ಹೊಸದಿಲ್ಲಿ: ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯಲಿರುವ ಎಫ್ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಾವಳಿಗಾಗಿ ನಡೆಸಲಾಗುವ 2 ವಾರಗಳ ರಾಷ್ಟ್ರೀಯ ಶಿಬಿರಕ್ಕಾಗಿ ಶನಿವಾರ 32 ಸದಸ್ಯರ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಸ್ಟ್ರೈಕರ್ ದಿಲ್‌ಪ್ರೀತ್ ಸಿಂಗ್ ಸ್ಥಾನ ಪಡೆದಿದ್ದಾರೆ.
ದಿಲ್‌ಪ್ರೀತ್ ಸಿಂಗ್ 2018ರ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಕೊನೆಯ ಸಲ ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಸುಲ್ತಾನ್ ಆಫ್ ಜೋಹರ್ ಕಪ್ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.
32 ಸದಸ್ಯರ ತಂಡದಲ್ಲಿ ಯುವ ಹಾಕಿಪಟುಗಳ ಸಂಖ್ಯೆ ಸಾಕಷ್ಟಿದೆ. ಶೈಲೇಂದ್ರ ಲಾಕ್ರಾ, ರಾಜ್‌ಕುಮಾರ್ ಪಾಲ್, ನೀಲಂ ಸಂಜೀಪ್ ಕ್ಸೆಸ್, ದಿಪ್ಸನ್ ಟಿರ್ಕಿ ಇವರಲ್ಲಿ ಪ್ರಮುಖರು.
“ಕ್ರಿಸ್‌ಮಸ್ ಬ್ರೇಕ್ ಬಳಿಕ ಎಲ್ಲ ಆಟಗಾರರೂ ಫ್ರೆಶ್ ಆಗಿ ಶಿಬಿರಕ್ಕೆ ಬರುವ ವಿಶ್ವಾಸವಿದೆ. ಭುವನೇಶ್ವರದಲ್ಲಿ ನಡೆದ ಕಳೆದ ಶಿಬಿರದಲ್ಲಿ ಮಾನಸಿಕ ದೃಢತೆಗೆ ಆದ್ಯತೆ ನೀಡಲಾಗಿತ್ತು. ಈ ಬಾರಿ ಸಾಮರ್ಥ್ಯ ಮತ್ತು ಕ್ಷಮತೆ ವೃದ್ಧಿಗೆ ಗಮನ ನೀಡಲಾಗುವುದು’ ಎಂದು ಪ್ರಧಾನ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.
ಭಾರತ ಜ. 18 ಮತ್ತು 19ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ಹಾಕಿ ಪ್ರೊ ಲೀಗ್‌ಗೆ ಪದಾರ್ಪಣೆ ಮಾಡಲಿದೆ.