ರಾಮನಗರ: ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಅರಣ್ಯ ಪ್ರದೇಶದಲ್ಲಿ ಕಳೆದ 11 ದಿನಗಳಿಂದ ಮೂಲ ನಿವಾಸಿಗಳಾದ ವನವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಏಸುಕ್ರಿಸ್ತರ ಪ್ರತಿಮೆ ನಿರ್ಮಾಣಕ್ಕೆ ಸ್ಪಂದಿಸಿದಂತೆ ಈ ಹೋರಾಟಕ್ಕೂ ಸ್ಪಂದಿಸಬೇಕು ಎಂದು ವನವಾಸಿ ಕಲ್ಯಾಣ ಸಮಿತಿಯ ಜಿಲ್ಲಾ ಖಜಾಂಚಿ ಆರ್.ಕೆ.ಸತೀಶ್ ಆಗ್ರಹಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಏಸುಕ್ರಿಸ್ತರ ಪ್ರತಿಮೆ ನಿರ್ಮಾಣಕ್ಕೆ ಡಿ.ಕೆ.ಶಿವಕುಮಾರ್ ಅವರು 10 ಎಕರೆ ಭೂಮಿಯನ್ನು ತಮ್ಮ ವೈಯಕ್ತಿಕವಾಗಿಯೇ ಕೊಡಿಸಿದ್ದಾರೆ. ಪ್ರತಿಮೆ ಸ್ಥಾಪನೆಗೆ ಸಹಕರಿಸುವ ಮೊದಲು ಅಲ್ಲಿನ ಮೂಲ ನಿವಾಸಿಗಳಾದ ವನವಾಸಿಗಳಿಗೆ ತಮ್ಮ ವಾಸಸ್ಥಳಕ್ಕೆ ಹಕ್ಕುಪತ್ರ ಕೊಡಿಸಬೇಕಿತ್ತು ಎಂದರು.
ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಅರಣ್ಯ ಪ್ರದೇಶದಲ್ಲಿ ಕಳೆದ 11 ದಿನಗಳಿಂದ ಹಗಲು, ರಾತ್ರಿ ಎನ್ನದೆ ಅಲ್ಲಿನ ಮೂಲ ನಿವಾಸಿಗಳು ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಯಾವ ಚುನಾಯಿತ ಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಡಿ.ಕೆ.ಶಿ ಅವರು ಒಮ್ಮೆಯೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ವನವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕಾಗಿದೆ. ಕನಕಪುರ ತಾಲೂಕಿನಲ್ಲಿಯೇ 600 ಹೆಚ್ಚು ಮಂದಿ ಫಲಾನುಭವಿಗಳಿದ್ದಾರೆ. ಈ ದಿಕ್ಕಿನಲ್ಲಿ ಇನ್ನು ಮುಂದಾದರೂ ಸ್ಥಳಿಯ ಶಾಸಕರು, ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಹೋರಾಟಗಾರ, ವಕೀಲ ವಿನೋದ್ ಭಗತ್ ಮಾತನಾಡಿ, ಮೂಲ ನಿವಾಸಿಗಳು ಹಕ್ಕುಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಕ್ಕುಪತ್ರ ವಿತರಿಸುವುದಲ್ಲದೆ, ಈ ಸಮುದಾಯಕ್ಕ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಲಿ ಎಂದು ಒತ್ತಾಯಿಸಿದರು. ವನವಾಸಿ ಕಲ್ಯಾಣ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಜು, ಸಾಮಾಜಿಕ ಕಾರ್ಯಕರ್ತ ಲೋಕೇಶ್ ಇದ್ದರು.