Advertisement

Royal Challengers Bangalore; ಫಿನಿಶಿಂಗ್‌ ಪಾತ್ರದಲ್ಲಿ ಡಿ.ಕೆ. ಮಿಂಚು

11:06 PM Mar 26, 2024 | Team Udayavani |

ಬೆಂಗಳೂರು: “ಇದು ನನ್ನ ಕೊನೆಯ ಐಪಿಎಲ್‌. ಹೀಗಾಗಿ ನಾನು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡುವ ಹಾಗೂ ಫಿನಿಶಿಂಗ್‌ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಯೋಜನೆಯಲ್ಲಿದ್ದೇನೆ’ ಎಂಬುದಾಗಿ ಆರ್‌ಸಿಬಿಯ ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ ಐಪಿಎಲ್‌ ಆರಂಭಕ್ಕೂ ಮೊದಲೇ ಹೇಳಿದ್ದರು. ಮೊದಲೆರಡು ಪಂದ್ಯಗಳಲ್ಲಿ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

Advertisement

ಪಂಜಾಬ್‌ ಎದುರಿನ ಚೇಸಿಂಗ್‌ ವೇಳೆ, ಆರ್‌ಸಿಬಿಗೆ ಕೊನೆಯ 3 ಓವರ್‌ಗಳಲ್ಲಿ 36 ರನ್‌ ತೆಗೆಯುವ ಕಠಿನ ಸವಾಲು ಎದುರಾಗಿತ್ತು. ಈ ಹಂತದಲ್ಲಿ ದಿನೇಶ್‌ ಕಾರ್ತಿಕ್‌ ಜತೆ ಕ್ರೀಸ್‌ನಲ್ಲಿದ್ದವರು ಇಂಪ್ಯಾಕ್ಟ್ ಪ್ಲೇಯರ್‌ ಮಹಿಪಾಲ್‌ ಲೊಮ್ರೋರ್‌. ಇವರು ಯಶ್‌ ದಯಾಳ್‌ ಬದಲು ಆಡಲಿಳಿದಿದ್ದರು.

ಅರ್ಷದೀಪ್‌ ಸಿಂಗ್‌ ಎಸೆದ 18ನೇ ಓವರ್‌ನಲ್ಲಿ ಲೊಮ್ರೋರ್‌ ಒಂದು ಫೋರ್‌, ಒಂದು ಸಿಕ್ಸರ್‌ ಸಿಡಿಸಿ ಲೆಕ್ಕಾಚಾರವನ್ನು ಒಂದಿಷ್ಟು ಸರಳಗೊಳಿಸಿದರು. 2 ಓವರ್‌ಗಳಲ್ಲಿ 23 ರನ್‌ ಬೇಕಾಯಿತು. ಬೌಲರ್‌ ಬೇರೆ ಯಾರೂ ಅಲ್ಲ, ಆರ್‌ಸಿಬಿಯಿಂದ ಬೇರ್ಪಟ್ಟ ಹರ್ಷಲ್‌ ಪಟೇಲ್‌. ಇವರ ಮೇಲೆ ಸವಾರಿ ಮಾಡಿದ ದಿನೇಶ್‌ ಕಾರ್ತಿಕ್‌ ಒಂದು ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದರು. ಅರ್ಷದೀಪ್‌ ಪಾಲಾದ ಕೊನೆಯ ಓವರ್‌ನಲ್ಲಿ 10 ರನ್‌ ಅಗತ್ಯ ಬಿತ್ತು. ಕಾರ್ತಿಕ್‌ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದರು. 2ನೇ ಎಸೆತ ವೈಡ್‌. ಅನಂತರ ಬೌಂಡರಿ ಶಾಟ್‌!

ಹೀಗೆ ಹತ್ತೇ ಎಸೆತಗಳಿಂದ ಅಜೇಯ 28 ರನ್‌ (3 ಬೌಂಡರಿ, 2 ಸಿಕ್ಸರ್‌) ಬಾರಿಸಿದ ದಿನೇಶ್‌ ಕಾರ್ತಿಕ್‌ ಆರ್‌ಸಿಬಿ ಗೆಲುವು ಸಾರಿದರು. ಚೆನ್ನೈ ಎದುರಿನ ಆರಂಭಿಕ ಪಂದ್ಯದಲ್ಲೂ ದಿನೇಶ್‌ ಕಾರ್ತಿಕ್‌ ಮಿಂಚಿನ ಗತಿಯಲ್ಲಿ 38 ರನ್‌ ಬಾರಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು.

