ಮೈಸೂರು: ಮೈಸೂರು ವಿವಿಗೆ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿನ ಹಸ್ತಪ್ರತಿಗಳು ಜ್ಞಾನ ಭಂಡಾರವಾಗಿದ್ದು, ಇವುಗಳನ್ನು ಸಂರಕ್ಷಿಸುವ ಸಲುವಾಗಿ ಹಂತ ಹಂತವಾಗಿ ಡಿಜಿಟಿಲೀಕರಣಗೊಳಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ತಿಳಿಸಿದರು.
ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಮಂಗಳವಾರ ಪ್ರಾಚ್ಯವಿದ್ಯಾ ಸಂಶೋಧನಾಲಯ, ಪ್ರಾಚೀನ ಇತಿಹಾಸ ಹಾಗೂ ಪ್ರಾಚ್ಯವಿಜ್ಞಾನ ಮತ್ತು ಸಂಗ್ರಹಾಲಯ ವಿಜ್ಞಾನ ಹಾಗೂ ಮಹಾರಾಜ ಕಾಲೇಜಿನ ಸಂಸ್ಕೃತ ವಿಭಾಗದಿಂದ ಆಯೋಜಿಸಿದ್ದ ವಿಶ್ವಪರಿಸರ ದಿನದ ಅಂಗವಾಗಿ ಅವರು ಗಿಡ ನೆಟ್ಟು ನೀರೆರೆದರು. ಜತೆಗೆ ಫ್ಯೂಮಿಂಗ್ ಚೇಂಬರ್ ಉದ್ಘಾಟಸಿ ಮಾತನಾಡಿದರು.
ದೊಡ್ಡ ಜ್ಞಾನ ನಿಧಿ: ಭಾರತೀಯ ಪರಂಪರೆಯ ವೈವಿಧ್ಯಮಯ ಜ್ಞಾನ ಸಂಪತ್ತಾಗಿರುವ ತಾಳೆಗರಿ, ಹಸ್ತಪ್ರತಿಗಳ ಸಂರಕ್ಷಣೆಗೆ ಅನುಕೂಲವಾಗುವಂತಹ ಫ್ಯೂಮಿಂಗ್ ಚೇಂಬರ್ ಉದ್ಘಾಟಿಸಲಾಗಿದೆ. ಓಆರ್‌ಐ ವಿವಿಗೆ ಒಂದು ದೊಡ್ಡ ಜ್ಞಾನ ನಿಧಿಯಾಗಿದೆ. ಇದನ್ನು ಅತ್ಯಂತ ಸೂಕ್ಷ್ಮವಾಗಿ ಕಾಪಾಡ ಬೇಕಾಗಿದೆ. ಅದಕ್ಕಾಗಿ ಹಂತ ಹಂತವಾಗಿ ಡಿಜಿಟಿಲೀಕರಣಗೊಳಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ಲ್ಯಾಬ್ ಮಾದರಿಯಲ್ಲಿ ಸಂರಕ್ಷಣೆ: ಓಆರ್‌ಐ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ನಿವೃತ್ತ ಅಧೀಕ್ಷಕ ಪುರಾತತ್ವ ರಸಾಯನ ಶಾಸ್ತ್ರಜ್ಞ ಡಾ.ಸುಬ್ಬರಾವ್ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದ ತಾಳೆಗರಿ, ಹಸ್ತಪ್ರತಿ, ಕಾಗದ ಹಸ್ತಪ್ರತಿಗಳನ್ನು ಅಡಗಿರುವ ವಿಷಯವನ್ನು ಸ್ವಷ್ಟವಾಗಿ ಗೋಚರಿಸುವಂತೆ ಫ್ಯೂಮಿಂಗ್ ಚೇಂಬರ್ ಮೂಲಕ ಡಿಜಿಟಲೀಕರಣ ಮಾಡಲು ಇದು ಸುಗಮ ಹಾದಿಯಾಗಿದೆ. ಫ್ಯೂಮಿಂಗ್ ಚೇಂಬರ್ ಒಂದು ಕೆಮಿಕಲ್ ಲ್ಯಾಬ್ ಮಾದರಿಯಲ್ಲಿ ಹಸ್ತಪ್ರತಿಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಈ ವಿಧಾನದಿಂದ ಮುಂದಿನ ಗಣಕೀಕರಣ(ಡಿಜಿಟಿಲೀಕರಣ)ಇದು ಅನುಕೂಲವಾಗಲಿದೆ. ಎರಡು ವಿಧದ ಕೆಮಿಕಲ್‌ನ ಉಪಚಾರ ಈ ಲ್ಯಾಬ್ ನೀಡಲಾಗುತ್ತದೆ. ಇದೊಂದು ಸರಳ ವಿಧಾನವಾಗಿದ್ದು, ಹೊಸದಾಗಿ ಈ ವ್ಯವಸ್ಥೆಗೆ ನಾವು ಮುಂದಾಗಿದ್ದೇವೆ. ಸಾವಿರಾರು ಹಸ್ತಪ್ರತಿಗಳನ್ನು ಸಂರಕ್ಷಣೆಗೆ ಅಗತ್ಯ ಉಪಚಾರ ನೀಡಲು ವ್ಯವಸ್ಥೆಯಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಅತ್ಯ ಅಮೂಲ್ಯವಾದ ರಾಜನೀತಿ, ಅರ್ಥಶಾಸ್ತ್ರ, ಯುದ್ಧವಿಜ್ಞಾನ, ವ್ಯಾಪಾರ ನಿರ್ವಹಣೆ, ಆಡಳಿತ ನಾಗರಿಕ ಕಾನೂನು ಕುರಿತ ಪ್ರಮುಖ ಕೃತಿಯಾದ ಕೌಟಿಲ್ಯನ ಅರ್ಥಶಾಸ್ತ್ರ ಗ್ರಂಥದ ಮೂಲ ತಾಳಗರಿ ಹಸ್ತಪ್ರತಿ ಇಲ್ಲಿ ಇರುವುದು ವಿಶೇಷವಾಗಿದೆ. ಈ ಡಿಜಿಟಲೀಕರಣದಿಂದ ಈ ಮಹಾಗ್ರಂಥಕ್ಕೂ ಆಧುನಿಕ ಸ್ವರ್ಶ ನೀಡಿ ಶಾಶ್ವತ ಸಂರಕ್ಷಣೆ ಸಹಕಾರಿಯಾಗಲಿದೆ ಎಂದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮಹಾರಾಜ ಕಾಲೇಜಿ ಪ್ರಾಂಶುಪಾಲರಾದ ಅನಿಟಾ ಬ್ರಾಗ್ಸ್, ಪ್ರಾಚ್ಯವಿಜ್ಞಾನ ಮತ್ತು ಸಂಗ್ರಹಾಲಯ ಮುಖ್ಯ ಸಮನ್ವಯ ಅಧಿಕಾರಿ ಡಾ.ರೋಹಿತ್ ಈಶ್ವರ್ ಇದ್ದರು.