Advertisement
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 166 ರನ್ ಬಾರಿಸಿತ್ತು. ವಿಶ್ವವಿಖ್ಯಾತ ಬ್ಯಾಟ್ಸ್ ಮನ್‌ಗಳನ್ನು ಹೊಂದಿದ್ದ ಭಾರತ ತಂಡಕ್ಕೆ ಇದು ದೊಡ್ಡ ಸವಾಲು ಅಲ್ಲವೇ ಅಲ್ಲ. ಆದರೆ, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಅನುಪಸ್ಥಿತಿಯಲ್ಲಿ ಇದು ಸ್ಪರ್ಧಾತ್ಮಕ ಮೊತ್ತವೇ ಆಗಿತ್ತು. ಇದು ಸಾಲದೆಂಬಂತೆ ಮಧ್ಯಮ ಕ್ರಮಾಂಕದವರು ಬೇಗ ಔಟ್ ಆಗಿದ್ದರು. ಕಡೆಗೆ ಕೊನೆಯ 12 ಎಸೆತಕ್ಕೆ 34 ರನ್ ದಾಖಲಿಸಬೇಕಾದ ಅಗತ್ಯವಿತ್ತು. ಮನೀಶ್ ಪಾಂಡೆ ಔಟ್ ಆಗಿ ದಿನೇಶ್ ಕಾರ್ತಿಕ್ ಕ್ರೀಸ್‌ಗೆ ಬಂದಿದ್ದರು. ಮತ್ತೂಂದೆಡೆ ವಿಜಯ್ ಶಂಕರ್ ಇದ್ದರು. ಕ್ರಿಕೆಟ್‌ನ ರೋಚಕತೆಯ ವಿಶ್ವರೂಪ ದರ್ಶನ ಕಂಡಿದ್ದು ಆಗಲೇ. ಪಂದ್ಯದ ಗೆಲುವು ಅಷ್ಟು ಸುಲಭ ಅಲ್ಲ ಅನ್ನುವ ಹಂತದಲ್ಲಿಯೇ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿ 19ನೇ ಓವರ್‌ನಲ್ಲಿ 22 ರನ್ ಚಚ್ಚಿದರು. ಕೊನೆಯ 6 ಎಸೆತಕ್ಕೆ 12 ರನ್ ಅಗತ್ಯವಿತ್ತು. ಅಂತಿಮವಾಗಿ 1 ಎಸೆತಕ್ಕೆ 5 ರನ್ ಗಳಿಸಬೇಕಾದ ಅಗತ್ಯ ಬಿತ್ತು. ಆಗ ದಶಕದಿಂದ ಕಾರ್ತಿಕ್ ಆಟವನ್ನು ನೋಡಿದ್ದ ಮಂದಿ ಈಗ ಕಾರ್ತಿಕ್ ಅಮ್ಮಮ್ಮ ಅಂದ್ರೆ ಬೌಂಡರಿ ಹೊಡೆಯಬಹುದು. ಅವರಿಂದ ಅಷ್ಟೇ ಸಾಧ್ಯವಾಗೋದು ಎಂದು ನಿರ್ಧರಿಸಿಬಿಟ್ಟಿದ್ದರು. ಆದರೆ ಎಲ್ಲರ ನಿರೀಕ್ಷೆ ಮೀರಿ ಒತ್ತಡವನ್ನು ಮೀರಿನಿಂತ ಕಾರ್ತಿಕ್, ಸಿಕ್ಸರ್ ಎತ್ತುವ ಮೂಲಕ ಭಾರತಕ್ಕೆ ಗೆಲುವು ತಂದರು. ಕೇವಲ 8 ಎಸೆತದಲ್ಲಿ 29 ರನ್ ದಾಖಲಿಸಿದ ಕಾರ್ತಿಕ್ ಆಟದಲ್ಲಿ 2 ಬೌಂಡರಿ, 3 ಸಿಕ್ಸರ್ ಸೇರಿತ್ತು. ಈ ಅಬ್ಬರದ ಆಟದ ಬಳಿಕ ಕಾರ್ತಿಕ್ ಅವರನ್ನು ಇಡೀ ಕ್ರೀಡಾ ಜಗತ್ತು ತಿರುಗಿ ನೋಡುವಂತಾಯಿತು. ಆ ಕೊನೆಯ 2 ಓವರ್‌ಗಳನ್ನು ಅಭಿಮಾನಿಗಳು ಯುಟ್ಯೂಬ್‌ನಲ್ಲಿ ಪುನಃ ಪುನಃ ನೋಡುವಂತೆ ಮಾಡಿತು. ಸಾಮಾಜಿಕ ಜಾಲತಾಣದಲ್ಲಿ ಡಿಕೆ ಹವಾ ವಿಜೃಂಭಿಸಿತು.
ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದು, 2004ರಲ್ಲಿ. ಇದೇ ವರ್ಷದಲ್ಲಿಯೇ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿ ಎಂ.ಎಸ್.ಧೋನಿ ಕೂಡ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಧೋನಿ ಬ್ಯಾಟಿಂಗ್ ಮತ್ತು ಕೀಪಿಂಗ್‌ನಲ್ಲಿ ತೋರಿಸಿದ ಭರ್ಜರಿ ಆಟ ದಿನೇಶ್ ಕಾರ್ತಿಕ್ ಅವರನ್ನು ಭಾರತ ತಂಡ ಕಡೆಗಣಿಸುವಂತೆ ಮಾಡಿತು. ಧೋನಿ ಗಾಯಗೊಂಡಾಗ, ವಿಶ್ರಾಂತಿ ಪಡೆಯುವಾಗ ಮಾತ್ರ ಕಾರ್ತಿಕ್ ಭಾರತ ತಂಡಕ್ಕೆ ಪ್ರವೇಶಿಸುತ್ತಿದ್ದರು. ಆನಂತರ ಕಾರ್ತಿಕ್‌ಗೆ ದೇಶಿ ಪಂದ್ಯಗಳೇ ಗತಿಯಾಗಿತ್ತು. ಹೀಗಾಗಿ ಕಾರ್ತಿಕ್ 14 ವರ್ಷದ ವೃತ್ತಿ ಜೀವನದಲ್ಲಿ ಆಡಿದ್ದು, 23 ಟೆಸ್ಟ್, 79 ಏಕದಿನ, 19 ಟಿ20 ಮಾತ್ರ. ದಶಕಗಳ ಕಾಲ ಕ್ರಿಕೆಟ್ ಆಡಿದರೂ ಸಿಗದ ಜನಪ್ರಿಯತೆಯನ್ನು ಬಾಂಗ್ಲಾ ವಿರುದ್ಧ ಆಡಿದ ಒಂದು ಪಂದ್ಯ ನೀಡಿದೆ. ಭಾರತಕ್ಕೆ ಹೊಸ ಫಿನಿಷರ್
ಮುಖ್ಯವಾಗಿ ಭಾರತ ತಂಡದಲ್ಲಿ ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಂಡವರು ಎಂ.ಎಸ್.ಧೋನಿ, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್. ಭಾರತಕ್ಕೆ ಗೆಲುವು ಸಾಧ್ಯವೇ ಇಲ್ಲ ಅನ್ನುವಂತಹ ಎಷ್ಟೋ ಪಂದ್ಯಗಳಲ್ಲಿ ಧೋನಿ ಮತ್ತು ಯುವರಾಜ್ ಗೆಲುವು ತಂದಿದ್ದಾರೆ. ಕೈಫ್ ಭಾರತ ತಂಡದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಆದರೆ, ಯುವರಾಜ್ ಸಿಂಗ್ ಬಹುಪಾಲು ಯಶಸ್ವಿಯಾಗಿದ್ದಾರೆ. ಈ ಇಬ್ಬರಿಗೆ ಹೋಲಿಸಿದರೆ ಧೋನಿ ಕೈ ಮೇಲಿದೆ. ಇದೀಗ ದಿನೇಶ್ ಕಾರ್ತಿಕ್ ಭಾರತಕ್ಕೆ ಹೊಸ ಫಿನಿಷರ್ ಆಗಿ ಕಾಣಿಸಿಕೊಂಡಿದ್ದಾರೆ.
