ಬೆಂಗಳೂರು: ರಾಷ್ಟ್ರಕವಿ ಕುವೆಂಪು ರೈತನನ್ನು ಉಳುವ ಯೋಗಿಗೆ ಹೋಲಿಸಿದ್ದರು. ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.
ಟ್ವೀಟ್ ಮಾಡಿರುವ ಅವರು, ರೈತನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರ, ಕೇಡುಗಾಲಕ್ಕೆ ಅತಿಯಾದ ಬುದ್ದಿ ಎಂಬಂತೆ ವರ್ತಿಸುತ್ತಿದೆ. ಈ ಸರ್ಕಾರವನ್ನು ರೈತರೆ ಇತಿಹಾಸದ ಪುಟ ಸೇರಿಸಲಿದ್ದಾರೆ ಎಂದರು.
ಇದನ್ನೂ ಓದಿ:ಬಿಜೆಪಿ ಯುವ ಮುಖಂಡರಿಗೆ ಸೋಶಿಯಲ್ ಮೀಡಿಯಾ ಪಾಠ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ
ಅನ್ನದಾತನನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸಿದ ಸರ್ಕಾರ ರೈತ ಪರವಾಗಿರಲು ಎಂದೂ ಸಾಧ್ಯವಿಲ್ಲ. ಕೇಂದ್ರದ ರೈತ ವಿರೋಧಿ ಧೋರಣೆಯಿಂದ ಇಂದು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಮೋದಿಯವರು ಕಾರ್ಪೋರೆಟ್ ಕಂಪೆನಿಗಳ ದಲ್ಲಾಳಿಯಂತೆ ವರ್ತಿಸುವುದು ಬಿಟ್ಟು ಜನನಾಯಕನಂತೆ ವರ್ತಿಸಲಿ ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ದೀರ್ಘಕಾಲ ನಡೆಯುತ್ತಿದೆ ಎಂದರೆ ಅದರ ಗಂಭೀರತೆಯನ್ನು ಅರಿತುಕೊಳ್ಳಬೇಕು. ದಲ್ಲಾಳಿಗಳ ಹೋರಾಟ, ನಕಲಿ ರೈತರ ಹೋರಾಟ,ದೇಶದ್ರೋಹಿಗಳ ಹೋರಾಟ ಎಂದು ಸರ್ಕಾರ ಸುಳ್ಳು ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ. ರೈತರ ಹೋರಾಟ ನಕಲಿಯಾಗಿದ್ದರೆ ಪ್ರಧಾನಿಯವರು ಮಾತುಕತೆಗೆ ಬನ್ನಿ ಎಂದು ಕರೆಯುತ್ತಿರುವುದು ಯಾರನ್ನು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಇದನ್ನೂ ಓದಿ: ಉತ್ತರಾಖಂಡ್ ನಲ್ಲಿ ಹಿಮ ಸ್ಪೋಟ: ಹರಿದ್ವಾರ- ಋಷಿಕೇಶದಲ್ಲಿ ಪ್ರವಾಹ ಭೀತಿ
ಅಹಂಕಾರ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಆದರೆ ಪ್ರಧಾನಿ ಮೋದಿಯವರ ಅಹಂಕಾರ ದೇಶವನ್ನೇ ನಾಶ ಮಾಡುತ್ತಿದೆ. ರೈತರ ಎದುರು ಪ್ರಧಾನಿಯವರ ಅಹಂಕಾರ ಪ್ರದರ್ಶನ ಒಳ್ಳೆಯದಲ್ಲ. ಮೋದಿಯವರು ಅಹಂಕಾರ ಬದಿಗಿಟ್ಟು ರೈತರ ಪಾಲಿಗೆ ಜೀವ ವಿರೋಧಿಯಾದ ಕಾನೂನುಗಳನ್ನು ರದ್ದು ಮಾಡಲಿ. ಕಾರ್ಪೋರೆಟ್ ಕಂಪೆನಿಗಳ ಜೀತದಾಳು ತಾವಲ್ಲ ಎಂದು ಸಾಬೀತು ಪಡಿಸಲಿ ಎಂದು ಹೇಳಿದರು.