ಬೆಂಗಳೂರು: ರಾಜ್ಯಾದ್ಯಂತ ಬಾಕಿ ಇರುವ ಪೋಡಿ, ದುರಸ್ತಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಕಾರ್ ಬಂದ್ ಡಿಜಿಟಲೀಕರಣ ಆಗುತ್ತಿದ್ದು, ಆರ್‌ಟಿಸಿ ಹಾಗೂ ಆಧಾರ್ ಅನ್ನೂ ಜೋಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶುಕ್ರವಾರ ವಿಕಾಸಸೌಧದಲ್ಲಿ ಇಲಾಖೆಯ ಮಾಸಿಕ ಪ್ರಗತಿ ಪರಿಶೀಲನ ಸಭೆ ನಡೆಸಿ ಮಾಹಿತಿ ನೀಡಿ, ನಿಖರವಾದ ಆಕಾರ್ ಬಂದ್ ಇಲ್ಲದೆ ಆರ್‌ಟಿಸಿ ಜೋಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ 65 ಲಕ್ಷ ಆಕಾರ್‌ಬಂದ್‌ಗಳನ್ನೂ ಮುಂದಿನ 2 ತಿಂಗಳಲ್ಲಿ ಡಿಜಿಟಲೀಕರಣ ಮಾಡಲು ಸೂಚಿಸಲಾಗಿದೆ ಎಂದರು.
20-30 ವರ್ಷಗಳ ಹಿಂದೆ ಸುಮಾರು 66 ಸಾವಿರ ಸರ್ವೇ ನಂಬರ್‌ಗಳಲ್ಲಿ ಸರಕಾರವೇ ಭೂಮಂಜೂರಾತಿ ಕೊಟ್ಟಿದೆ. ಒಟ್ಟಾರೆ 65 ಲಕ್ಷ ಆರ್‌ಟಿಸಿಗಳಿವೆ. ಇವುಗಳ ಆಕಾರ್ ಬಂದ್ ಡಿಜಿಟಲೀಕರಿಸುವ ಉದ್ದೇಶವಿದ್ದು, ಅನಂತರದ 2 ತಿಂಗಳಲ್ಲಿ ಕನಿಷ್ಠ 20 ಸಾವಿರ ಸರ್ವೇ ನಂಬರ್‌ಗೆ ಒನ್ ಟು ಫೈವ್ ದಾಖಲೆಗಳನ್ನು ಮೊಬೈಲ್ ಆ್ಯಪ್ ಮೂಲಕ ಸಿದ್ಧಪಡಿಸುವ ಚಿಂತನೆ ಇದೆ ಎಂದು ಹೇಳಿದರು.
ಆರ್‌ಟಿಸಿಗೆ ಆಧಾರ್ ಜೋಡಿಸುವ ಅಭಿಯಾನ ನಡೆಸಿದ್ದು, 15 ಲಕ್ಷ ಆರ್‌ಟಿಸಿ ಮಾಲಕರ ಪೈಕಿ 8.80 ಲಕ್ಷ ಆರ್‌ಟಿಸಿ-ಆಧಾರ್ ವಿಲೀನ ಮಾಡಲಾಗಿದೆ. ಗ್ರಾಮ ಲೆಕ್ಕಿಗರು ಮನೆ ಬಾಗಿಲಿಗೆ ತೆರಳಿ ಈ ಕಾರ್ಯ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 13.65 ಲಕ್ಷ ಸರ್ವೇ ನಂಬರ್‌ಗಳಿದ್ದು, ಮೂರು ತಿಂಗಳಿಗೊಮ್ಮೆ ಗ್ರಾಮ ಲೆಕ್ಕಿಗರು ತಪಾಸಣೆ ಮಾಡಿ ಆ್ಯಪ್‌ಗೆ ತಂದಿದ್ದಾರೆ. ಆ್ಯಪ್‌ಗೆ ತಂದಿರುವ ಸರ್ವೇ ನಂಬರ್‌ಗಳಿಗೆ ಖುದ್ದು ಭೇಟಿ ಮಾಡಲಿದ್ದು ಮಾರ್ಚ್ ಒಳಗಾಗಿ ಸ್ಥಳ ತನಿಖೆ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು.
ಒಟ್ಟು 10,500 ಗ್ರಾಮ ಲೆಕ್ಕಿಗರ ಹುದ್ದೆಗಳು ಮಂಜೂರಾಗಿದ್ದು, ಕಚೇರಿಗಳಲ್ಲಿ 2 ಸಾವಿರ ಹಾಗೂ ಕ್ಷೇತ್ರಕಾರ್ಯದಲ್ಲಿ 8 ಸಾವಿರ ಗ್ರಾಮಲೆಕ್ಕಿಗರಿದ್ದಾರೆ. ಇನ್ನೂ 1,000 ಗ್ರಾಮ ಲೆಕ್ಕಿಗರ ನೇಮಕಾತಿ ಮಾಡಿಕೊಳ್ಳುತ್ತೇವೆ. ಅಲ್ಲದೆ, ಇನ್ನು ಮುಂದೆ ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ಕೂಡ ನೀಡುವುದರಿಂದ ಅವರ ಹಾಜರಾತಿ, ಕಾರ್ಯಕ್ಷಮತೆ ಎಲ್ಲವೂ ಡಿಜಟಲೀಕರಣಗೊಳ್ಳಲಿದೆ ಎಂದರು.