Advertisement

ಕಳೆಗುಂದುತ್ತಿರುವ ಪ್ರಸಿದ್ಧ ಭೀಷ್ಮ ಕೆರೆ!

05:29 PM Nov 23, 2018 | Team Udayavani |

ಗದಗ: ದಿನದಿಂದ ದಿನಕ್ಕೆ ಐತಿಹಾಸಿಕ ಹಾಗೂ ನಗರದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದ ಭೀಷ್ಮಕೆರೆ ಇದೀಗ ಡೆತ್‌ ಸ್ಪಾಟ್‌ ಆಗಿ ಗುರುತಿಸಿಕೊಳ್ಳುತ್ತಿದೆ. ಅದರೊಂದಿಗೆ ಮೂಲ ಸೌಕರ್ಯ ಕೊರತೆಯಿಂದ ಕಳೆಗುಂದುತ್ತಿದೆ.

Advertisement

ಸುಮಾರು 123 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಐತಿಹಾಸಿಕ ಭೀಷ್ಮಕೆರೆಯಲ್ಲಿ 111 ಅಡಿ ಎತ್ತರದ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ, ಉದ್ಯಾನ ಅಭಿವೃದ್ಧಿ, ಭೀಷ್ಮಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸಿ, ದೋಣಿ ವಿಹಾರ ಆರಂಭಿಸಿದ್ದರಿಂದ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿತ್ತು.

ಪ್ರತಿ ನಿತ್ಯ ಸಂಜೆಯಾಗುತ್ತಿದ್ದಂತೆ ಭೀಷ್ಮಕೆರೆಯ ಸುತ್ತಲಿನ ಪ್ರದೇಶದಲ್ಲಿ ಜನಸಂದಣಿ ಹೆಚ್ಚುತ್ತಿತ್ತು. ರವಿವಾರ, ರಜಾ ದಿನಗಳಲ್ಲಂತೂ ದಿನವಿಡೀ ಜನಸಂದಣಿಯಿಂದ ಕೂಡಿರುತ್ತಿತ್ತು. ರಜಾ ದಿನಗಳಲ್ಲಿ ಕೆಲವರು ಮಧ್ಯಾಹ್ನದ ಊಟದ ಡಬ್ಬಿಯೊಂದಿಗೆ ಕುಟುಂಬ ಸಮೇತರಾಗಿ ಆಗಮಿಸಿ, ದಿನವಿಡೀ ಭೀಷ್ಮಕೆರೆ ಭಾಗದಲ್ಲೇ ಕಾಲ ಕಳೆಯುತ್ತಿದ್ದರು. ಇದರಿಂದಾಗಿ ಅನೇಕರಿಗೆ ಇದು ಪಿಕ್‌ನಿಕ್‌ ಸ್ಪಾಟ್‌ ಆಗಿತ್ತು.

ಅಂದು ಪಿಕ್ನಿಕ್‌, ಈಗ ಡೆತ್‌ ಸ್ಪಾಟ್‌!: ಅವಳಿ ನಗರ ಸೇರಿದಂತೆ ಈ ಭಾಗದ ಜನರಿಗೆ ಉತ್ತಮ ಪ್ರವಾಸಿ ತಾಣವಾಗಿದ್ದ ಭೀಷ್ಮಕೆರೆ ಇದೀಗ ಡೆತ್‌ ಸ್ಪಾಟ್‌ ಆಗಿ ಮಾರ್ಪಟ್ಟಿದೆ. ಕಳೆದ ಮೂರು ತಿಂಗಳಲ್ಲಿ ಭೀಷ್ಮ ಕೆರೆಯಲ್ಲಿ ಬಿದ್ದು ನಾಲ್ವರು ಸತ್ತಿದ್ದಾರೆ. ಈ ಪೈಕಿ ಖಾಲತೋಟದ ಇಬ್ಬರು ವಿದ್ಯಾರ್ಥಿಗಳು ಈಜಲು ತೆರಳಿ ನೀರು ಪಾಲಾಗಿದ್ದರೆ, ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇತ್ತೀಚೆಗಷ್ಟೇ ಮತ್ತೋರ್ವ ಮಹಿಳೆ ಶವ ಪತ್ತೆಯಾಗಿತ್ತು. 

