Advertisement

Police quarters: ಕುಸಿಯುವ ಭೀತಿಯಲ್ಲಿವೆ ಪೊಲೀಸ್‌ ಕ್ವಾಟ್ರರ್ಸ್!

12:21 PM Oct 21, 2023 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿರುವ ಪೊಲೀಸ್‌ ವಸತಿಗೃಹಗಳು ಪಾಳು ಬಿದ್ದು ಶಿಥಿಲಾವಸ್ಥೆಯಲ್ಲಿದ್ದು, ಜನ ಸಾಮಾನ್ಯರಿಗೆ ರಕ್ಷಣೆ ಒದಗಿಸುವ ಪೊಲೀಸರಿಗೆ ತಮ್ಮ ಕುಟುಂಬದ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ.

Advertisement

ಸಿಲಿಕಾನ್‌ ಸಿಟಿಗೆ ಭದ್ರತೆ ಒದಗಿಸುತ್ತಿರುವ ಸಬ್‌ ಇನ್‌ಸ್ಪೆಕ್ಟರ್‌ಗಳಿಂದ ಕಾನ್‌ಸ್ಟೆàಬಲ್‌ವರೆಗಿನ ಕೆಳಹಂತದ ಸಿಬ್ಬಂದಿ 50-60 ವರ್ಷ ಹಳೆಯ ಕ್ವಾಟ್ರರ್ಸ್‌ಗಳಲ್ಲಿ ಕುಟುಂಬಸ್ಥರೊಂದಿಗೆ ಜೀವ ಕೈಯಲ್ಲಿ ಹಿಡಿದು ದಿನ ದೂಡುತ್ತಿದ್ದಾರೆ. ಹಳೇ ಕ್ವಾಟ್ರರ್ಸ್‌ ಕಟ್ಟಡ ಕೆಡವಿ ಅದೇ ಜಾಗದಲ್ಲಿ ನೂತನ ಮನೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಸಾಲು-ಸಾಲು ಮನವಿ ಪತ್ರ ಕೊಟ್ಟರೂ ಹುಸಿ ಭರವಸೆಗಳಿಗಷ್ಟೇ ಸೀಮಿತವಾಗಿದೆ.

ನಗರದ ಪ್ರಮುಖ ಪೊಲೀಸ್‌ ಕ್ವಾಟ್ರರ್ಸ್‌ಗಳಾದ ಮೈಸೂರು ರಸ್ತೆ, ಆಡುಗೋಡಿ ಸಿಎಆರ್‌ ಕ್ವಾಟ್ರರ್ಸ್‌ಗಳು ಹಾಗೂ ಮಾಗಡಿ ರಸ್ತೆಯ ಪೊಲೀಸ್‌ ವಸತಿ ಗೃಹಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿವೆ. ಇನ್ನು ಕೆಲವೆಡೆ ಗೆದ್ದಲು ಹಿಡಿದ ಕ್ವಾಟ್ರರ್ಸ್‌ ಸುತ್ತಲೂ ಬೃಹದಾಕಾರದ ಪೊದೆ ಬೆಳೆದಿವೆ. ನಾಗರಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಹಗಲಿರುಳೆನ್ನದೇ ಸೇವೆ ಸಲ್ಲಿಸುವ ಪೊಲೀಸರ ಕುಟುಂಬಕ್ಕೆ ಭದ್ರತೆ ಇಲ್ಲದಂತಾಗಿದೆ.

