Advertisement

ಶಿಥಿಲಗೊಂಡ ಮನೆ: ಚಿನ್ನ ತೆಗೆವ ಕಾರ್ಮಿಕರ ಜೀವಕ್ಕಿಲ್ಲ ಭದ್ರತೆ

04:50 PM Jan 26, 2018 | |

ಹಟ್ಟಿ ಚಿನ್ನದ ಗಣಿ: ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆಗಳು, ಮಳೆ ಬಂದರೆ ಸೋರುವ ಸೂರುಗಳು, ಪ್ಲಾಸ್ಟರ್‌ ಕಿತ್ತಿಹೋಗಿ
ಕಾಣುತ್ತಿರುವ ಇಟ್ಟಿಗೆಗಳು, ಕಬ್ಬಿಣದ ಸರಳುಗಳು, ಗೋಡೆಯಲ್ಲೇ ಬೆಳೆದ ಗಿಡಗಳು, ಒಳಚರಂಡಿ ಮ್ಯಾನ್‌
ಹೋಲ್‌ಗ‌ಳಿಂದ ಹೊರಚೆಲ್ಲುವ ಕೊಳಚೆ ನೀರು ಇದು ಇಲ್ಲಿನ ಹಟ್ಟಿ ಚಿನ್ನದ ಗಣಿ ಪ್ರದೇಶ ವ್ಯಾಪ್ತಿಯ ಅಧಿಸೂಚಿತ ಪ್ರದೇಶದ ಗಾಂಧಿನಗರ, ಜತ್ತಿ ಲೈನ್‌, ಗುಂಡೂರಾವ್‌ ಕಾಲೋನಿಗಳಲ್ಲಿನ ಕಾರ್ಮಿಕರ ವಸತಿಗೃಹಗಳ ದುಸ್ಥಿತಿ.

Advertisement

ಭೂಮಿ ಕೆಳಭಾಗದಲ್ಲಿಳಿದು ದೇಹ ದಂಡಿಸಿ ದೇಶಕ್ಕೆ ಚಿನ್ನ ನೀಡುವ ಕಾರ್ಮಿಕರಿಗಾಗಿ ಸುಮಾರು 40 ವರ್ಷಗಳ ಹಿಂದೆ
ಗಾಂಧಿನಗರ, ಜತ್ತಿಲೈನ್‌, ಗುಂಡೂರಾವ್‌ ಕಾಲೋನಿಗಳಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಈ
ಮನೆಗಳು ಕಾಲಕಾಲಕ್ಕೆ ಸುಣ್ಣ-ಬಣ್ಣ, ದುರಸ್ತಿ ಕಾಣದ್ದರಿಂದ ಶಿಥಿಲಗೊಂಡಿದ್ದು, ಈಗಲೋ ಆಗಲೋ ಕುಸಿದು ಬೀಳುವ
ಹಂತ ತಲುಪಿದ್ದು, ಚಿನ್ನದ ಗಣಿ ಕಾರ್ಮಿಕರ ಕುಟುಂಬಗಳು ಜೀವಭಯದಲ್ಲೇ ಜೀವನ ಸಾಗಿಸುವಂತಾಗಿದೆ.

ಗುಂಡುರಾವ್‌ ಕಾಲೋನಿಯಲ್ಲಿ 1982ರಲ್ಲಿ ಎರಡು ಅಂತಸ್ತಿನ ಮನೆಗಳ 50 ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ.
ಆಗಿನ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಮನೆಗಳನ್ನು ಉದ್ಘಾಟಿಸಿದ್ದಾರೆ. ಆಗಿನಿಂದ ಈವರೆಗೆ ಈ ಮನೆಗಳು ಸುಣ್ಣ ಬಣ್ಣ ಕಂಡಿಲ್ಲ. ಪ್ಲಾಸ್ಟರ್‌ ಕಿತ್ತುಹೋಗಿ ಕಬ್ಬಿಣದ ಸರಳು, ಇಟ್ಟಿಗೆಗಳು ಕಾಣುತ್ತಿವೆ. ಕೆಲವೆಡೆ ಇಟ್ಟಿಗೆಗಳು ಕಿತ್ತು ಬಿದ್ದಿವೆ. ಬಾಗಿಲುಗಳು ತುಕ್ಕು ಹಿಡಿದಿವೆ. ಕಿಟಕಿಯ ಗಾಜುಗಳು ಒಡೆದಿವೆ. ಗೋಡೆಗಳು ಬಿರುಕು ಬಿಟ್ಟು ಉಬ್ಬಿಕೊಂಡು ಪ್ಲಾಸ್ಟರ್‌ ಉದುರಿ ಬೀಳುತ್ತಿದೆ. 

