Advertisement

ಕೆಕೆಆರ್‌ಗೆ ಕಾರ್ತಿಕ್‌ ಕ್ಯಾಪ್ಟನ್‌

06:15 AM Mar 05, 2018 | |

ಕೋಲ್ಕತಾ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ರವಿವಾರ ಕೋಲ್ಕತಾ ಫ್ರಾಂಚೈಸಿ ಈ ಘೋಷಣೆ ಮಾಡಿತು.

Advertisement

ತಂಡದ ನಾಯಕತ್ವದ ರೇಸ್‌ನಲ್ಲಿದ್ದ, 2014ರಿಂದಲೂ ಕೆಕೆಆರ್‌ ಪರ ಆಡುತ್ತಲೇ ಇದ್ದ ರಾಬಿನ್‌ ಉತ್ತಪ್ಪ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

2 ಬಾರಿಯ ಚಾಂಪಿಯನ್‌ ಆಗಿರುವ ಕೆಕೆಆರ್‌ ತಂಡವನ್ನು ಇಷ್ಟು ವರ್ಷಗಳ ಕಾಲ ಗೌತಮ್‌ ಗಂಭೀರ್‌ ಮುನ್ನಡೆಸಿದ್ದರು. ಆದರೆ ಈ ಬಾರಿ ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳಲಿಲ್ಲ. ಬಳಿಕ ಹರಾಜಿನಲ್ಲಿ ಅವರು ಡೆಲ್ಲಿ ಡೇರ್‌ಡೆವಿಲ್ಸ್‌ ಪಾಲಾದರು. ಹೀಗಾಗಿ ಕೆಕೆಆರ್‌ ನೂತನ ನಾಯಕನೊಬ್ಬನನ್ನು ಆರಿಸುವುದು ಅನಿವಾರ್ಯವಾಗಿತ್ತು.

7.4 ಕೋಟಿ ರೂ.ಗೆ ಮಾರಾಟ
32 ಹರೆಯದ ದಿನೇಶ್‌ ಕಾರ್ತಿಕ್‌ ಇತ್ತೀಚಿಗೆ ಟೀಮ್‌ ಇಂಡಿಯಾಕ್ಕೆ ಮರಳಿದ್ದು, ಕಳೆದ ಐಪಿಎಲ್‌ ಹರಾಜಿನಲ್ಲಿ 7.4 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿದ್ದರು. 2017ರಲ್ಲಿ ವರ್ಷ ಗುಜರಾತ್‌ ಲಯನ್ಸ್‌ ಪರ ಆಡಿದ್ದರು. 6ನೇ ಐಪಿಎಲ್‌ ವೇಳೆ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಕಾರ್ತಿಕ್‌, 510 ರನ್‌ ಹಾಗೂ 14 ಕ್ಯಾಚ್‌/ಸ್ಟಂಪಿಂಗ್‌ ಮೂಲಕ ತಂಡದ ಪ್ರಶಸ್ತಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ದಿನೇಶ್‌ ಕಾರ್ತಿಕ್‌ ದೇಶಿ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 2009-10ರ ವಿಜಯ್‌ ಹಜಾರೆ ಟ್ರೋಫಿ ಪ್ರಶಸ್ತಿಯನ್ನು ತಮಿಳುನಾಡು ತಂಡ ಕಾರ್ತಿಕ್‌ ನಾಯಕತ್ವದಲ್ಲೇ ಗೆದ್ದಿತ್ತು. ಕಳೆದ ವರ್ಷ ಇಂಡಿಯಾ ರೆಡ್‌ ತಂಡ ದುಲೀಪ್‌ ಟ್ರೋಫಿ ಗೆಲ್ಲುವಾಗಲೂ ಕಾರ್ತಿಕ್‌ ನಾಯಕತ್ವವಿತ್ತು. ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಟಿಯುಟಿಐ ಪ್ಯಾಟ್ರಿಯಾಟ್ಸ್‌ ತಂಡವನ್ನು ಮುನ್ನಡೆಸಿದ ಅನುಭವವೂ ಕಾರ್ತಿಕ್‌ ಪಾಲಿಗಿದೆ.

Advertisement

“ನನ್ನ ಪಾಲಿನ ಗೌರವ’
“ಕೋಲ್ಕತಾ ನೈಟ್‌ರೈಡರ್ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದೊಂದು ಮಹಾ ಗೌರವ ಎಂದು ಭಾವಿಸಿದ್ದೇನೆ. ಇದು ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಈ ಹೊಸ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ ತಂಡ ಇದಾಗಿದೆ. ಕೆಕೆಆರ್‌ಗಾಗಿ ಹಾಗೂ ಇದರ ಲಕ್ಷಾಂತರ ಮಂದಿ ಅಭಿಮಾನಿಗಳಿಗಾಗಿ ಶ್ರೇಷ್ಠ ನಿರ್ವಹಣೆ ನೀಡುವುದು ನನ್ನ ಗುರಿ…’ ಎಂದು ದಿನೇಶ್‌ ಕಾರ್ತಿಕ್‌ ಪ್ರತಿಕ್ರಿಯಿಸಿದ್ದಾರೆ.
ಕೆಕೆಆರ್‌ ತಂಡದ ಸಹಾಯಕ ಕೋಚ್‌ ಸೈಮನ್‌ ಕ್ಯಾಟಿಚ್‌ ಅವರು ದಿನೇಶ್‌ ಕಾರ್ತಿಕ್‌ ನಾಯಕತ್ವವನ್ನು ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next