ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ಐಪಿಎಲ್ ನಿಂದ ಇತ್ತೀಚೆಗೆ ನಿವೃತ್ತಿ ಹೊಂದಿದ್ದ ದಿನೇಶ್ ಕಾರ್ತಿಕ್ (Dinesh Kartik) ಅವರು ಇದೀಗ ಆರ್ ಸಿಬಿ ತಂಡಕ್ಕೆ ಮತ್ತೆ ಸೇರಿದ್ದಾರೆ. ಈ ಬಾರಿ ಸಹಾಯಕ ಸಿಬ್ಬಂದಿಯಾಗಿ.
39 ವರ್ಷದ ದಿನೇಶ್ ಕಾರ್ತಿಕ್ ಅವರು ಆರ್ ಸಿಬಿ (RCB) ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ಫ್ರಾಂಚೈಸಿಯಲ್ಲಿರುವ ಪ್ರಸ್ತುತ ಆಟಗಾರರಲ್ಲಿ ಕಾರ್ತಿಕ್ ಅವರ ಗುಣಗಳು ಮತ್ತು ಮೌಲ್ಯಗಳನ್ನು ತುಂಬುವ ಉತ್ಸಾಹದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
“ಡಿಕೆ ಅವರನ್ನು ನಮ್ಮ ಕೋಚಿಂಗ್ ಗುಂಪಿಗೆ ಸೇರಿಸಲು ಸಂತಸವಾಗುತ್ತಿದೆ. ಅವರನ್ನು ಮೈದಾನದಲ್ಲಿ ನೋಡಲು ಖುಷಿಯಾಗುತ್ತಿತ್ತು. ಇದೀಗ ಕೋಚ್ ಆಗಿ ಅವರು ಪ್ರಭಾವಿಯಾಗಲಿದ್ದಾರೆ ಎಂದು ನಂಬಿದ್ದೇವೆ. ಅವರ ದೀರ್ಘಕಾಲದ ಆಟ ಮತ್ತು ದಾಖಲೆಗಳು ಕೌಶಲ್ಯವನ್ನು ಸೂಚಿಸುತ್ತದೆ. ಅದೇ ಗುಣಮಟ್ಟದೊಂದಿಗೆ ಅವರ ಮುಂದಿನ ಚಾಪ್ಟರ್ ನಲ್ಲಿ ಕೆಲಸ ಮಾಡುತ್ತಾರೆ” ಎಂದರು.
ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿರುವ ಕಾರ್ತಿಕ್, ಆರ್ ಸಿಬಿ ಪರ 162.96 ರ ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ 53 ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕಗಳನ್ನು ಒಳಗೊಂಡಂತೆ 937 ರನ್ ಗಳಿಸಿದ್ದಾರೆ.