Advertisement
ಮಂಗಳೂರು ತಾಲೂಕಿನ ಬೋಳಿಯಾರ್ ಗ್ರಾ.ಪಂ. ವ್ಯಾಪ್ತಿಯ ಮಾಡದಗುಡ್ಡೆ ಅಂಗನವಾಡಿ ಕೇಂದ್ರ ಪಂಚಾಯತ್ ಕಚೇರಿಯ ಬದಿಯಲ್ಲೇ ಇದ್ದರೂ ಅಂಗನವಾಡಿ ಕೇಂದ್ರದ ದುರವಸ್ಥೆ ಪಂಚಾಯತ್‌ನ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ದಿನಾಲೂ ಕಣ್ಣಿಗೆ ಕಂಡರೂ ಕೇಂದ್ರಕ್ಕೆ ನೂತನ ಕಟ್ಟಡ ಕಲ್ಪಿಸುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎನ್ನುತ್ತಾರೆ ಅಂಗನವಾಡಿ ಕೇಂದ್ರದ ಮಕ್ಕಳ ಹೆತ್ತವರು.
ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಆರು ವರ್ಷಗಳಿಂದ ಅಂಗನವಾಡಿ ಸಹಾಯಕಿಯರು ಮತ್ತು ಮಕ್ಕಳ ಹೆತ್ತವರು ಪ್ರತೀ ಗ್ರಾಮ ಸಭೆಯಲ್ಲಿ ಮನವಿ ಮಾಡಿ ಒತ್ತಾಯಿಸುತ್ತಿದ್ದಾರೆ. ಆದರೆ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡರೂ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ಮನವಿ ಸಲ್ಲಿಸಿದರೂ ಪಂಚಾಯತ್ ಸ್ಪಂದಿಸದೇ ಇರುವಾಗ ಹಿಂದಿನ ಗ್ರಾಮಸಭೆಯಲ್ಲಿ ಮನವಿ ಸಲ್ಲಿಸುವುದನ್ನೇ ಕೈಬಿಡಲಾಗಿದೆ ಎನ್ನುತ್ತಾರೆ ಅಂಗನವಾಡಿ ಕೇಂದ್ರದ ಮಕ್ಕಳ ಹೆತ್ತವರು. ಮಳೆಗಾಲದಲ್ಲಿ ಹಾವುಗಳ ಕಾಟ
ಒಂದೆಡೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ಮಕ್ಕಳ ದೈನಂದಿನ ಕಲಿಕೆ ನಡೆದರೆ ಮಳೆಗಾಲ ಬಂತೆಂದರೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರಲು ಹೆದರುವ ಸ್ಥಿತಿ ನಿರ್ಮಾಣವಾಗುತ್ತದೆ. ಮಳೆ ನೀರಿಗೆ ಅಂಗನವಾಡಿ ಕೇಂದ್ರ ಜಲಾವೃತಗೊಂಡರೆ ಮಕ್ಕಳಿಗೆ ಪಂಚಾಯತ್ ಕಚೇರಿಗೆ ಸ್ಥಳಾಂತರಗೊಳ್ಳುತ್ತದೆ. ಇನ್ನೊಂದೆಡೆ ಮುರಿದಿರುವ ಕಿಟಕಿಗಳ ಎಡೆಯಿಂದ ಹಾವುಗಳು ಅಂಗನವಾಡಿ ಕೇಂದ್ರದ ಒಳಗೆ ನುಸುಳುತ್ತವೆ. ಹಲವಾರು ಬಾರಿ ಮಕ್ಕಳು ಹಾವಿಗೆ ಹೆದರಿ ಹೊರ ಓಡಿ ಬಂದಿರುವ ಘಟನೆ ಸಂಭವಿಸಿದ್ದುಂಟು. ಹಾವಿನ ಭಯದಿಂದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
Related Articles
ಕುಸಿಯುವ ಹಂತದಲ್ಲಿರುವ ಬಾಗಿಲು
ಸುಮಾರು 25ಕ್ಕೂ ಹೆಚ್ಚು ಮಕ್ಕಳು ಈ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಸಹಿತ ಇಬ್ಬರು ಕಾರ್ಯನಿರ್ವಹಿಸುತ್ತಾರೆ.
