ಸಂತೆಮರಹಳ್ಳಿ: ಕಳೆದ ಕೆಲವು ದಿನಗಳಿಂದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದ ಕಮರಿ ಮೇಲಿರುವ ದೇಗುಲಕ್ಕೆ ತೆರಳುವ ಮೆಟ್ಟಿಲುಗಳು ಸಂಪೂರ್ಣ ಶಿಥಿಲಗೊಂಡಿದ್ದು ಇಲ್ಲಿನ ಸಿಬ್ಬಂದಿಗಳೇ ಇದರ ದುರಸ್ತಿಗೆ ಮುಂದಾಗಿ ಭಕ್ತ ರಿಗೆ ಆಗುವ ತೊಂದರೆ ತಪ್ಪಿಸಿದ್ದಾರೆ.
ಮಣ್ಣಿನಲ್ಲಿ ಮುಚ್ಚಿ ಹೋಗಿರುವ ಮೆಟ್ಟಿಲು: ದೇಗುಲಕ್ಕೆ ತೆರಳಲು ಇರುವ ನೂರಾರು ಮೆಟ್ಟಿಲುಗಳ ಪೈಕಿ ಹಲವು ಈಗಾಗಲೇ ಕೆಲವು ಶಿಥಿಲಗೊಂಡಿವೆ. ಕೆಲವು ಕಲ್ಲು ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಅಲ್ಲದೆ ಇತ್ತೀ ಚೆಗೆ ಸುರಿದ ಮಳೆಯಿಂದ ಮೆಟ್ಟಿಲುಗಳೇ ಕಾಣುತ್ತಿರಲಿಲ್ಲ. ಹಾಗಾಗಿ ಮೆಟ್ಟಿಲುಗಳ ಮೂಲಕ ದೇಗುಲವೇರಿ ಬರುವ ಭಕ್ತರು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು.
ತಾತ್ಕಲಿಕ ಪರಿಹಾರ: ಮಣ್ಣಿನಿಂದ ಕೂಡಿದ ಮೆಟ್ಟಿಲುಗಳ ಮೇಲೆ ಜಾರಿ ಬೀಳುವ ಅಪಾಯವೂ ಇತ್ತು. ಇದನ್ನು ಗಮನಿಸಿದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ನೌಕರರ ಸಂಘದ ಸದಸ್ಯರು ಇದರ ದುರಸ್ತಿಗೆ ಮುಂದಾದರು. ಮೆಟ್ಟಿಲ ಮೇಲಿನ ಮಣ್ಣನ್ನು ತೆರವುಗೊಳಿಸಿ. ಅಡ್ಡಾದಿಡ್ಡಿಯಾಗಿದ್ದ ಮೆಟ್ಟಿಲುಗಳ ಕಲ್ಲನ್ನು ಸರಿಪಡಿಸುವ ಮೂಲಕ ಇದಕ್ಕೆ ತಾತ್ಕಲಿಕ ಪರಿಹಾರವನ್ನು ಹುಡುಕಿಕೊಂಡರು.
ದೇಗುಲಕ್ಕೆ ತೆರಳಲು ತೊಂದರೆಯಾಗಲ್ಲ: ಈ ಬಗ್ಗೆ
“ಉದಯವಾಣಿ’ಯೊಂದಿಗೆ ಸಂಘದ ಅಧ್ಯಕ್ಷ ಬಿ.ಆರ್. ರಂಗನಾಥ ಮಾತನಾಡಿ, ದೇಗುಲಕ್ಕೆ ಸಾರ್ವಜನಿಕರು, ಭಕ್ತರು ತೆರಳಲು ತುಂಬಾ ತೊಂದರೆಯಾಗುತ್ತಿತ್ತು. ರಾಜಗೋಪುರ ನಿರ್ಮಾಣದ ಸಂದರ್ಭದಲ್ಲಿ ಮೆಟ್ಟಿಲುಗಳ ಕಲ್ಲುಗಳ ಮೇಲೆ ಮಣ್ಣು ಸುರಿಯಲಾಗಿತ್ತು. ಮಣ್ಣು, ಕಲ್ಲು ಶೇಖರಣೆಗೊಂಡಿತ್ತು. ಅಲ್ಲದೆ ಮಳೆಯಿಂದ ಇದರ ಮೇಲೆ ಹುಲ್ಲು ಬೆಳೆದಿತ್ತು. ಹಾಗಾಗಿ ಭಕ್ತರು ಮೇಲೆ ಹತ್ತುವ ಸಂದರ್ಭದಲ್ಲಿ ಅನೇಕರು ಜಾರಿ ಬಿದ್ದಿದ್ದರು. ಹಾಗಾಗಿ ಇದನ್ನು ದುರಸ್ತಿಗೊಳಿಸಲು ನಮ್ಮ ಸಂಘದ ಸದಸ್ಯರು ತೀರ್ಮಾನಿಸಿ ಇದಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಅಭಿವೃದ್ಧಿ ಕಡೆ ತಿರುಗಿ ನೋಡದ ಶಾಸಕ, ಸಂಸದ: ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಆರಂಭಗೊಂಡು ಹಲವು ವರ್ಷಗಳೇ ಸಂದಿವೆ. ಮಾರ್ಚ್ ತಿಂಗಳಲ್ಲಿ ಇದಕ್ಕೆ ಈ ಹಿಂದಿನ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 4 ಕೋಟಿ ರೂ. ಮೆಟ್ಟಿಲು ನಿರ್ಮಾಣ ಕಾಮಗಾರಿ ಹಾಗೂ 1 ಕೋಟಿ ರೂ. ದೇಗುಲದ ನೆಲಹಾಸು ಕಾಮಗಾರಿ ಮತ್ತು 1 ಕೋಟಿ ರೂ. ವೆಚ್ಚದ ಹೊಸ ರಥ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನು ನೀಡಿದ್ದರು. ಆದರೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.
ಶಾಸಕ, ಸಂಸದರಿಂದ ನಿರ್ಲಕ್ಷ್ಯ: ಹಾಲಿ ಶಾಸಕರು ಹಾಗೂ ಸಂಸದರು ದೇಗುಲ ನಿರ್ಮಾಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲು ಉತ್ಸುಕತೆ ತೋರುತ್ತಿಲ್ಲ. ಕಳೆದ ಮೂರು ವರ್ಷಗಳಿಂದಲೂ ರಥೋತ್ಸವಗಳೂ ನಡೆಯುತ್ತಿಲ್ಲ. ನೂರಾರು ವರ್ಷಗಳ ಐತಿಹಾಸಿಕ ದೇಗುಲದ ಜಿರ್ಣೋದ್ಧಾರಕ್ಕೆ ಇನ್ನೂ ಮೀನಮೇಷ ಏಣಿಸುತ್ತಿರುವುದು ಭಕ್ತರಾದ ನಮಗೆ ಅಪಾರ ನೋವು ತಂದಿದೆ ಎಂದು ಭಕ್ತರಾದ ರಂಗಸ್ವಾಮಿ, ಮನು ಸೇರಿದಂತೆ ಹಲವು ಭಕ್ತರು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಿಳಿಗಿರಿರಂಗನಾಥಸ್ವಾಮಿ ದೇಗುಲದ ನೌಕರರ ಸಂಘದ ಉಪಾಧ್ಯಕ್ಷ ವೆಂಕಟೇಶ್ ಕಾರ್ಯದರ್ಶಿ ವಿ. ಗೋಪಾಲಕೃಷ್ಣ ಪಾರುಪತ್ತೇದಾರ ರಾಜು, ಕೋಶಾಧ್ಯಕ್ಷ ಎಸ್. ಕುಮಾರ್, ಕೀರ್ತಿಕುಮಾರ್, ಬಂಗಾರು, ರಾಜು, ಶ್ರೀನಿವಾಸ್, ಮಂಜುನಾಥ್, ಪ್ರತೀಶ್, ರಾಘವೇಂದ್ರ ಕುಮಾರ್, ನಾಗರಾಜು ಇತರರು ಇದ್ದರು.
ದೇಗುಲದ ಮೆಟ್ಟಿಲುಗಳಿಗೆ 4 ಕೋಟಿ ರೂ. ಹಾಗೂ ನೆಲ ಹಾಸಿಗೆ 1 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಇದಕ್ಕೆ ಜಿಲ್ಲಾ ಸಮಿತಿಯ ಅನುಮೋದನೆ ಪಡೆದು ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿ ಪಡೆದುಕೊಂಡು ಟೆಂಡರ್ ಪ್ರಕ್ರಿಯೆ ನಡೆದ ನಂತರ ಕಾಮಗಾರಿ ಆರಂಭಗೊಳ್ಳುವುದು.
-ವೆಂಕಟೇಶ್ ಪ್ರಸಾದ್, ದೇಗುಲದ ಇಒ
* ಫೈರೋಜ್ ಖಾನ್