Advertisement

ಇಂದೋ, ನಾಳೆಯೋ ಬೀಳ್ಳೋ ಭೀತಿ

01:57 PM Oct 22, 2019 | Suhan S |

ಗದಗ: ಎಲ್ಲೆಂದರಲ್ಲಿ ಬಿರುಕು ಬಿಟ್ಟ ಗೋಡೆಗಳು.. ಮೂಲೆ ಸೇರಿದ ಹೊಸ ಪುಸ್ತಕ ಮೂಟೆಗಳು..ಕುರ್ಚಿ ಇದ್ದರೂ ಇಡಲು ಜಾಗವಿಲ್ಲ..ಇದ್ದ ಪುಸ್ತಕಗಳ ರಕ್ಷಣೆಗೆ ನಿತ್ಯ ಹರಸಾಹಸ ಪಡಬೇಕಾದ ದುಸ್ಥಿತಿ.. ಓದುಗರ ಮೇಲೆ ಕಟ್ಟಡ ಚಾವಣಿ ಯಾವಾಗ ಬೀಳುತ್ತದೆಯೋ ಭಯದ ಸ್ಥಿತಿ.

Advertisement

ಇದು ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಕೇಂದ್ರ ಗ್ರಂಥಾಲಯದ ಇಂದಿನ ಪರಿಸ್ಥಿತಿ.

ಸಂಸದರ ಅನುದಾನದಲ್ಲಿ ಕಟ್ಟಡ: ಅಂತೂರ-ಬೆಂತೂರ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ 1993-94ರಲ್ಲಿ ಕೇಂದ್ರ ಗ್ರಂಥಾಲಯ ಆರಂಭಗೊಂಡಿದೆ. ಅಂದಿನ ಸಂಸದ ವಿಜಯ ಸಂಕೇಶ್ವರ ಅವರ ಅನುದಾನದಲ್ಲಿ 2000ರಲ್ಲಿ ಗ್ರಾಮದ ಶಾಲೆ ಆವರಣದಲ್ಲಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಕಾಲಂ ಇಲ್ಲದೆ ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ ಕೊರತೆಯಿಂದ ಕೇವಲ 20 ವರ್ಷದಲ್ಲೇ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಗೊಂಡಿದೆ. ಗ್ರಂಥಾಲಯ ಕಟ್ಟಡದಲ್ಲಿ ಎರಡು ಕೊಠಡಿಗಳಿದ್ದು, ಒಂದರಲ್ಲಿ ಪುಸ್ತಕಗಳನ್ನು ಇಡಲಾಗಿದೆ.

ಮತ್ತೂಂದರಲ್ಲಿ ಪುಸ್ತಕ ಮತ್ತು ದಿನಪತ್ರಿಕೆ ಓದಲು ಟೇಬಲ್‌, ಕುರ್ಚಿ ಹಾಕಲಾಗಿದೆ. ಆದರೆ, ಕಟ್ಟಡದ ಎಲ್ಲ ಗೋಡೆಗಳು ಎಲ್ಲೆಂದರಲ್ಲಿ ಬಿರುಕು ಬಿಟ್ಟಿವೆ. ಮಳೆ ನೀರಿಗೆ ನೆನೆದ ಗೋಡೆಗಳು ಶಿಥಿಲಗೊಂಡಿವೆ. ಇದರಿಂದ ಪುಸ್ತಕಗಳ ರಕ್ಷಣೆಯೇ ದೊಡ್ಡ ಸವಾಲಾಗಿದೆ. ಕಟ್ಟಡದ ನೆಲಹಾಸು ಹಾಳಾಗಿದ್ದು, ಕುರ್ಚಿಗಳನ್ನು ಮೂಲೆಯಲ್ಲಿಡಲಾಗಿದೆ. ಇದರಿಂದ ಕೆಲ ವೇಳೆ ಓದುಗರು ಸ್ಥಳದ ಅಭಾವ ಎದುರಿಸುವಂತಾಗಿದೆ.

364 ಜನ ಸದಸ್ಯರು: ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಗ್ರಂಥಾಲಯ ಆರಂಭಗೊಂಡ ಮೊದ-ಮೊದಲು ಓದುಗರ ಸಂಖ್ಯೆ ಅಧಿಕವಾಗಿತ್ತು. ಈಚೆಗೆ ಓದುಗರ ಸಂಖ್ಯೆ ಕ್ಷೀಣಿಸಿದರೂ ಗ್ರಂಥಾಲಯ ಸದಸ್ಯರ ಪ್ರಮಾಣ ಹೆಚ್ಚುತ್ತಲೇ ಇದೆ. ಸದ್ಯ 364 ಜನರು ಸದಸ್ಯತ್ವ ಪಡೆದಿದ್ದು, 15 ದಿನಕ್ಕೊಮ್ಮೆ ಪುಸ್ತಕ ವಿನಿಮಯ ಮಾಡಿಕೊಳ್ಳುತ್ತಾರೆ. ನಿತ್ಯ 80-100 ಜನ ಓದುಗರು ಗ್ರಂಥಾಲಯಕ್ಕೆ ಬರುತ್ತಾರೆ.

Advertisement

 

3500ಕ್ಕೂ ಹೆಚ್ಚು ಪುಸ್ತಕ ಇವೆ: ಈ ಗ್ರಂಥಾಲಯದಲ್ಲಿ 3500ಕ್ಕೂ ಹೆಚ್ಚು ಪುಸ್ತಕಗಳು ಇವೆ. ನಿತ್ಯ ಮೂರು ದಿನಪತ್ರಿಕೆಗಳು, ರಾಜ್ಯ ಸರ್ಕಾರದ ಮಾಸ ಪತ್ರಿಕೆ (ಜನಪದ, ಕರ್ನಾಟಕ ವಿಕಾಸ) ಓದಲು ದೊರೆಯುತ್ತವೆ. ಪ್ರಸಕ್ತ ವರ್ಷ 500 ಹೊಸ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಪೂರೈಸಿದೆ. ಆದರೆ, ಸ್ಥಳದ ಅಭಾವದಿಂದ ಮೂಲೆ ಸೇರಿವೆ.

ತಿಂಗಳಿಗೆ 400 ರೂ. ಸಹಾಯಧನದಲ್ಲೇ ಕೆಲ ದಿನಪತ್ರಿಕೆ ಮತ್ತು ಮಾಸಿಕ ಪತ್ರಿಕೆಗಳನ್ನು ತರಿಸಲಾಗುತ್ತಿದೆ. ಕೆಲ ಯುವಕರು ಸ್ಪರ್ಧಾತ್ಮಕ ಪತ್ರಿಕೆಗಳನ್ನು ಕೇಳುತ್ತಾರೆ. ಒದಗಿಸಲು ಆಗುತ್ತಿಲ್ಲ. ಇನ್ನು ಗ್ರಂಥಾಲಯ ಕಟ್ಟಡದ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮತ್ತು ಗ್ರಾಪಂ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಪ್ರಯೋಜನವಾಗಿಲ್ಲ. ಬೂದೇಶ ಗುಡಿಸಲಕೊಪ್ಪ, ಗ್ರಂಥಾಲಯ ಮೇಲ್ವಿಚಾರಕ

 

-ಶರಣು ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next