Advertisement
ಸಾವಿರಾರು ವಿದ್ಯಾರ್ಥಿಗಳು ಇರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಮೇಲೆ ನಿಗಾ ವಹಿಸುವುದು ಕಷ್ಟ ಸಾಧ್ಯ. ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ, ತರಗತಿಗಳಿಗೆಗೈರಾಗುವುದು, ವಿವಿಧ ಚಟುವಟಿಕೆಗಳಿಂದ ದೂರ ಉಳಿಯುವ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ಅಶಿಸ್ತಿಗೆ ಕಡಿವಾಣ ಹಾಕುವಕಾರಣಕ್ಕೆ ಅಂಜುಮನ್ ಇಸ್ಲಾಂ ಸಂಸ್ಥೆಯ ಎಲ್ಲಾ ಕಾಲೇಜುಗಳಿಗೆ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದೆ.
Related Articles
Advertisement
ಶಿಕ್ಷಕರಿಗೂ ಇದೇ ಹಾಜರಾತಿ ವ್ಯವಸ್ಥೆ ಕಡ್ಡಾಯ! : ಡಿಜಿಟಲ್ ಹಾಜರಾತಿ ವ್ಯವಸ್ಥೆ ಶಿಕ್ಷಕರಿಗೂ ಕಡ್ಡಾಯಗೊಳಿಸಲಾಗಿದೆ. ಸಂಬಂಧಿಸಿದ ಕಾಲೇಜುಗಳ ಶಿಕ್ಷಕರ ಹಾಜರಾತಿ ಆಯಾ ಪ್ರಾಚಾರ್ಯರು ನಿರ್ವಹಿಸುತ್ತಾರೆ. ಶಿಕ್ಷಕರು ಕೂಡ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗುವಂತಾಗಿದೆ. ಈ ವ್ಯವಸ್ಥೆ ನಿರ್ವಹಣೆಗಾಗಿ ಪ್ರತಿಯೊಂದು ಕಾಲೇಜುಗಳಲ್ಲಿ ಪ್ರತ್ಯೇಕ ಕೇಂದ್ರಗಳನ್ನು ಮಾಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರವೇಶ ದ್ವಾರದಿಂದಲೇ ಆರಂಭ : ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಸಂಖ್ಯೆ ಹೊಂದಿದ ಚಿಪ್ ಆಧಾರಿತ ಐಡಿ ಕಾರ್ಡ್ ನೀಡಲಾಗಿದೆ. ಕಾಲೇಜು ಪ್ರವೇಶ ದ್ವಾರದಲ್ಲಿ ಈ ಕಾರ್ಡ್‌ನ್ನು ಗುರುತಿಸುವ ಸೆನ್ಸಾರ್ ಆಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿ ಕಾಲೇಜು ಪ್ರವೇಶಿಸುತ್ತಿದ್ದಂತೆಯೇ ಹಾಜರಾತಿ ಆರಂಭವಾಗುತ್ತದೆ. ಹೊರ ಹೋಗಬೇಕಾದರೂ ಇದೇ ಸೆನ್ಸಾರ್ ಬ್ಯಾರಿಕೇಡ್ ಮೂಲಕವೇ ಹೋಗಬೇಕು. ಹೀಗಾಗಿ ಒಳ ಮತ್ತು ಹೊರ ಹೋಗುವ ಪ್ರತಿ ಬಾರಿಯ ಸಂದೇಶಗಳು ಪಾಲಕರ ಮೊಬೈಲ್‌ಗೆ ರವಾನೆಯಾಗುತ್ತದೆ. ಹೀಗಾಗಿ ತಮ್ಮ ಮಕ್ಕಳು ಕಾಲೇಜಿನಲ್ಲಿ ಎಷ್ಟು ಸಮಯ ಇದ್ದರೂ ಎನ್ನುವುದು ಖಾತ್ರಿಯಾಗಲಿದೆ.