ಮೇಲಿಂದ ಮೇಲೆ ಮರುಕಳಿಸುತ್ತಿರುವ ಅಹಿತಕರ ಘಟನೆಗಳಿಂದ ಜನರು, ಭೀಷ್ಮ ಕೆರೆಯತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಡುವಿನ ವೇಳೆ ಕಾಲ ಕಳೆಯುತ್ತಿದ್ದ ಯುವ ಜೋಡಿಗಳು, ಶಾಲಾ- ಕಾಲೇಜಿನ ವಿದ್ಯಾರ್ಥಿಗಳೂ ಇತ್ತ ಸುಳಿಯುತ್ತಿಲ್ಲ. ಹೀಗಾಗಿ ಜನರಿಲ್ಲದೇ ಬಿಕೋ ಎನ್ನುತ್ತಿದೆ.

Advertisement

ಮೂಲ ಸೌಕರ್ಯ ಕೊರತೆ: ಇನ್ನು, ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲು ಮೂಲ ಸೌಕರ್ಯಗಳ ಕೊರತೆಯೂ ಪ್ರಮುಖ ಕಾರಣವಾಗಿದೆ. ಕೆರೆ ಆವರಣ, ಸಮೀಪದ ಹಳೇ ಡಿಸಿ ಕಚೇರಿ ಸರ್ಕಲ್‌ ಸೇರಿದಂತೆ ಈ ಭಾಗದಲ್ಲಿ ಎಲ್ಲೂ ಸುಲಭ ಶೌಚಾಲಯಗಳಿಲ್ಲ. ಉದ್ಯಾನದ ಬಳಿ ಇರಿಸಿದ್ದ ಸಂಚಾರಿ ಶೌಚಾಲಯವನ್ನು ಶುಚಿಗೊಳಿಸಲು ಕೊಂಡೊಯ್ದ ನಗರಸಭೆ ಸಿಬ್ಬಂದಿ, ತಿಂಗಳುಗಳೇ ಕಳೆದರೂ ಮರಳಿ ತಂದಿಲ್ಲ. ಉದ್ಯಾನದ ಹಿಂಭಾಗದಲ್ಲಿದ್ದ ಮುಳ್ಳಿನ ಪೊದೆಯನ್ನೂ ಸ್ವತ್ಛಗೊಳಿಸಿದ್ದರಿಂದ ಜನರು ನಿಸರ್ಗಬಾಧೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ.

ಉದ್ಯಾನದಲ್ಲಿ ಹುಲ್ಲು ಕತ್ತರಿಸುವ ಯಂತ್ರ ಹದಗೆಟ್ಟು ತಿಂಗಳು ಕಳೆಯುತ್ತಿದ್ದರೂ, ದುರಸ್ತಿಯಾಗಿಲ್ಲ. ಪರಿಣಾಮ 2 ಅಡಿಯಷ್ಟು
ಹುಲ್ಲು ಬೆಳೆದು ನಿಂತಿದ್ದು, ವಿಷ ಜಂತುಗಳ ಕಾಟ ಶುರುವಾಗಿದೆ. ಜನರ ಹಿತದೃಷ್ಟಿಯಿಂದ ಉದ್ಯಾನದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಶುದ್ಧ ನೀರಿನ ಘಟಕ ಅಪೂರ್ಣಕ್ಕೆ ಸ್ಥಗಿತಗೊಂಡಿದ್ದು, ಸ್ಥಳೀಯ ಸಿಬ್ಬಂದಿ ಸೇರಿದಂತೆ ಜನರು ಹನಿ ನೀರಿಗೂ ಪರದಾಡುವಂತಾಗಿದೆ.

ದೋಣಿ ವಿಹಾರಕ್ಕೂ ಬರ
ನಗರದಲ್ಲಿ ಅಂತರ್ಜಲ ಹೆಚ್ಚಿಸಲು ಭೀಷ್ಮ ಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸಲಾಗುತ್ತಿದ್ದು, ಪ್ರವಾಸಿಗರನ್ನು ಸೆಳೆಯಲು
ದೋಣಿ ವಿಹಾರ ಆರಂಭಿಸಲಾಗಿದೆ. ಆದರೆ, ಇತ್ತೀಚಿನ ಅಹಿತಕರ ಘಟನೆಗಳಿಂದ ದೋಣಿ ವಿಹಾರಕ್ಕೆ ಸಾರ್ವಜನಿಕರ ಬರ
ಎದುರಾಗುತ್ತಿದೆ. ಈ ಹಿಂದೆ ಸಾಮಾನ್ಯ ದಿನಗಳಲ್ಲೇ 300 ಜನರ ಟಿಕೆಟ್‌ ಮಾರಾಟಗೊಳ್ಳುತ್ತಿದ್ದು, ಈಗ ರವಿವಾರವೂ 40-50
ಟಿಕೆಟ್‌ ಖರ್ಚಾಗುತ್ತಿಲ್ಲ. ಭೀಷ್ಮ ಕೆರೆಯಲ್ಲಿರುವ 10 ಬೋಟ್‌ಗಳಲ್ಲಿ 2 ಮೋಟರ್‌ ಬೋಟ್‌ ಸೇರಿ 5 ಬೋಟ್‌ಗಳು ದುರಸ್ತಿಯಲ್ಲಿವೆ
ಎಂಬುದು ಸ್ಥಳೀಯ ಸಿಬ್ಬಂದಿ ಮಾತು.