2023ರ ಐಪಿಎಲ್‌ನಲ್ಲಿ ದಿನೇಶ್‌ ಕಾರ್ತಿಕ್‌ ತೀರಾ ಕಳಪೆ ನೀಡಿದ್ದರು. ತಂಡಕ್ಕೆ ಅಗತ್ಯವಿದ್ದಾಗಲೆಲ್ಲ ಕೈಕೊಡುತ್ತ ಬಂದಿದ್ದರು. ಹೀಗಾಗಿ ಈ ಬಾರಿ ಇವರ ಮೇಲೆ ಆರ್‌ಸಿಬಿ ಅಭಿಮಾನಿಗಳಿಗೆ ವಿಶೇಷ ನಂಬಿಕೆ ಇರಲಿಲ್ಲ. ಆದರೀಗ ಕಾರ್ತಿಕ್‌ ನಿರೀಕ್ಷೆಗೂ ಮೀರಿದ ಬ್ಯಾಟಿಂಗ್‌ ಮೂಲಕ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಶಕ್ತಿ ತುಂಬುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ.

Advertisement

ವಿದೇಶಿಗರ ವೈಫ‌ಲ್ಯ

ಮೊದಲೆರಡು ಪಂದ್ಯಗಳಲ್ಲಿ ಗಮನಿಸಿದಂತೆ ಆರ್‌ಸಿಬಿಯ ವಿದೇಶಿ ಕ್ರಿಕೆಟಿಗರು ಭಾರೀ ವೈಫ‌ಲ್ಯ ಕಾಣುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ದಿನೇಶ್‌ ಕಾರ್ತಿಕ್‌, ಅನುಜ್‌ ರಾವತ್‌, ಮಹಿಪಾಲ್‌ ಲೊಮ್ರೋರ್‌ ಅವರಂಥ ಕೆಳ ಕ್ರಮಾಂಕದ ಆಟಗಾರರು ರನ್‌ ಗಳಿಸುತ್ತಿರುವುದು ಆರ್‌ಸಿಬಿಯ ಹೆಚ್ಚುಗಾರಿಕೆ ಎನ್ನಬಹುದು.

ಆರ್‌ಸಿಬಿಯ ವಿದೇಶಿ ಕ್ರಿಕೆಟಿಗರ “ಸಾಧನೆ’ಯನ್ನೊಮ್ಮೆ ಗಮನಿಸಿ. ಮೊದಲ ಪಂದ್ಯದಲ್ಲಿ ನಾಯಕ ಫಾ ಡು ಪ್ಲೆಸಿಸ್‌ 35 ರನ್‌ ಮಾಡಿದರೂ ಪಂಜಾಬ್‌ ವಿರುದ್ಧ ಮೂರೇ ರನ್ನಿಗೆ ಆಟ ಮುಗಿಸಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಎರಡೂ ಪಂದ್ಯಗಳಲ್ಲಿ ಠುಸ್‌ ಆಗಿದ್ದಾರೆ. ಚೆನ್ನೈ ವಿರುದ್ಧ ಗೋಲ್ಡನ್‌ ಡಕ್‌ ಸಂಕಟವಾದರೆ, ಪಂಜಾಬ್‌ ವಿರುದ್ಧ ಗಳಿಸಿದ್ದು 3 ರನ್‌ ಮಾತ್ರ.

ತಂಡದ ಪಾಲಿನ ದೊಡ್ಡ ಭರವಸೆಯಾಗಿದ್ದ ಕ್ಯಾಮರಾನ್‌ ಗ್ರೀನ್‌ ಗಳಿಸಿದ್ದು 18 ಮತ್ತು 3 ರನ್‌ ಮಾತ್ರ. ಪಂಜಾಬ್‌ ವಿರುದ್ಧ ಇವರನ್ನು ವನ್‌ಡೌನ್‌ನಲ್ಲಿ ಕಳುಹಿಸಿದ ಪ್ರಯೋಗ ಯಶಸ್ವಿಯಾಗಲಿಲ್ಲ.

ವೆಸ್ಟ್‌ ಇಂಡೀಸ್‌ ವೇಗಿ ಅಲ್ಜಾರಿ ಜೋಸೆಫ್ ಯಾವುದೇ ಪರಿಣಾಮ ಬೀರಿಲ್ಲ. ಜತೆಗೆ ಭಾರೀ ದುಬಾರಿಯೂ ಆಗುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 3.4 ಓವರ್‌ಗಳಿಂದ 38 ರನ್‌ ನೀಡಿ ವಿಕೆಟ್‌ ಲೆಸ್‌ ಎನಿಸಿದರು. ಪಂಜಾಬ್‌ ವಿರುದ್ಧ ಒಂದು ವಿಕೆಟ್‌ ಕೆಡವಲು 43 ರನ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next