ಮೈಸೂರು: ವಿ. ಶ್ರೀನಿವಾಸಪ್ರಸಾದ್ ಅವರ ಸ್ವಾಭಿಮಾನದ ಬಾವುಟ ಬಹಳ ಎತ್ತರಕ್ಕೆ ಹಾರಬೇಕಿದೆ. ಹೀಗಾಗಿ ನಂಜನಗೂಡು ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿ ಅವರನ್ನು ವಿಧಾನಸಭೆಗೆ ಕಳುಹಿಸಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮನವಿ ಮಾಡಿದರು.
ಬಿಜೆಪಿ ಸೇರಿದ ನಂತರ ಇದೇ ಮೊದಲ ಬಾರಿಗೆ ನಂಜನಗೂಡಿಗೆ ಆಗಮಿಸಿದ ಅವರು, ಪಟ್ಟಣದಲ್ಲಿ ತೆರೆಯಲಾಗಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಾತನಾಡಿದರು. ನನ್ನ ಅನುಭವದ ಪ್ರಕಾರ ಈ ಉಪ ಚುನಾವಣೆ, ಮುಂಬರುವ ಚುನಾವಣೆಯ ದಿಕ್ಸೂಚಿಯಾಗಲಾರದು. ಉಪ ಚುನಾವಣೆಗಳಲ್ಲಿ ಅಭ್ಯರ್ಥಿ ಹಾಗೂ ಸ್ಥಳೀಯ ವಿಚಾರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಹೀಗಾಗಿ ಯಾವ ಉಪ ಚುನಾವಣೆಗಳೂ ಮುಂಬರುವ ಚುನಾವಣೆಯ ದಿಕ್ಸೂಚಿಯಾಗಲಾರದು ಎಂದರು.
ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಈಗಾಗಲೇ ಪ್ರಾರಂಭವಾಗಿದೆ. ಅದು ಅವ್ಯಾಹತವಾಗಿ ನಡೆಯುತ್ತದೆ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಕ್ಕೆ ಕಾರಣಗಳನ್ನು ಈಗಾಗಲೇ ಜನತೆಯ ಮುಂದೆ ಇಟ್ಟಿದ್ದೇನೆ ಎಂದು ತಿಳಿಸಿದರು. ಶ್ರೀನಿವಾಸಪ್ರಸಾದ್ ಅವರನ್ನು ಬಹಳ ವರ್ಷಗಳಿಂದ ಕಂಡಿದ್ದೇನೆ. 1972ರಲ್ಲಿ ದೇವರಾಜ ಅರಸರ ಸಂಪುಟದಲ್ಲಿ ನಾನು ಮಂತ್ರಿಯಾಗಿದ್ದಾಗ ಮೈಸೂರಿನ ಕ್ಷೇತ್ರವೊಂದಕ್ಕೆ 1974ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ದೇವರಾಜ ಅರಸು ಮತ್ತು ನನ್ನ ಗುರಿ ಅಂದು ಪ್ರಸಾದ್‌ರನ್ನು ಸೋಲಿಸುವುದಾಗಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿಗಿಂತ ಪ್ರಸಾದ್ ಅಂದು ಹೆಚ್ಚಿನ ಮತಗಳಿಸಿದ್ದರು. ಇದನ್ನು ಕಂಡು ಅರಸರು ಈ ಹುಡುಗನನ್ನೇ ಕಾಂಗ್ರೆಸ್ ಅಭ್ಯರ್ಥಿ ಮಾಡಬಹುದಿತ್ತು ಎಂದು ಹೇಳಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.
ನಿಸ್ವಾರ್ಥವಾಗಿ ಜನಸೇವೆ ಮಾಡುತ್ತಾ ಬಂದಿದ್ದ ಪ್ರಸಾದ್ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ಅದನ್ನು ಪ್ರತಿಭಟಿಸಿ, ರಾಜೀನಾಮೆ ಕೊಟ್ಟು ಜನರ ಮುಂದೆ ಬಂದಿದ್ದಾರೆ. ಬಹಳ ಜನ ರಾಜಕಾರಣಿಗಳು ಈ ತೀರ್ಮಾನ ಮಾಡಲ್ಲ. ಸುಲಭವಾಗಿ ಮುಂದುವರಿಯಲು ನೋಡುತ್ತಾರೆ ಎಂದರು.
ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಸ್ವಾಭಿಮಾನ ಮತ್ತು ಆತ್ಮ ಗೌರವದ ಪ್ರಶ್ನೆ ಈ ಉಪ ಚುನಾವಣೆ. ಕ್ಷೇತ್ರದ ಯಾವುದೇ ಹಳ್ಳಿಗೆ ಹೋದರೂ ಸ್ವಾಭಿಮಾನದ ಪ್ರಜ್ಞೆ ಜಾಗೃತವಾಗಿ, ಒಳ್ಳೆಯ ವಾತಾವರಣವಿದೆ. ಇದರಿಂದ ಆತ್ಮಸ್ಥೈರ್ಯ ಬಂದಿದ್ದು, ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.