ಆಂಧ್ರ ಪ್ರದೇಶ: ಅಲ್ಲು ಅರ್ಜುನ್ ಅವರ ʼಪುಷ್ಪ-2ʼ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆ ಸುದ್ದಿ ಚರ್ಚೆಯಲ್ಲಿರುವಾಗಲೇ ಅಪಘಾತವೊಂದರಲ್ಲಿ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆ.
ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಗೇಮ್ ಚೇಂಜರ್ (Game Changer) ಚಿತ್ರದ ಪ್ರಿ-ರಿಲೀಸ್ ಈವೆಂಟ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಇಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ರಾಜಮಹೇಂದ್ರವರಂ (ರಾಜಮಂಡ್ರಿ) ಯಲ್ಲಿ ʼಗೇಮ್ ಚೇಂಜರ್ʼ ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಕಾಕಿನಾಡ ಪ್ರದೇಶದ ಮಣಿಕಂಠ (23) ಮತ್ತು ತೋಕಡ ಚರಣ್ (22) ಎಂದು ಗುರುತಿಸಲಾದ ಇಬ್ಬರು ಅಭಿಮಾನಿಗಳು ಭಾಗಿಯಾಗಿದ್ದರು.
ಕಾರ್ಯಕ್ರಮ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಮಣಿಕಂಠ ಮತ್ತು ತೋಕಡ ಚರಣ್ ಅವರ ಬೈಕ್ ಗೆ ಎದುರಿನಿಂದ ಬರುತ್ತಿದ್ದ ವ್ಯಾನ್ ಢಿಕ್ಕಿ ಹೊಡೆದಿದೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಭಿಮಾನಿಗಳ ನಿಧನ ಸುದ್ದಿಯನ್ನು ಕೇಳಿ ಪವನ್ ಕಲ್ಯಾಣ್, ನಿರ್ಮಾಪಕ ದಿಲ್ ರಾಜು ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.
ಪವನ್ ಕಲ್ಯಾಣ್ ಮತ್ತು ನಿರ್ಮಾಪಕ ದಿಲ್ ರಾಜು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಜನಸೇನಾ ಪಕ್ಷದ ವತಿಯಿಂದ ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಧನಸಹಾಯ ನೀಡುತ್ತೇವೆ, ಸರ್ಕಾರದಿಂದ ಸೂಕ್ತ ನೆರವು ನೀಡಲು ವ್ಯವಸ್ಥೆ ಮಾಡಬೇಕು ಎಂದು ನನ್ನ ಕಚೇರಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.