ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಹಾನಿಯುಂಟಾದ ಗ್ರಾಮೀಣ ಭಾಗದ ರಸ್ತೆಗಳನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಪರಿಶೀಲನೆ ನಡೆಸಲಾಗಿದ್ದು, ಮಳೆಗಾಲದ ನಂತರ ಅಭಿವೃದ್ಧಿ ಕಾರ್ಯ ಕೈಗೆತ್ತಿಗೊಳ್ಳಲಾಗುತ್ತದೆ ಎಂದು ಕೆಆರ್‌ಆರ್‌ಡಿಎ ಮುಖ್ಯ ಕಾರ್ಯಾಚರಣೆ ಅಧಿಕಾರಿ ವಿ.ಪ್ರಭಾಕರ ಹಮ್ಗಿ ಹೇಳಿದರು.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮತ್ತು ಪ್ರವಾಹದಿಂದ ಹಾನಿ ಉಂಟಾದ ಗ್ರಾಮೀಣ ರಸ್ತೆಗಳನ್ನು ಸ್ಥಳೀಯ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿನೆ ನಡೆಸಿದ ನಂತರ ಅವರು ಮಾತನಾಡಿದರು.
ಹಾಸನ ವಿಭಾಗ, ಚೆನ್ನರಾಯಪಟ್ಟಣ ಹಾಗೂ ಸಕಲೇಶಪುರದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿಯಿಂದ ಕೈಗೊಂಡ ರಸ್ತೆ ಕಾಮಗಾರಿಗಳು ಇತ್ತೀಚಿನ ಮಳೆಯಿಂದ ಹಾಗೂ ಪ್ರವಾಹದಿಂದ ಹಾಳಾಗಿವೆ. ಅದನ್ನು ಪರಿವೀಕ್ಷಣೆ ಮಾಡಿ ಸೂಕ್ತ ಅನುದಾನ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ ಎಂದರು.
ಮೂಡಿಗೆರೆಯಲ್ಲಿ ಪಿಎಂಜಿಎಸ್‌ವೈ ಯೋಜನೆಯ ಹೆಗ್ಗುಡ್ಲು-ಬಣಕಲ್ಪೇಟೆ ರಸ್ತೆ, ನಮ್ಮಗ್ರಾಮ,ನಮ್ಮರಸ್ತೆ ಯೋಜನೆಯ ಬಾಳೂರು-ಹೊರಟ್ಟಿ, ಸಂಸೆ-ಎಳನೀರು, ಮುಳ್ಳೋಡಿ ರಸ್ತೆಗಳನ್ನು ಪರಿಶೀಲಿಸಿದ್ದೇವೆ. ಒಂದೆ ರಸ್ತೆಯಲ್ಲಿ ಮೂರ್‍ನಾಲ್ಕು ಕಡೆ ಭೂ ಕುಸಿತ ಉಂಟಾಗಿದೆ. ಈ ಭಾಗದಲ್ಲಿರುವ ಬಾಳೂರಿನಿಂದ ಹೊರಟ್ಟಿ ರಸ್ತೆಯಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಹಾಸನ ವಿಭಾಗದಲ್ಲಿ ಏಳೆಂಟು ರಸ್ತೆಗಳನ್ನು ಪರಿಶೀಲಿಸಿದ್ದು ಸಕಲೇಶಪು ಕಿರುವಳೆಯಿಂದ ಲಕ್ಕುಂದ, ಗುಡನ್‌ಕೆರೆಯಿಂದ ಹೆಗ್ಗದ್ದೆ ರಸ್ತೆ ಪರಿಶೀಲಿಸಲಾಗಿದೆ. ಹಾಸನಕ್ಕೆ ಹೋಲಿಸಿದರೆ ಮಲೆನಾಡು ಭಾಗದಲ್ಲಿ ಹೆಚ್ಚು ಗ್ರಾಮೀಣ ರಸ್ತೆ ಹಾನಿಯಾಗಿದೆ ಎಂದರು.
ಹಾನಿಯಾಗಿರುವ ಬಗ್ಗೆ ಮೊದಲು ವರದಿ ತಯಾರಿಸಿ ನಂತರ ಅದರ ಅಂದಾಜು ವೆಚ್ಚದ ಕೋರಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರ ಕೇಳಿರುವ ರಸ್ತೆಹಾನಿ ಬಗ್ಗೆ ವಿಭಾಗಾಧಿಕಾರಿಗಳಿಂದ ಮಾಹಿತಿ ಪಡೆದು ಪ್ರಾಥಮಿಕ ಹಂತದಲ್ಲಿ ವರದಿ ನೀಡಲಾಗಿದೆ. ಯಾವ ಕಡೆ ಹೆಚ್ಚು ಹಾನಿಯಾಗಿದೆ ಎಂಬುದನ್ನು ಖುದ್ದಾಗಿ ಪರಿಶೀಲಿಸಲು ಭೇಟಿ ನೀಡಿದ್ದೇನೆ. ತ್ವರಿತವಾಗಿ ಆ ಭಾಗದ ರಸ್ತೆಗಳಲ್ಲಿ ಮಣ್ಣು ಸರಿಸುವುದು, ಗುಂಡಿ, ದಿಬ್ಬಗಳನ್ನು ಸರಿಪಡಿಸುವ ಕಾರ್ಯ ಮಾಡಿ ರಸ್ತೆಗಳಲ್ಲಿ ಸಂಪರ್ಕ ಕಲ್ಪಿಸಿ ಸಂಚಾರಕ್ಕೆ ಅನುವು ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಯೋಜನಾ ವಿಭಾಗದ ಪ್ರಭಾರ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್, ಸಹಾಯಕ ಇಂಜಿನಿಯರ್ ಹರೀಶ್, ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಎಂ.ಶಿವಪ್ರಕಾಶ್ ಇತರರು ಹಾಜರಿದ್ದರು.