ಕ್ಲಾಸ್‌ಗೆ ಬಂಕ್ ಹಾಕುವವರ ಪ್ರಮಾಣದಲ್ಲಿ ಭಾರೀ ಇಳಿಕೆ : ಈ ವ್ಯವಸ್ಥೆ ಜಾರಿಯಾದ ನಂತರದಲ್ಲಿ ಹಾಜರಾತಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಾರ್ಡ್‌ಗಳನ್ನು ಸಹಪಾಠಿಗಳಿಗೆ ನೀಡಿ ದುರುಪಯೋಗ ಪಡಿಸಿಕೊಂಡರೂ ತರಗತಿಯ ಹಾಜರಾತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕಾಲೇಜಿಗೆ ಬಂದು ತರಗತಿಗಳಿಗೆ ಬಂಕ್ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಬಂಕ್ ಹೊಡೆದು ಬೀದಿ ಬೀದಿ ಸುತ್ತುತ್ತಿದ್ದ ವಿದ್ಯಾರ್ಥಿಗಳಿಗಂತೂ ಇದು ಯಾಕಾದರೂ ಬಂತು ಎಂದು ಗೊಣಗುವಂತಾಗಿದೆ. ಪಾಲಕರ ಭಯದಿಂದಲಾದರೂ ವಿದ್ಯಾರ್ಥಿಗಳು ಕ್ಲಾಸಿಗೆ ಬಂದು ನಾಲ್ಕು ಅಕ್ಷರ ಕಲಿಯುತ್ತಾರಲ್ಲ ಎನ್ನುವ ನಿರೀಕ್ಷೆ ಸಂಸ್ಥೆಗಿದೆ.
ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಯಾದ ನಂತರ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಶೇ.99 ಹಾಜರಾತಿಯಿದೆ. ಈವ್ಯವಸ್ಥೆ ಅಳವಡಿಸಿದ ಸಂಸ್ಥೆ ಎಂಬ ಹೆಗ್ಗಳಿಕೆ ನಮ್ಮ ಸಂಸ್ಥೆಗಿದೆ. ಪ್ರಾಯೋಗಿಕವಾಗಿ ಕಾಲೇಜು ಹಂತದಲ್ಲಿ ಯಶಸ್ವಿಯಾಗಿದೆ. ಇದನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ವಿಸ್ತರಿಸಲು ಚಿಂತಿಸಲಾಗಿದ್ದು, ಶೀಘ್ರದಲ್ಲಿ ಜಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದು ಹಾಗೂ ಅವರ ಸುರಕ್ಷತೆ ಕಾಪಾಡುವುದು ಇದರ ಉದ್ದೇಶವಾಗಿದೆ. -ಮಹ್ಮದ್ ಯುಸೂಫ್ ಸವಣೂರ, ಅಧ್ಯಕ್ಷ, ಅಂಜುಮನ್ ಇಸ್ಲಾಂ ಸಂಸ್ಥೆ
ನಮ್ಮ ಒಳ್ಳೆಯದಕ್ಕಾಗಿ ಡಿಜಿಟಲ್ ಹಾಜರಾತಿ ಜಾರಿಗೆ ತಂದಿದ್ದಾರೆ. ಇದು ಬಂದಾಗಿನಿಂದ ಹೊರಗಡೆ ತಿರುಗಾಡುವುದು ಕಡಿಮೆಯಾಗಿದೆ. ಹೊರಗಡೆ ಹೋದರೆ ನಮ್ಮ ತಂದೆಗೆ ಮೆಸೇಜ್ ಹೋಗುತ್ತದೆ ಎನ್ನುವ ಭಯವಿದೆ. ಹೀಗಾಗಿ ಒಮ್ಮೆ ಒಳ ಬಂದರೆ ಕಾಲೇಜು ಮುಗಿದ ನಂತರವೇ ಹೊರ ಹೋಗುತ್ತಿದ್ದೇವೆ. ಇದರಿಂದ ನಮ್ಮಲ್ಲಿ ಕಾಲೇಜಿನ ಶಿಸ್ತು ಮೂಡಲು ಕಾರಣವಾಗಿದೆ. – ಸಾನಿಯಾ ಶೇಖ್, ಕಾಲೇಜು ವಿದ್ಯಾರ್ಥಿನಿ
-ಹೇಮರಡ್ಡಿ ಸೈದಾಪುರ