ಬೀಳುವ ಹಂತದಲ್ಲಿವೆ ಗೋಡೆಗಳು: ಮೈಸೂರು ರಸ್ತೆಯ ವಸತಿಗೃಹಗಳಲ್ಲಿ 5 ಬ್ಲಾಕ್‌ಗಳಲ್ಲಿ 306 ಮನೆಗಳಿವೆ. ಈ ಪೈಕಿ 220 ಮನೆಗಳಲ್ಲಿ ಪೊಲೀಸ್‌ ಕುಟುಂಬ ವಾಸವಿದೆ. ಉಳಿದ 80 ಮನೆ ಸಂಪೂರ್ಣ ಹಾನಿಯಾಗಿದ್ದು, ಇಲ್ಲಿ ವಾಸಿಸಲು ಯಾವ ಪೊಲೀಸ್‌ ಕುಟುಂಬವೂ ಮುಂದೆ ಬಂದಿಲ್ಲ. ಇಲ್ಲಿನ ಗೋಡೆಗಳು ಗೆದ್ದಲು ಹಿಡಿದು ಬಿರುಕು ಬಿಟ್ಟಿದ್ದು, ಶಿಥಿಲಾವಸ್ಥೆ ತಲುಪಿ ಶೀಘ್ರದಲ್ಲೇ ಬೀಳುವ ಹಂತದಲ್ಲಿವೆ. ಮಳೆ ಬಂದರೆ ಕೆಲ ಮನೆಗಳ ಛಾವಣಿ ಸೋರಿಕೆಯಾಗಿ ಮನೆಯೊಳಗೆ ನೀರು ತುಂಬುತ್ತವೆ. ಚರಂಡಿಗಳು ಅಲ್ಲಲ್ಲಿ ಬ್ಲಾಕ್‌ ಆಗಿ ಕಸಗಳ ರಾಶಿಯಿಂದ ಮುಚ್ಚಿಹೋಗಿವೆ. ಕಳೆದ 21 ವರ್ಷಗಳಿಂದ ನೀರಿನ ಟ್ಯಾಂಕ್‌ ಬದಲಾಯಿಸದ ಪರಿಣಾಮ ಇಲ್ಲಿನ ನಿವಾಸಿಗಳಲ್ಲಿ ಆಗಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಇಲ್ಲಿದ್ದ ಶಾಲೆಯೊಂದು ನಿರ್ವಹಣೆ ಇಲ್ಲದೇ 9 ವರ್ಷಗಳಿಂದ ಪಾಳು ಬಿದ್ದಿದೆ.

ಸರ್ಕಾರ ನೆರವಿಗೆ ಬರುವ ಆಶಾ ಭಾವನೆ: 2025ರೊಳಗೆ 10 ಸಾವಿರಕ್ಕೂ ಹೆಚ್ಚಿನ ಪೊಲೀಸ್‌ ವಸತಿ ಗೃಹ ನಿರ್ಮಿಸುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಆಶ್ವಾಸನೆ ಕೊಡುತ್ತಲೇ ಬಂದಿತ್ತು. ಇದೀಗ ಆಡಳಿತದಲ್ಲಿರುವ ಕಾಂಗ್ರೆಸ್‌ ನೆರವಿಗೆ ಬರಬಹುದು ಎಂಬ ಆಶಾ ಭಾವನೆ ಹೊಂದಿದ್ದೇವೆ ಎಂದು ಆಡುಗೋಡಿ ಕ್ವಾಟ್ರರ್ಸ್‌ನಲ್ಲಿ ನೆಲೆಸಿರುವ  ಪೊಲೀಸ್‌ ಕಾನ್‌ಸ್ಟೆàಬಲ್‌ವೊಬ್ಬರ ಪತ್ನಿ ಹಾಗೂ ತಾಯಿ ಉದಯವಾಣಿ ಜೊತೆಗೆ ಅಳಲು ತೋಡಿಕೊಂಡಿದ್ದಾರೆ.

Advertisement

ಕೋಳಿ ಗೂಡಿನಂತಿವೆ ಮನೆಗಳು:

