ಬೆಂಗಳೂರು: ಜಿಲ್ಲಾಡಳಿತಕ್ಕೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಇದರ ಭಾಗವಾಗಿಯೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ. ಜಿಲ್ಲಾಡಳಿತ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಡಿಜಿಟಲೀಕರಣ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಈ ಕೆಲಸ ಸಂಪೂರ್ಣಗೊಳ್ಳಲಿದೆ.
ಆಸ್ತಿಯ ಇ-ಸ್ವತ್ತು ಕೆಲಸಕ್ಕಾಗಿ ಗ್ರಾಮೀಣ ಮತ್ತು ಪಂಚಾಯ್ತಿ ರಾಜ್ ಇಲಾಖೆ, ನಗರ ಜಿಪಂ ವ್ಯಾಪ್ತಿಯ ಪ್ರತಿ ಗ್ರಾಪಂಗೆ 8ರಂತೆ ಸುಮಾರು 250 ಟ್ಯಾಬ್‌ಗಳನ್ನು ಖರೀದಿಸಲು ಅನುಮತಿ ನೀಡಿದೆ. ಒಂದು ಗ್ರಾಪಂನಲ್ಲಿ ಡಿಜಿಟಲೀಕರಣ ಕೆಲಸ ಮುಗಿದ ಬಳಿಕ ಮತ್ತೂಂದು ಗ್ರಾಪಂ ಕಾರ್ಯಕ್ಕೆ ಟ್ಯಾಬ್‌ಗಳನ್ನು ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಪಂ ಉಪ ಕಾರ್ಯದರ್ಶಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ನಗರ ಜಿಪಂ ವ್ಯಾಪ್ತಿಯಲ್ಲಿ ಸುಮಾರು 96 ಗ್ರಾಪಂಗಳಿವೆ. ಈ ಗ್ರಾಪಂಗಳಲ್ಲಿ ಮೂರು ಹಂತಗಳಲ್ಲಿ ಆಸ್ತಿ ಡಿಜಿಟಲೀಕರಣ ಕೆಲಸ ನಡೆಯಲಿದೆ. ಮೊದಲ ಹಂತದಲ್ಲಿ ಸುಮಾರು 30 ಗ್ರಾಪಂ, ಎರಡನೆ ಹಂತದಲ್ಲಿ 32 ಮತ್ತು ಮೂರನೇ ಹಂತದಲ್ಲಿ 34 ಪಂಚಾಯ್ತಿಗಳಲ್ಲಿ ಇ-ಸ್ವತ್ತು ತಂತ್ರಾಂಶ ಕಾರ್ಯ ನಡೆಯಲಿದೆ.
ಮೊದಲ ಹಂತವಾಗಿ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ, ಚಿಕ್ಕಜಾಲ, ದೊಡ್ಡ ಜಾಲ ಗ್ರಾಪಂನಲ್ಲಿ ಈಗಾಗಲೇ ಕೆಲಸ ಆರಂಭವಾಗಿದೆ. ಅಲ್ಲದೆ ಅನೇಕಲ್ ತಾಲೂಕಿನ ಹೆನ್ನಾಗರ ಗ್ರಾಪಂನಲ್ಲೂ ಕೆಲಸ ನಡೆದಿದೆ ಎಂದು ನಗರ ಜಿಪಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶಗಳಲ್ಲಿ ಸೇರ್ಪಡೆಯಾಗದಿರುವ ಮತ್ತು ತೆರಿಗೆ ವ್ಯಾಪ್ತಿಗೆ ಹೊರಗುಳಿದರು ಎಲ್ಲಾ ಆಸ್ತಿಗಳನ್ನು ಗುರುತಿಸುವ ಪ್ರಯೋಗಿಕ ಕೆಲಸ ಇದಾಗಿದ್ದು, ಈಗಾಗಲೇ ಈ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ನಕ್ಷೆ ಪ್ರತಿಯೊಂದಿಗೆ ಸ್ಥಳ ಪರಿಶೀಲನೆ: ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಪಡೆದ ನಕ್ಷೆ ಪ್ರತಿಯೊಂದಿಗೆ ಅಧಿಕಾರಿಗಳು ಆಯಾ ಗ್ರಾಮಗಳಿಗೆ ತೆರಳಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಅಲ್ಲದೆ ಆಸ್ತಿ ಮಾಲೀಕರಿಂದ ಸಂಬಂಧಪಟ್ಟ ಮಾಹಿತಿ ಮತ್ತು ದಾಖಲೆಗಳನ್ನು ಪಡೆದು ಇ-ಸ್ವತ್ತಿನ ಮೊಬೈಲ್ ಆ್ಯಪ್‌ನಲ್ಲಿ ಅಳವಡಿಕೆ ಮಾಡಲಿದ್ದಾರೆ. ಗ್ರಾಮವಾರು ಠಾಣಾ ಆಸ್ತಿಗಳನ್ನು ಒಳಗೊಂಡ ಕಂದಾಯ ನಕ್ಷೆಯನ್ನು ಗ್ರಿಡ್‌ವಾರು ತಯಾರಿಸಿ ನಕ್ಷೆಗಳ ಎರಡು ಪ್ರತಿಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪಡೆಯಲಿದ್ದಾರೆ.
ಮಾನವ ಸಂಪನ್ಮೂಲದ ಬಳಕೆ: ಸದರಿ ಪ್ರಕ್ರಿಯೆಯಲ್ಲಿ ಗ್ರಾಪಂ ಸಿಬ್ಬಂದಿಗಳೊಂದಿಗೆ ಹೊರಗುತ್ತಿಗೆ ಸಂಸ್ಥೆಯಿಂದ ಪಡೆಯಲಾದ ನೌಕರರು ಕೂಡ ಭಾಗವಹಿಸಲಿದ್ದಾರೆ. ಪ್ರತಿ ಗ್ರಾಪಂಗೆ 8 ಮಂದಿ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಗ್ರಾಪಂ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕ್ಲರ್ಕ್ ,ಡಾಟಾ ಆಪರೇಟರ್ ಮತ್ತು ಬಿಲ್‌ಕಲೆಕ್ಟರ್‌ಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ, ಪ್ರತಿ ತಂಡಕ್ಕೆ ಹೊರಗುತ್ತಿಗೆಯಿಂದ ಪಡೆದ ಇಬ್ಬರು ನೌಕರರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಇ-ಸ್ವತ್ತು, ಮೊಬೈಲ್ ಆ್ಯಪ್ ಬಳಕೆ ಬಗ್ಗೆ ಗ್ರಾಪಂ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ತರಬೇತಿಯನ್ನು ನೀಡಲಾಗಿದೆ.
ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದ್ದು, ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದೆ. ಮೂರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳುವ ವಿಶ್ವಾಸವಿದೆ.
-ಡಾ.ಸಿದ್ಧರಾಮಯ್ಯ, ನಗರ ಜಿಪಂ ಉಪ ಕಾರ್ಯದರ್ಶಿ
* ದೇವೇಶ ಸೂರಗುಪ್ಪ