ಹೊಸದಿಲ್ಲಿ: ದೇಶದಲ್ಲಿ ಡಿಜಿಟಲ್ ಕ್ರಾಂತಿ ಉಂಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಅದಕ್ಕೆ ಆನ್‌ಲೈನ್‌ನಲ್ಲಿ ವೈದ್ಯಕೀಯ ಸಮಾಲೋಚನೆಗೆ ಅನು ಕೂಲವಾಗಿರುವ “ಇ- ಸಂಜೀವಿನಿ’ ಆ್ಯಪ್ ಅತ್ಯುತ್ತಮ ಉದಾಹರಣೆ ಎಂದು ಹೇಳಿದ್ದಾರೆ.
ತಿಂಗಳ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್’ನ 98ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, “ಇ-ಸಂಜೀವಿನಿ’ ಆ್ಯಪ್‌ನಿಂದ ಇದು ವರೆಗೆ 10 ಕೋಟಿ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ದೇಶದ ಸಾಮಾನ್ಯ ಜನರು, ಮಧ್ಯಮ ವರ್ಗದವರು ಅಥವಾ ದುರ್ಗಮ ಪ್ರದೇಶದ ನಿವಾಸಿಗಳಿಗೆ ಈ ಆ್ಯಪ್‌ನಿಂದ ಸಹಾಯವಾಗಿದೆ. ಕೊರೊನಾ ಕಾಲದಲ್ಲಿ ಈ ವ್ಯವಸ್ಥೆ ಅತ್ಯುತ್ತಮ ಎಂದು ಸಾಬೀತಾಗಿದೆ. ಅದನ್ನು ಬಳಸಿದ ವೈದ್ಯರು, ರೋಗಿಗಳನ್ನು ಅಭಿನಂದಿಸುತ್ತೇನೆ ಎಂದರು.
ಇತರ ದೇಶಗಳಿಗೂ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಮೂಲಕ ಹಣ ಪಾವತಿ ಮಾಡಲು ಸಾಧ್ಯವಾಗುತ್ತದೆ. ಕೆಲವು ದಿನಗಳ ಹಿಂದೆ ಭಾರತ ಮತ್ತು ಸಿಂಗಾಪುರದ ನಡುವೆ ಈ ನಿಟ್ಟಿನಲ್ಲಿ ಒಪ್ಪಂದ ಏರ್ಪಟ್ಟಿತ್ತು. ಇದರ ಜತೆಗೆ, ