ನರೇಗಲ್ಲ: ಅಬ್ಬಿಗೇರಿ ಗ್ರಾಮದಿಂದ ಡ.ಸ. ಹಡಗಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಕಳೆದ ಹತ್ತಾರು ದಶಕಗಳಿಂದ ಡಾಂಬರೀಕರಣ ಆಗದೇ ಕಲ್ಲು, ಮಣ್ಣಿನಿಂದ ಕೂಡಿದ ರಸ್ತೆಯಲ್ಲೇ ಸಾರ್ವಜನಿಕರು ಓಡಾಡುವ ಸ್ಥಿತಿ ನಿರ್ಮಾಣ ಆಗಿದೆ.
ಅಬ್ಬಿಗೇರಿ ಗ್ರಾಮದಿಂದ ಡ.ಸ. ಹಡಗಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 15 ಕಿ.ಮೀ ರಸ್ತೆ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ಯಾವ ಜನಪ್ರತಿನಿಧಿ ಗಳೂಗಮನ ಹರಿಸಿಲ್ಲ. ಪ್ರತಿ ದಿನ ಈ ರಸ್ತೆಯಲ್ಲಿ ಓಡಾಡುವನೂರಾರು ವಾಹನ ಸವಾರರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. 20ರಿಂದ 25 ನಿಮಿಷದಲ್ಲಿ ತಲುಪುವ ಜಾಗಕ್ಕೆ ಈ ರಸ್ತೆಯಲ್ಲಿ ತೆರಳಿದರೆ ಕನಿಷ್ಠ ಒಂದು ಗಂಟೆ ಸಮಯ ಬೇಕಾಗುತ್ತದೆ. ಸರ್ಕಾರ ಮಾತ್ರ ಗ್ರಾಮೀಣ ಭಾಗದ ರಸ್ತೆಗಳಿಗೆ ನೂರಾರು ಕೋಟಿ ಖರ್ಚು ಮಾಡುತ್ತಿದ್ದರೂ ಈ ರಸ್ತೆ ಮೋಕ್ಷ ಕಂಡಿಲ್ಲ.
ಹೋಬಳಿಗೆ ಸಂಪರ್ಕ ರಸ್ತೆ: ರೈತ ಸಂಪರ್ಕ ಕೇಂದ್ರವನ್ನು ಹೊಂದಿರುವ ನರೇಗಲ್ಲ ಹೋಬಳಿ ಕೇಂದ್ರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಡ.ಸ. ಹಡಗಲಿಯಿಂದ ನರೇಗಲ್ಲಿಗೆ ಕೇವಲ 15 ಕಿ.ಮೀ ಅಂತವಿದೆ. ಆದರೆ ಈ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ರೋಣ ಅಥವಾ ಗದಗ ಮಾರ್ಗವಾಗಿ ಸುಮಾರು 40 ಕಿ.ಮೀ ಸುತ್ತಿ ಬಳಸಿ ನರೇಗಲ್ಲಿಗೆ ಬರುವುದು ಅನಿವಾರ್ಯವಾಗಿದೆ. ಈ ಮಾರ್ಗವಾಗಿ ಬಸ್ ಸಂಚಾರ ಇಲ್ಲದ ಪರಿಣಾಮವಾಗಿ ಬಹುತೇಕರು ದ್ವಿಚಕ್ರ ವಾಹನ ಹಾಗೂ ಟಂಟಂ ವಾಹನಗಳ ಮೂಲಕ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಕಳೆದ ವರ್ಷದ ಹಿಂದೆ ನಿರ್ಮಿಸಲಾಗಿದ್ದ ಸೇತುವೆ ಮತ್ತೆ ಕಿತ್ತು ಹೋಗಿರುವುದರಿಂದ ಟಂಟಂ, ಕಾರ್ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವ ಸ್ಥಿತಿ ಉದ್ಭವಿಸಿದೆ.
ಹಿಂಗಾರು ಹಂಗಾಮಿನಲ್ಲಿ ಈ ಭಾಗದ ಜಮೀನುಗಳಲ್ಲಿ ಉತ್ತಮ ಫಸಲು ಇರುವುದರಿಂದ ರೈತರು ಬೆಳಗ್ಗಿನ ಜಾವ ತಾವು ಬೆಳೆದ ಬೆಳೆಗಳಿಗೆ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಹೆಚ್ಚು ಹೋಗುತ್ತಿದ್ದು, ಅಲ್ಲದೇ ಜಮೀನುಗಳಲ್ಲಿ ಕಸ ಬಹಳ ಇರುವುದರಿಂದ ಬೇರೆ ಬೇರೆ ಗ್ರಾಮಗಳಿಂದ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಬಂದು ಕಸ ತೆಗೆಯುವ ಕೆಲಸಕ್ಕೆ ಮುಂದಾಗಿರುವ ರೈತರಿಗೆ ಈ ರಸ್ತೆ ಹಾಗೂ ಕಿತ್ತು ಹೋದ ಸೇತುವೆ ಸಂಕಷ್ಟ ತಂದಿದೆ. ಕೃಷಿ ಮಹಿಳೆಯರು ಈ ರಸ್ತೆಯಲ್ಲಿ ಕೆಲಸಕ್ಕೆ ಬರುವುದಕ್ಕೆ ಹಿಂದೆಟ್ಟು ಹಾಕುತ್ತಿದ್ದಾರೆ.
-ಸಿಕಂದರ ಆರಿ