Related Articles
ಸಾಮಾನ್ಯವಾಗಿ 4, 5 ಮತ್ತು 6ನೇ ಸ್ಥಾನದಲ್ಲಿ ಬರುವ ಬ್ಯಾಟ್ಸ್‌ಮನ್‌ಗಳೇ ಫಿನಿಷರ್ ಸ್ಥಾನ ಪಡೆಯುತ್ತಾರೆ. ಈ ಸ್ಥಾನದಲ್ಲಿ ಅಲ್ಪ ಎಸೆತದಲ್ಲಿ ಗರಿಷ್ಠ ರನ್ ಬಾರಿಸಬೇಕಾಗುತ್ತದೆ. ಪಂದ್ಯಕ್ಕೆ ತಿರುವು ನೀಡಿದರೆ ಹೀರೋ ಆಗಿ ಮೆರೆಯಬಹುದು. ಒಮ್ಮೆ ವೈಫಲ್ಯ ಎದುರಿಸಿದರೆ ಖಳನಾಯಕನಾಗಿ ಮಾಡಿಬಿಡುತ್ತಾರೆ. ಹೀಗಾಗಿ ಈ ಸ್ಥಾನವೇ ಹಗ್ಗದ ಮೇಲಿನ ನಡಿಗೆ ಇದ್ದಂತೆ.
Advertisement
ಧೋನಿ, ಬೆವನ್, ಹಸ್ಸಿ ಗ್ರೇಟ್ ಫಿನಿಷರ್ಕ್ರಿಕೆಟ್ ಜಗತ್ತಿನ ಗ್ರೇಟ್ ಫಿನಿಷರ್‌ಗಳೆಂದರೆ ಎಂ.ಎಸ್.ಧೋನಿ, ಮೈಕಲ್ ಬೆವನ್, ಮೈಕಲ್ ಹಸ್ಸಿ, ಲ್ಯಾನ್ಸ್ ಕ್ಲುಸ್ನರ್, ಎಬಿ ಡಿವಿಲಿಯರ್, ಡೇವಿಡ್ ಮಿಲ್ಲರ್, ಇಯಾನ್ ಮಾರ್ಗನ್, ಜೋಸ್ ಬಟ್ಲರ್…. ಅದರಲ್ಲಿಯೂ ಧೋನಿ, ಬೆವನ್, ಹಸ್ಸಿ ಹೆಸರು ಉನ್ನತಿಯಲ್ಲಿದೆ. ಎಷ್ಟೋ ಬೌಲರ್‌ಗಳನ್ನು ಖಳನಾಯಕರನ್ನಾಗಿ ಮಾಡಿದ ಖ್ಯಾತಿ ಇವರಿಗಿದೆ. ಕಾರ್ತಿಕ್ ಮುಂದಿನ ಸ್ಥಿತಿ ಏನು?
32 ವರ್ಷದ ಕಾರ್ತಿಕ್‌ಗೆ ಭಾರತ ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯುವುದು ಈಗಲೂ ಸುಲಭವಲ್ಲ. ಯಾಕೆಂದರೆ ಒಂದು ಕಡೆ ಧೋನಿ ಮತ್ತೂಂದೆಡೆ ಯುವಕರಾದ ರಿಷಭ್ ಪಂತ್ ಇದ್ದಾರೆ. ಇದೇ ರೀತಿ ಬ್ಯಾಟಿಂಗ್ ಮುಂದುವರಿಸಿದರೆ, ಕೀಪಿಂಗ್ ಅವಕಾಶ ಸಿಗದಿದ್ದರೂ ಬ್ಯಾಟ್ಸ್‌ಮನ್ ಆಗಿ ಸ್ಥಾನ ಉಳಿಸಿಕೊಳ್ಳಬಹುದು. ಆಕಸ್ಮಾತ್ ಇಲ್ಲಿ ಎಡವಿದರೆ ಐಪಿಎಲ್, ರಣಜಿ ಪಂದ್ಯಗಳೇ ಗತಿ. ಮಂಜು ಮಳಗುಳಿ