ಬೆಂಗಳೂರು: ಆರ್‌ಸಿಬಿ ಬ್ಯಾಟರ್, ವಿಕೆಟ್ ಕೀಪರ್, 38 ವರ್ಷದ ದಿನೇಶ್ ಕಾರ್ತಿಕ್, ಐಪಿಎಲ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಕಾರಿನ ಮೇಲೆ ಜಸ್ಟ್ ರಿಟೈರ್ಡ್ ಎಂಬ ಬೋರ್ಡ್ ಹಾಕಿ, ಕಾರ್ತಿಕ್ ಕೈ ಬೀಸುತ್ತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಜಿಯೋ ಸಿನಿಮಾ, ಡಿಕೆ ವಿದಾಯವನ್ನು ಅಧಿಕೃತವಾಗಿ ಘೋಷಿಸಿದೆ.
ಬುಧವಾರ ನಡೆದ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ವಿರುದ್ಧ ಆರ್‌ಸಿಬಿ 4 ವಿಕೆಟ್‌ಗಳ ಸೋಲನುಭವಿಸಿತ್ತು. ಈ ಪಂದ್ಯದೊಂದಿಗೆ ದಿನೇಶ್ ಕಾರ್ತಿಕ್, ಐಪಿಎಲ್ ವೃತ್ತಿ ಬದುಕಿಗೆ ಪೂರ್ಣವಿರಾಮ ಹಾಕಿದ್ದಾರೆ. ಇಲ್ಲಿಗೆ, “ನಿದಹಾಸ್ ಟ್ರೋಫಿ’ ಹೀರೋ ಕಾರ್ತಿಕ್ ಅವರ 16 ವರ್ಷಗಳ ಐಪಿಎಲ್ ವೃತ್ತಿಬದುಕಿಗೆ ತೆರೆ ಬಿದ್ದಿದೆ.
6 ತಂಡಗಳ ಪರ ಆಟ:
ದಿನೇಶ್ ಕಾರ್ತಿಕ್ 257 ಐಪಿಎಲ್ ಪಂದ್ಯಗಳಲ್ಲಿ 22 ಅರ್ಧಶತಕಗಳ ಸಹಿತ 4,842 ರನ್ ಬಾರಿಸಿದ್ದಾರೆ. ಕೋಲ್ಕತಾ, ಡೆಲ್ಲಿ, ಪಂಜಾಬ್, ಗುಜರಾತ್, ಮುಂಬೈ ಮತ್ತು ಆರ್‌ಸಿಬಿ ಸಹಿತ ಒಟ್ಟು 6 ಐಪಿಎಲ್ ತಂಡಗಳ ಪರ ಡಿಕೆ ಬ್ಯಾಟ್ ಬೀಸಿದ್ದಾರೆ. ಎಂ.ಎಸ್.ಧೋನಿ (264 ಪಂದ್ಯ) ಬಳಿಕ ಜಂಟಿ ಅತೀ ಹೆಚ್ಚು ಐಪಿಎಲ್ ಆಡಿರುವ ಆಟಗಾರ ದಿನೇಶ್. ಡಿಕೆ ಮತ್ತು ರೋಹಿತ್ ಶರ್ಮ ಇಬ್ಬರೂ ತಲಾ 257 ಪಂದ್ಯಗಳನ್ನಾಡಿದ್ದಾರೆ.