ಇನ್ನು 39 ಬ್ಲಾಕ್‌ಗಳಲ್ಲಿ 432 ಮನೆ ಹೊಂದಿರುವ ಮಾಗಡಿ ರಸ್ತೆಯ ಪೊಲೀಸ್‌ ವಸತಿ ಗೃಹವು 50 ವರ್ಷಗಳ ಹಳೆಯ ಕಟ್ಟಡವಾಗಿದೆ. ಇಲ್ಲಿನ 1 ಬಿಎಚ್‌ಕೆ ಮನೆಗಳು 12 ಅಡಿ ಉದ್ದ, 9 ಅಡಿ ಅಗಲವಿದ್ದು, ಕೋಳಿ ಗೂಡಿನಂತಿದೆ. ಮನೆಯೊಳಗಿನ ಕೆಂಪು ನೆಲಗಳು ಒಡೆದು ತಿಗಣೆಗಳೊಂದಿಗೆ ವಾಸಿಸುವಂತಾಗಿದೆ. ಪ್ರತಿ ಕೋಣೆಯಲ್ಲೂ ಗೋಡೆಗೆ ಬಡಿದರೆ ಮಣ್ಣು ಉದುರಿ ಬೀಳುತ್ತವೆ. ಜೊತೆಗೆ ನೀರಿನ ಕೊರತೆಯೂ ಎದುರಾಗಿದೆ. ದಿನಕ್ಕೆ 2 ಗಂಟೆಗಳು ಮಾತ್ರ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಇಷ್ಟಾದರೂ ನೀರಿನ ಬಿಲ್‌ ಮಾತ್ರ 1 ಸಾವಿರ ರೂ.ವರೆಗೂ ಸಂಗ್ರಹಿಸಲಾಗುತ್ತಿದೆ. 7 ಸಾವಿರ ರೂ. ಬಾಡಿಗೆ ವಸೂಲಿ ಮಾಡಲಾಗುತ್ತಿದೆ.

ಪೊದೆಗಳ ನಡುವೆ ಕ್ವಾಟ್ರರ್ಸ್‌!:

ಆಡುಗೋಡಿಯಲ್ಲಿರುವ ಸಿಎಆರ್‌ ಕ್ವಾಟ್ರರ್ಸಗಳಲ್ಲಿ 16 ಬ್ಲಾಕ್‌ಗಳಲ್ಲಿ 480 ಮನೆಗಳಿವೆ. ಇಲ್ಲಿನ ಕೆಲ ಮನೆಗಳು ದಟ್ಟವಾಗಿ ಪೊದೆಗಳಿಂದ ಮುಚ್ಚಿಹೋಗಿದ್ದು, ಪೊದೆಗಳ ಪಕ್ಕದಲ್ಲಿ ಕಸದ ರಾಶಿ ತುಂಬಿ ಗಬ್ಬು ನಾರುತ್ತಿವೆ. ಸುಮಾರು 30 ಮನೆಗಳು ನಿರ್ವಹಣೆ ಇಲ್ಲದೇ ಪಾಳು ಬಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ. ಇಲ್ಲಿನ ಶೇ.40ರಷ್ಟು ಮನೆಗಳ ಬಾಗಿಲು, ಕಿಟಕಿ ಮುರಿದು ಹೋಗಿವೆ. ಮೇಲ್ಛಾವಣಿಗಳಿಂದ ಮಣ್ಣು, ಸಿಮೆಂಟ್‌ ಸೋರಿಕೆಯಾಗಿ ಮನೆತುಂಬಾ ದೂಳು ಅಂಟಿಕೊಳ್ಳುವುದು ಇಲ್ಲಿ ಸಾಮಾನ್ಯವಾಗಿದೆ. ಬಹುತೇಕ ಪೊಲೀಸ್‌ ಕುಟುಂಬಗಳು ಇಲ್ಲಿನ ಅವ್ಯವಸ್ಥೆಗೆ ಬೇಸತ್ತು ತಿಂಗಳಲ್ಲೇ ಮನೆ ಖಾಲಿ ಮಾಡಿಕೊಂಡು ಹೋಗಿವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಹೊಸ ಕ್ವಾಟ್ರರ್ಸ್‌ಗಳ ನಿರ್ಮಿಸಲು ಸರ್ಕಾರದ ಹಂತದಲ್ಲಿ ಚಿಂತನೆ ನಡೆದಿದೆ. ಹಳೆಯ ಕ್ವಾಟ್ರರ್ಸ್‌ ನಿವಾಸಿಗಳ ಸಮಸ್ಯೆ ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ವಾಸಿಸಲು ಮೂಲಭೂತ ಸೌಕರ್ಯ ಒದಗಿಸಲಾಗುವುದು.-ಡಾ.ಕೆ.ರಾಮಚಂದ್ರ ರಾವ್‌, ಡಿಜಿಪಿ, ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ 

- ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next