ಯಾವ ಸಮಯದಲ್ಲಿ ಬೀಳುತ್ತವೋ ಎನ್ನುವ ಆತಂಕ ಕಾಡುತ್ತಿದೆ. ಮನೆಗಳ ದುರಸ್ತಿಗೆ ಕ್ರಮ ವಹಿಸಬೇಕಾದ ಹಟ್ಟಿ
ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ.

ಸ್ವತ್ಛತೆ ಮಾಯ: ಪಟ್ಟಣದಲ್ಲಿ ಜತ್ತಿ ಲೈನ್‌, ಗುಂಡುರಾವ್‌ ಕಾಲೋನಿ, ನ್ಯೂ ಎನ್‌ಜಿಆರ್‌ ಕಾಲೋನಿ ಸೇರಿದಂತೆ ನಗರಗಳ ರಸ್ತೆಗಳು ಇಂದಿಗೂ ಡಾಂಬರ್‌ ಕಂಡಿಲ್ಲ. ಕಾರ್ಮಿಕರ ನಗರದಲ್ಲಿ ಸ್ವತ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಇದರಿಂದ ನಗರದ ನಿವಾಸಿಗಳಿಗೆ ಮಲೇರಿಯಾ, ಡೆಂಘೀ ಸೇರಿ ಸಾಂಕ್ರಾಮಿಕ ಕಾಯಿಲೆಗಳು ಸಾಮಾನ್ಯವಾಗಿದ್ದು, ಕಾರ್ಮಿಕರ ಮತ್ತು ಅವರ ಕುಟುಂಬದವರ ಚಿಕಿತ್ಸೆಗೆ ಚಿನ್ನದ ಗಣಿ ಕಂಪನಿ ಲಕ್ಷಾಂತರ ರೂ. ವ್ಯಯಿಸುತ್ತಿದೆಯಾದರೂ ಕಾರ್ಮಿಕರ ಕಾಲೋನಿಗಳಲ್ಲಿ ಸ್ವತ್ಛತೆ ಕಾಪಾಡಲು ಮುಂದಾಗಿಲ್ಲ.

Advertisement

ಛಾವಣಿ ಸೋರಿಕೆ: ಮಳೆ ಬಂದರೆ ಸಾಕು ಮಳೆ ಕಾರ್ಮಿಕರ ಕಾಲೋನಿಗಳಲ್ಲಿನ ಮನೆಗಳು ಸೋರುತ್ತವೆ. ಮೇಲ್ಛಾವಣಿ ಮತ್ತು ಗೋಡೆಗಳಲ್ಲಿ ಬಿರುಕು ಬಿಟ್ಟಿದ್ದರಿಂದ ಮನೆಗಳು ಸೋರುತ್ತಿವೆ. ಕಾಲೋನಿಯಲ್ಲಿ ಸ್ವತ್ಛತೆ ಇಲ್ಲದ್ದರಿಂದ ವಿಷಜಂತುಗಳ ಹಾವಳಿ ಹೆಚ್ಚಿದೆ ಎಂದು ಕಾರ್ಮಿಕರ ಕಾಲೋನಿ ನಿವಾಸಿಗಳು ಅಳಲು ತೋಡಿಕೊಂಡಿದ್ದು, ಕಾರ್ಮಿಕರ ಮನೆಗಳ ದುರಸ್ತಿ ಹಾಗೂ ಕಾಲೋನಿಗಳಲ್ಲಿ ಸ್ವತ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next