Advertisement
ಸ್ಥಳೀಯ ಸ್ತ್ರೀಶಕ್ತಿ ಸಂಘದ ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವಾಗ ಮಕ್ಕಳನ್ನು ಆಟವಾಡಿಸುತ್ತಿದ್ದರೆ, ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಇಬ್ಬರೇ ಇರುವ ಸಂದರ್ಭದಲ್ಲಿ ಮಕ್ಕಳು ಅವರಿಂದ ತಪ್ಪಿಸಿಕೊಂಡು ಮುರಿದು ಬೀಳುವ ಹಂತದಲ್ಲಿರುವ ಬಾಗಿಲು ಮತ್ತು ದಾರಂದದ ಎಡೆಯಲ್ಲಿ ಆಟವಾಡುತ್ತಿದ್ದು ಅಪಾಯಕಾರಿಯಾಗಿರುವ ಈ ಅಂಗನವಾಡಿಗೆ ಸುಸಜ್ಜಿತ ಕಟ್ಟಡವಾದರೆ ಮಾತ್ರ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯ. ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಟ್ಟಡಕ್ಕೆ ಅನುದಾನ ನೀಡಲು ಪಂಚಾಯತ್‌ಗೆ ಅಧಿಕಾರವಿದ್ದು, ಶೀಘ್ರವೇ ಅನುದಾನ ಬಿಡುಗಡೆ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕಾಗಿದೆ.
ನೂತನ ಕಟ್ಟಡದಿಂದ ಸಮಸ್ಯೆ ಪರಿಹಾರಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಕಟ್ಟಡದೊಳಗೆ ಹಾವು, ಇಲಿಗಳ ಕಾಟ ಹೆಚ್ಚಿದೆ. ಮಳೆಗಾಲದಲ್ಲಿ ನೀರು ಒಳಬರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ನೂತನ ಕಟ್ಟಡ ನಿರ್ಮಾಣವಾದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ
– ರಂಜಿನಿ ಬೋಳಿಯಾರ್, ಸ್ತ್ರೀ ಶಕ್ತಿ ಸಂಘದ ಸದಸ್ಯೆ ತಾಂತ್ರಿಕ ತೊಂದರೆಯಿಂದ ಅನುದಾನ ದೊರೆತಿಲ್ಲ
ಬೋಳಿಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ಅನುದಾನ ಹೊಂದಿಸಲು ಸಾಧ್ಯವಾಗಿಲ್ಲ. ಮಾಡದಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
– ಸತೀಶ್ ಆಚಾರ್ಯ, ಅಧ್ಯಕ್ಷರು, ಬೋಳಿಯಾರು ಗ್ರಾ.ಪಂ. ಅಧಿಕಾರಿಗಳ ಸ್ಪಂದನೆ ಸಿಗಬೇಕಿದೆ
ಅಂಗನವಾಡಿ ಕಟ್ಟಡ ದುರಸ್ತಿಗೆ ತಾ.ಪಂ.ನಿಂದ ಅನುದಾನ ಬಿಡುಗಡೆಯಾಗಿದೆ. ಈ ಹಿಂದೆಯೂ ಕಟ್ಟಡದ ಛಾವಣಿ ದುರಸ್ತಿ ನಡೆದಿತ್ತು. ಆದರೆ ಇಡೀ ಕಟ್ಟಡವೇ ಶಿಥಿಲಾವಸ್ಥೆಯಲ್ಲಿರುವುದರಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾದರೆ ಮಾತ್ರ ಸಮಸ್ಯೆ ಪರಿಹಾರವಾಗಲು ಸಾಧ್ಯ.
– ಕೆ.ಪಿ. ಪೂರ್ಣಿಮಾ, ಅಂಗನವಾಡಿ ಶಿಕ್ಷಕಿ – ವಸಂತ್ ಎನ್. ಕೊಣಾಜೆ