ಕೆಜಿಎಫ್: ನಗರದ ರಾಬರ್ಟಸನ್‌ಪೇಟೆಯ ಹೃದಯ ಭಾಗದಲ್ಲಿರುವ ಪೊಲೀಸ್ ಕ್ವಾರ್ಟಸ್ ( ಸಬ್ ಇನ್ಸ್‌ಪೆಕ್ಟರ್) ಸಮರ್ಪಕ ನಿರ್ವಹಣೆ ಇಲ್ಲದೆ, ಪಾಳು ಬಿದ್ದಿದೆ.
ಎಂಟು ವರ್ಷಗಳಿಂದ ಯಾರೂ ಇಲ್ಲಿ ವಾಸ ಮಾಡದ ಪ್ರಯುಕ್ತ ಈ ಕಟ್ಟಡ ಈಗ ಕಾರು, ಬೈಕ್‌ಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಾಟಾಗಿದೆ. ಅಲ್ಲದೆ, ಅಕ್ಕಪಕ್ಕದ ನಿವಾಸಿಗಳು ಕಸವನ್ನೂ ಇಲ್ಲಿ ಹಾಕಿದ್ದು, ಈ ರಾಶಿ ಬಿದ್ದಿದ್ದು, ಯಾರೂ ಸ್ವಚ್ಛ ಮಾಡದ ಕಾರಣ ಕಸ ವಿಲೇವಾರಿ ಘಟಕವಾಗಿಯೂ ಪರಿವರ್ತನೆಯಾಗಿದೆ.
ಈ ಹಿಂದೆ ಪುಟ್ಟಮಾದಯ್ಯ ಎಂಬ ಇನ್ಸ್‌ಪೆಕ್ಟರ್ ಇದೇ ಮನೆಯಲ್ಲಿ ಹತ್ತು ವರ್ಷ ವಾಸವಾಗಿದ್ದರು. ನಂತರ ಅವರು ಡಿವೈಎಸ್ಪಿಯಾಗಿ ಪದೋನ್ನತಿ ಪಡೆದು ಕೊಳ್ಳೆಗಾಲಕ್ಕೆ ವರ್ಗಾವಣೆಯಾದ ನಂತರ ಈ ಮನೆ ಪಾಳು ಬಿದ್ದಿದೆ. ಮೊದಲು ಪೊಲೀಸರು ಬಟ್ಟೆ ಬದಲಾಯಿಸಿಕೊಳ್ಳಲು ಉಪಯೋಗಿಸುತ್ತಿದ್ದ ಈ ಮನೆ, ನಂತರದ ದಿನಗಳಲ್ಲಿ ಯಾರೂ ಬಾರದ ಕಟ್ಟಡವಾಗಿ ಪರಿವರ್ತಿತವಾಗಿದೆ.
ಪಾರ್ಕಿಂಗ್ ಜಾಗ: ಇಂದು ಕಟ್ಟಡದ ಸುತ್ತಲೂ ಖಾಲಿ ಮದ್ಯದ ಬಾಟಲಿಗಳು, ಇಸ್ಪೀಟ್ ಎಲೆಗಳು ಮುಂತಾದವುಗಳು ರಾಶಿಯಾಗಿ ಬಿದ್ದಿದೆ. ಪಕ್ಕದಲ್ಲಿಯೇ ಪೊಲೀಸ್ ಠಾಣೆ ಇದ್ದರೂ, ಇಂತಹ ಕೃತ್ಯಗಳು ಇಲ್ಲಿ ಹೇಗೆ ನಡೆಯುತ್ತದೆ ಎಂಬುದೂ ಆಶ್ವರ್ಯವಾಗಿದೆ. ಕಟ್ಟಡದ ಮುಂಭಾಗದ ಜಾಗದಲ್ಲಿ ಸಾಕಷ್ಟು ಜಾಗವಿದೆ. ಅದನ್ನು ಈಗ ಸಾರ್ವಜನಿಕರು ಬೈಕ್ ಪಾರ್ಕಿಂಗ್ ಜಾಗವಾಗಿ ಮಾರ್ಪಾಟು ಮಾಡಿಕೊಂಡಿದ್ದಾರೆ. ಗೀತಾ ರಸ್ತೆಯಲ್ಲಿರುವ ಟ್ರಾಫಿಕ್ ಸಮಸ್ಯೆ ಇರುವುದರಿಂದ ಇದು ಸಾರ್ವಜನಿಕರಿಗೆ ಅನುಕೂಲವಾಗಿದೆ.
ಟ್ರಾನ್ಸ್ ಫಾರ್ಮರ್ ಹಾಕಿದ್ರು ಕೇಳಿಲ್ಲ: ಈಚೆಗೆ ಫುಟ್ಪಾತ್‌ನಲ್ಲಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಬೆಸ್ಕಾಂ ವರ್ಗಾವಣೆ ಮಾಡಿತು. ಸಾರ್ವಜನಿಕ ಜಾಗದಲ್ಲಿ ಹಾಕುವ ಬದಲು ಪೊಲೀಸ್ ಠಾಣೆಯ ವಸತಿ ಗೃಹದೊಳಗೆ ಹಾಕಿತು.
ಅದನ್ನು ವಿರೋಧಿಸುವ ಇಲ್ಲವೇ, ತನ್ನ ಜಾಗದಲ್ಲಿ ಹಾಕಲು ಅನುಮತಿ ಪಡೆಯುಬೇಕೆನ್ನುವ ಷರತ್ತನ್ನೂ ಪೊಲೀಸ್ ಇಲಾಖೆ ವಿಧಿಸಲಿಲ್ಲ. ಇದು ತನ್ನ ಕಟ್ಟಡದ ಮೇಲೆ ಎಷ್ಟು ನಿಗಾವಹಿಸಿದೆ ಎಂಬುದನ್ನು ತೋರಿಸುತ್ತಿದೆ.
ಕಟ್ಟಡ ಬಳಸಿಕೊಳ್ಳಿ: ಹೃದಯದ ಮಧ್ಯಭಾಗದಲ್ಲಿರುವ ಈ ಕಟ್ಟಡವನ್ನು ನವೀಕರಿಸಿ, ಇಲ್ಲವೇ ಹೊಸದಾಗಿ ಕಟ್ಟಿ, ಸಿಇಎನ್ ಪೊಲೀಸರಿಗೆ ಇಲ್ಲವೇ ಮಹಿಳಾ ಪೊಲೀಸ್ ಠಾಣೆ ಅಥವಾ ಟ್ರಾಫಿಕ್ ಪೊಲೀಸ್ ಠಾಣೆಗೆ ನೀಡುವ ಕೆಲಸ ಮಾಡಬಹುದಿತ್ತು ಎಂದು ಕೆಲ ಪೊಲೀಸ್ ಸಿಬ್ಬಂದಿಗಳ ಅಭಿಪ್ರಾಯವಾಗಿದೆ.
ನೂತನ ಎಸ್ಪಿ ಈಚೆಗೆ ನಗರ ಸಂಚಾರ ಸಂದರ್ಭದಲ್ಲಿ ಈ ಕಟ್ಟಡವನ್ನು ಸಹ ನೋಡಿ ವಿಚಾರಿಸಿದ್ದರು. ಆದರೆ, ಅದರ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿಯಬೇಕಾಗಿದೆ.
● ಬಿ.ಆರ್.ಗೋಪಿನಾಥ್