ಗೋಕಾಕ: ಪಂ. ದೀನ್‌ದಯಾಳ್ ಉಪಾಧ್ಯಾಯರು ಪ್ರತಿಭೆಯ ಸಮಾಗಮವಾಗಿದ್ದರು ಎಂದು ಯಾದವಾಡ ಜಿಪಂ ಸದಸ್ಯ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಗೋವಿಂದ ಕೊಪ್ಪದ ಹೇಳಿದರು.
ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಮಂಗಳವಾರ ಅರಭಾವಿ ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಪಂ. ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಪಾಧ್ಯಾಯ ಅವರು ಅಪ್ರತಿಮ ದೇಶ ಸೇವಕರಾಗಿದ್ದರೆಂದು ಶ್ಲಾಘಿಸಿದರು. ಪಂ.ದೀನ್ ದಯಾಳರು ಸಾಕಷ್ಟು ಮೇಧಾವಿಯಾಗಿದ್ದರು. ತಮ್ಮ ಅಗಾಧ ಮೇಧಾ ಶಕ್ತಿಯಿಂದ ಸಂಘಟನಾ ಶಕ್ತಿಯಿಂದ ತೆರೆ ಮರೆಯಲ್ಲಿ ನಿಂತು ಸಾವಿರಾರು ನಿಸ್ವಾರ್ಥ ಸೇನಾನಿಗಳನ್ನು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ದೇಶಾದ್ಯಂತ ಹೆಮ್ಮರವಾಗಿ ಬೆಳೆಯಲು ಪಂ. ದೀನ್‌ದಯಾಳ್ ಉಪಾಧ್ಯಾಯರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಭಾರತ ಬಲಿಷ್ಠ ದೇಶವಾಗಲು ಪಂ. ಉಪಾಧ್ಯಾಯ ಅವರು ಆಗಲೇ ಕಾರ್ಯಯೋಜನೆಯನ್ನು ರೂಪಿಸಿದ್ದರು. ಈಗ ದೇಶದ ಪ್ರಜೆಗಳಿಗಾಗಿ ಮೋದಿ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಭಾವಿ ಪಪಂ ಹಿರಿಯ ಸದಸ್ಯ ರಾಯಪ್ಪ ಬಂಡಿವಡ್ಡರ, ಹುಣಶ್ಯಾಳ ಪಿಜಿ ತಾಪಂ ಸದಸ್ಯ ಬಸು ಹುಕ್ಕೇರಿ, ಸುಣಧೋಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಸಿದ್ಧಾಪೂರ, ರಾಜು ಪೂಜೇರಿ, ಮಾರುತಿ ಭಜಂತ್ರಿ, ಡಿಎಸ್‌ಎಸ್ ತಾಲೂಕಾ ಸಂಚಾಲಕ ಲಕ್ಷ್ಮಣ ತೆಳಗಡೆ, ಬಸಪ್ಪ ಬಾರ್ಕಿ, ಗುರುರಾಜ ಪಾಟೀಲ, ನಿಂಗಪ್ಪ ಗೊಡಚಿ, ಮಹಾದೇವ ಹಾರೂಗೇರಿ, ಸಂಗಪ್ಪ ದಡ್ಡಿಮನಿ, ಯುವಮೋರ್ಚಾ ಅಧ್ಯಕ್ಷ ಬಸು ಹಿರೇಮಠ, ಶಂಕರ ಜೋತೆನ್ನವರ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಯುವ ಮುಖಂಡ ನಾಗಪ್ಪ ಶೇಖರಗೋಳ ಅವರು ಭಾರತಮಾತೆ, ಶ್ಯಾಮಪ್ರಸಾದ ಮುಖರ್ಜಿ ಹಾಗೂ ಪಂ.ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ನಿಂಗಪ್ಪ ಕುರಬೇಟ ಸ್ವಾಗತಿಸಿದರು. ಲಕ್ಕಪ್ಪ ಲೋಕುರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.