ಮುಂಬೈ : ಮಹಾರಾಷ್ಟ್ರದ ನೂತನ ಗೃಹ ಸಚಿವರಾಗಿ ಎನ್‍ಸಿಪಿ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆ ಇಂದು ಅನಿಲ್ ದೇಶಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಈ ಸ್ಥಾನಕ್ಕೆ ಇದೀಗ ದಿಲೀಪ್ ವಾಲ್ಸೆ ಪಾಟೀಲ್ ಹೆಸರು ಕೇಳಿ ಬಂದಿದ್ದು, ನೂತನ ಗೃಹ ಸಚಿವರಾಗಿ ನೇಮಕವಾಗಲಿದ್ದಾರೆ.
ಎನ್‍ಸಿಪಿಯ ಮುಖ್ಯಸ್ಥ ಶರದ್ ಪವಾರ್ ಅವರ ಪಿಎ ಆಗಿ ರಾಜಕೀಯ ಜೀವನ ಪ್ರಾರಂಭಿಸಿದ ದಿಲೀಪ್, ಏಳು ಬಾರಿ ಎಂಎಲ್‍ಎ ಆಗಿ ಚುನಾಯಿತಗೊಂಡಿದ್ದಾರೆ. ಅಂಬೆಗಾಂವ್ ವಿಧಾನ ಸಭಾ ಕ್ಷೇತ್ರದ ಎಂಎಲ್‍ಎ ಆಗಿರುವ ಇವರು, ಪ್ರಸ್ತುತ ಅಬಕಾರಿ ಹಾಗೂ ಕಾರ್ಮಿಕ ಇಲಾಖೆಯ ಸಚಿವರಾಗಿದ್ದಾರೆ.ಇದೀಗ ಗೃಹ ಸಚಿವರ ಸ್ಥಾನಕ್ಕೆ ನೇಮಕಗೊಳ್ಳಲಿದ್ದಾರೆ.
ಈಗಾಗಲೇ ರಾಜ್ಯ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಅಬಕಾರಿ ಸಚಿವ ಖಾತೆ ನೀಡಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ. ಹಾಗೂ ಕಾರ್ಮಿಕ ಸಚಿವಾಲಯದ ಖಾತೆಯನ್ನು ಹಸನ್ ಮುಶ್ರಿಫ್ ಅವರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.
ಇನ್ನು ಇಂದು ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಬೆಳವಣೆಗೆ ಪ್ರಕಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ದೇಶಮುಖ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಮತ್ತು ಪಾಟೀಲ್ ಅವರನ್ನು ಹೊಸ ಗೃಹ ಸಚಿವರನ್ನಾಗಿ ನೇಮಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಾಟೀಲ್ ರಾಜಕೀಯ ಜೀವನ :
ದಿಲೀಪ್ ಅವರು 1990ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲವು ಪಡೆದರು. 1991 ರಲ್ಲಿ ಕಾಂಗ್ರೆಸ್ ತೊರೆದು ಎನ್‍ಸಿಪಿ ಜೊತೆ ಕೈ ಜೋಡಿಸಿದರು. ಕಾನೂನು ಪದವಿ ಪಡೆದಿರುವ ದಿಲೀಪ್ ಅವರು ಮಹಾರಾಷ್ಟ್ರ ವಿಧಾನ ಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.