ಕೆಟ್ಟು ನಿಂತ ಕಾರಂಜಿ
ನಗರಭೆಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಸಿಂಹದ ಕೆರೆಯಲ್ಲಿ ಅಳವಡಿಸಿದ್ದ 70 ಅಡಿ ನೀರು ಚಿಮ್ಮುವ ಕಾರಂಜಿ ಹಲವು ತಿಂಗಳಿಂದ ಕೆಟ್ಟು ನಿಂತಿದೆ. ಬಾನೆತ್ತರಕ್ಕೆ ಚಿಮ್ಮುವ ಕಾರಂಜಿ, ತುಂಗಭದ್ರೆ ಮಡಿಕೆಯಿಂದ ನೀರು ಹರಿಸುವ ಪುತ್ಥಳಿಗಳು ಭೀಷ್ಮ ಕೆರೆಯ ಸೊಬಗನ್ನು ಇಮ್ಮಡಿಗೊಳಿಸುತ್ತಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ನೀರು ಹರಿಸುವಿಕೆ ಸ್ಥಗಿತಗೊಳಿಸಲಾಗಿದೆ.

ಇತ್ತೀಚೆಗೆ ಉದ್ಯಾನದಲ್ಲಿ ಜನರಿಲ್ಲದೇ ಭಣಗುಡುತ್ತಿರುತ್ತದೆ. ಕೆರೆ ಸುತ್ತಲೂ ತಂತಿ ಬೇಲಿ ಅಳವಡಿಸುವುದರೊಂದಿಗೆ ರಾತ್ರಿ ವೇಳೆ
ಪೊಲೀಸರ ಗಸ್ತು ಹೆಚ್ಚಿಸಬೇಕು. ಈ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. 
 ವಿಶ್ವನಾಥ ಖಾನಾಪುರ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ.

ಕೆರೆಯಲ್ಲಿ ನೀರಿನ ಪ್ರಮಾಣ ಇತ್ತೀಚೆಗೆ ಹೆಚ್ಚಳವಾಗಿದ್ದರಿಂದ ನಾನಾ ಕಾರಣಗಳಿಂದಾಗಿ ಸುಮಾರು ನಾಲ್ವರು ಕೆರೆಯಲ್ಲಿ ಬಿದ್ದು
ತೀರಿಕೊಂಡಿರುವುದು ಗಮನಕ್ಕೂ ಬಂದಿದೆ. ಕೆರೆಯ ಸುತ್ತ ತಂತಿ ಬೇಲಿ ಅಳವಡಿಕೆಗೆ ಸಂಬಂಧಿಸಿ ಸಮೀಕ್ಷೆ ನಡೆಸಿ, ವಾರದೊಳಗೆ ಜಿಲ್ಲಾಧಿಕಾರಿ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗುವುದು.
 ಡಾ.ಶರಣು ಗೋಗೇರಿ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ.

ಉದ್ಯಾನದ ಬಳಿ ಶೌಚಾಲಯಗಳಿಲ್ಲದೇ, ಮಹಿಳೆಯರ ಪಡಿಪಾಟಿಲು ಹೇಳಲಾಗದು. ನಮಗಾಗಿ ತಂದುಕೊಳ್ಳುವ ಒಂದು ಕ್ಯಾನ್‌ ನೀರಿನಲ್ಲೇ ಜನರಿಗೂ ಕೊಡುತ್ತೇವೆ. ಉದ್ಯಾನಕ್ಕೆ ಎಲ್ಲ ಅಧಿಕಾರಿಗಳು ಬರ್ತಾರೆ. ಯಾರು ಇದರ ಬಗ್ಗೆ ಗಮನ ಹರಿಸಲ್ಲ.
ಹೆಸರು ಹೇಳಲಿಚ್ಛಿಸದ ಉದ್ಯಾನ ಮಹಿಳಾ ಸಿಬ್ಬಂದಿ.

Advertisement

Udayavani is now on Telegram. Click here to join our channel and stay updated with the latest news.

Next