ರಿವೇಣಿ ಪೆರ್ವೋಡಿ, ಕೃಷ್ಣಕುಮಾರ್‌ ರೈ, ತೀರ್ಥಾನಂದ ದುಗ್ಗಳ, ಕೊರಗಪ್ಪ, ಕುಶಾಲಪ್ಪ ಗೌಡ, ಮೇದಪ್ಪ ಹಾಗೂ ಕಾಂಗ್ರೆಸ್‌ ಬೆಂಬಲಿತ ಕಾರ್ತಿಕ್‌ ರೈ ಬೆಳ್ಳಿಪ್ಪಾಡಿ, ಶಕೂರ್‌ ಉಪಸ್ಥಿತರಿದ್ದರು.

ಅಭಿನಂದನೆ
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌ ಪಕ್ಷದ ಪರವಾಗಿ ಅಭಿನಂದಿಸಿದರು. ಎಪಿಎಂಸಿ ಪರವಾಗಿ ಸದಸ್ಯರಾದ ಪುಲಸ್ತ್ಯಾ ರೈ, ಶಕೂರ್‌ ಅಭಿನಂದಿಸಿ ಮಾತನಾಡಿದರು. ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾರ ಹಾಕಿ ಅಭಿನಂದಿಸಿದರು.

ಪ್ರಾಮಾಣಿಕ ಪ್ರಯತ್ನ
ನೂತನ ಅಧ್ಯಕ್ಷ ದಿನೇಶ್‌ ಮೆದು ಮಾತನಾಡಿ, ಹಿಂದಿನ ಅವಧಿಯಲ್ಲಿ ನೀಡಿದ ಅತ್ಯುತ್ತಮ ಆಡಳಿತವನ್ನು ಮುಂದುವರೆಸುವ ಜವಾಬ್ದಾರಿ ಹೊಂದಿದ್ದೇವೆ. ರೈಲ್ವೇ ಮೇಲ್ಸೇತುವೆ ನಿರ್ಮಾಣದ ಪೂರಕ ಕ್ರಮಗಳನ್ನು ಮಾಡುತ್ತೇವೆ. ಸರಕಾರದಿಂದ ರೈತರಿಗೆ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.

Advertisement

ಮೊದಲ ಬಾರಿಯ ಸದಸ್ಯರು
ದಿನೇಶ್‌ ಮೆದು ತಾ.ಪಂ. ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಉಪಾಧ್ಯಕ್ಷ ಮಂಜುನಾಥ ಎನ್‌.ಎಸ್‌. ನ್ಯಾಯವಾದಿಯಾಗಿ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಪ್ರಥಮ ಬಾರಿಗೆ ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

4.50 ಕೋಟಿ ರೂ. ಕ್ರಿಯಾಯೋಜನೆ
ಕ್ರಿಯಾಯೋಜನೆ ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ಎಪಿಎಂಸಿ ಯಲ್ಲಿ ಇತ್ತೀಚೆಗೆ 4.50 ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳ ಕ್ರಿಯಾಯೋಜನೆ ತಯಾರಿಸಲಾಗಿದೆ. ಎಪಿಎಂಸಿ ಎಂದರೆ ರೈತರ ಪರ, ವರ್ತಕರ ಪರ ಕೆಲಸ ಮಾಡುವ ಸಂಸ್ಥೆ. ವಿಸ್ತರಣೆಯ ದೃಷ್ಟಿ ಯಿಂದ ಪ್ರತ್ಯೇಕ ಯಾರ್ಡ್‌ಗೆ 10 ಎಕ್ರೆ ಜಾಗ ನೋಡಿದ್ದೇವೆ. ರೈಲ್ವೇ ಮೇಲ್ಸೇತುವೆ ರಚನೆಗೆ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡಿದ್ದೇವೆ. ರೈತರಿಗೆ ಅಡಮಾಣ ಸಾಲ 2-3 ಕೋಟಿ ರೂ. ಇರಿಸಿದ್ದು, ದಾಸ್ತಾನಿಗೆ ಮತ್ತಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next