Advertisement

ದಿನಕರ ಶೆಟ್ಟಿ ಒಕ್ಕಲಿಗರ ಕ್ಷಮೆಯಾಚಿಸಲಿ

02:45 PM Apr 23, 2019 | Team Udayavani |

ಹೊನ್ನಾವರ: ಕುಮುಟಾ ಶಾಸಕ ದಿನಕರ ಶೆಟ್ಟಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕುಟುಂಬದ ವಿರುದ್ಧ ಬಿಜೆಪಿ ಪ್ರಚಾರ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಪಕ್ಷಾತೀತವಾಗಿ ಒಕ್ಕಲಿಗ ಸಮಾಜದ ಮುಖಂಡರು ಖಂಡಿಸಿ ಕ್ಷಮೆಯಾಚಿಸಲು ಆಗ್ರಹಿಸಿದರು.

Advertisement

ಸುದ್ದಿಗೊಷ್ಠಿಯಲ್ಲಿ ಜೆಡಿಎಸ್‌ ಮುಖಂಡ ಗಣಪಯ್ಯ ಗೌಡ ಮಾತನಾಡಿ, ಶಾಸಕ ದಿನಕರ ಶೆಟ್ಟಿ ಶಾಸಕನಲ್ಲದ ಕಾಲದಲ್ಲಿ ಯಾವ ಪಕ್ಷದಿಂದಲೂ ಟಿಕೆಟ್ ಸಿಗದಿದ್ದಾಗ ಜೆಡಿಎಸ್‌ ವರಿಷ್ಠ ದೇವೇಗೌಡರು, ಕುಮಾರಸ್ವಾಮಿ ಪ್ರೋತ್ಸಾಹ, ಸಹಕಾರ ನೀಡಿ ಪಕ್ಷದ ಟಿಕೇಟ್ ನೀಡಿದರಲ್ಲದೇ ಶಾಸಕರನ್ನಾಗಿಸಿದರು. ಅವರ ಋಣದಲ್ಲಿರುವ ದಿನಕರ ಶೆಟ್ಟಿ ಈಗ ಬೇರೆ ಪಕ್ಷಕ್ಕೆ ಹೋಗಿ ಶಾಸಕನಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಪ್ಪಮಕ್ಕಳು ಮೊಮ್ಮಕ್ಕಳಿಗೆ ಪ್ರಧಾನಿ, ಮುಖ್ಯಮಂತ್ರಿ, ಮಕ್ಕಳಿಗೆ ಎಂ.ಪಿ. ಟಿಕೇಟ್ ಬೇಕು ನೀಚ ಬಡ್ಡಿಮಕ್ಕಳು ಎಂದು ನಿಂದಿಸಿದ್ದಾರೆ. ದೇವೇಗೌಡರ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆ. ಇದನ್ನು ಪಕ್ಷಾತೀತವಾಗಿ ಖಂಡಿಸುತ್ತೇವೆ. ಅವರು ತಕ್ಷಣ ಕ್ಷಮೆಯಾಚಿಸಬೇಕು ಇಲ್ಲದೇ ಹೋದರೆ ಜಿಲ್ಲಾಯಾದ್ಯಂತ, ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಅವರಿಗೆ ತಕ್ಕ ಪಾಠ ಕಲಿಸುವ ಕಾರ್ಯ ರೂಪಿಸುತ್ತೇವೆ. ಅದನ್ನು ಅವರು ಎದುರಿಸಬೇಕಾಗುತ್ತದೆ. ಒಕ್ಕಲಿಗರ ಮತದಿಂದಲೇ ಶಾಸಕರಾದ ಇವರು ಈಗ ಇಂತಹ ಹೇಳಿಕೆ ನೀಡಲು ತಲೆ ಸರಿ ಇಲ್ಲದೇ ನೀಡಿರಬೇಕು ಎಂದರು.

ಜಿಪಂ ಮಾಜಿ ಸದಸ್ಯ ಕೃಷ್ಣ ಗೌಡ ಮಾತನಾಡಿ ದೀವಗಿ ಬಿಜೆಪಿ ಪ್ರಚಾರದಲ್ಲಿ ಒಕ್ಕಲಿಗರ ಸವೊರ್ಚ್ಚನಾಯಕ ದೇವೇಗೌಡ ಕುಟುಂಬದವರ ವಿರುದ್ಧ ಹೇಳಿಕೆ ನೀಡಿದ್ದು ಅಕ್ಷಮ್ಯವಾಗಿದೆ. ಅವರು ತಾವು ಯಾವ ಪಕ್ಷದಿಂದ ಬಂದಿದ್ದರು ಎಂದು ಮೊದಲು ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಉದ್ಯಮಿ ಜಿ.ಜಿ. ಶಂಕರ ಮಾತನಾಡಿ ಹಿರಿಯ ಚೇತನ ದೇವೇಗೌಡ ಹಾಗೂ ಕುಟುಂಬದವರಿಗೆ ಹಗುರವಾಗಿ ಮಾತನಾಡಿದ್ದು ಖಂಡಿಸುತ್ತೇವೆ. ಅಧಿಕಾರಕ್ಕೆ ಏರಿದಾಗ ಬೌದ್ಧಿಕ ದೀವಾಳಿಯಾಗಿದ್ದಾರೆ ಎನ್ನುವಂತಾಗಿದೆ. ಸಂಸದ ಅನಂತಕುಮಾರ ಹೆಗಡೆ ಒಕ್ಕಲಿಗರನ್ನು ಪುಟಿಗೋಸಿ ಎಂದು ನಿಂದಿಸುತ್ತಿದ್ದಾರೆ. ಈಗ ಅವರ ಶಿಷ್ಯ ದಿನಕರ ಒಕ್ಕಲಿಗರನ್ನು ಕೀಳುಮಟ್ಟದಿಂದ ನಿಂದಿಸುತ್ತಿರುವುದು ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ. ಒಕ್ಕಲಿಗರಿಲ್ಲದೇ ಅವರು ಹೇಗೆ ಶಾಸಕರಾಗುತ್ತಾರೆ ಎಂದು ನೋಡುತ್ತೇವೆ ಅವರಿಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಸವಾಲು ಹಾಕಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಸುಬ್ರಾಯ ಗೌಡ ಮಾತನಾಡಿ ಹಿಂದೆ ಎರಡು ಬಾರಿ ಚುನಾವಣೆ ಸೋತಿದ್ದರು. ಮೊದಲ ಬಾರಿ ಜೆಡಿಎಸ್‌ನಿಂದ ಶಾಸಕರಾಗಿ ಈಗ ಕೋಮುವಾದಿ ಪಕ್ಷಕ್ಕೆ ಹೋಗಿ ಇಂತಹ ನೀಚ ಹೇಳಿಕೆ ನೀಡುತ್ತಿದ್ದಾರೆ ಎಂದರು.

Advertisement

ಜೆಡಿಎಸ್‌ ರಾಜ್ಯ ಪ್ರಧಾನಿ ಕಾರ್ಯದರ್ಶಿ ಜಿ.ಎನ್‌. ಗೌಡ ಮಾತನಾಡಿ ದೇವೇಗೌಡ ಕುಟುಂಬದ ಕುರಿತು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ನೋಡಿ ಇವರಿಗೆ ಮತಿಭ್ರಮಣೆ ಆಗಿರಬೇಕು ಅನಿಸುತ್ತದೆ ಎಂದರು.

ಸಮಾಜದ ಹಿರಿಯ ಮುಖಂಡ ಜಿ.ಕೆ ಪಟಗಾರ ಮಾತನಾಡಿ ದಿನಕರ ಶೆಟ್ಟಿ ಊಂಡ ಮನೆಗೆ ಗಾಳ ಎಣಿಸುವವರು. ಒಕ್ಕಲಿಗರ ಬಲ ಏನೆಂದು ಇವರಿಗೆ ಕಾಲ ಬಂದಾಗ ತೋರಿಸುತ್ತೇವೆ ಎಂದು ಗುಡುಗಿದರು.

ತಾ.ಪಂ. ಸದಸ್ಯ ಗಣಪಯ್ಯ ಗೌಡ ಮಾತನಾಡಿ ಅನಂತಕುಮಾರ್‌ ಹೆಗಡೆ ಪುಟಗೋಸಿ ಎಂದು ಟೀಕಿಸಿದ್ದಾರೆ. ಅವರು ದೊಡ್ಡವರು ಎಂದು ನಾವು ಹೆದರಿ ಕುಳಿತಿಲ್ಲ. ಒಕ್ಕಲಿಗರು ಕೈ ಸತ್ತವರಲ್ಲ ಕ್ರಾಂತಿಗೂ ಹಿಂದೆ ಮುಂದೆ ನೋಡುವವರಲ್ಲ. ಇವರ ಪಕ್ಷದಲ್ಲಿ ವಯಸ್ಸಾದ ನಾಯಕರಿಲ್ಲವೇ ಎಂದು ಪ್ರಶ್ನಿಸಿದರು.

ಒಕ್ಕಲಿಗ ತಾಲೂಕಾಧ್ಯಕ್ಷ ತಿಮ್ಮಪ್ಪ ಗೌಡ ಮಾತನಾಡಿ ಒಕ್ಕಲಿಗರು ಎಲ್ಲರೊಂದಿಗೆ ಸೌಜನ್ಯದಿಂದ ಬದುಕುತ್ತಿದ್ದಾರೆ. ಒಕ್ಕಲಿಗರು ದಂಗೆ ಏಳುವ ಮೊದಲು ಕ್ಷಮೆ ಯಾಚಿಸುವುದು ಒಳಿತು ಎಂದು ಎಚ್ಚರಿಸಿದರು.

ಸಮುದಾಯದ ಮುಖಂಡರಾದ ಭಾಸ್ಕರ ಪಟಗಾರ, ಕೆ.ಎಸ್‌. ಗೌಡ, ಗಿರಿ ಗೌಡ, ದತ್ತು ಪಟಗಾರ, ನಾಣ್ಣಪ್ಪ ಗೌಡ, ರಾಘು ಪಟಗಾರ, ಅಶೋಕ ಗೌಡ, ತಿಮ್ಮಪ್ಪ ಗೌಡ, ಸುಬ್ರಾಯ ಗೌಡ ಪಡುಕುಳಿ, ಗೋವಿಂದ ಗೌಡ ಗುಣಮಂತೆ, ಮಾಜಿ ಸೈನಿಕ ತಿಮ್ಮಪ್ಪ ಗೌಡ, ನಿಲಪ್ಪ ಗೌಡ, ಮಂಜು ಗೌಡ, ಇತರ ನೂರಾರು ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next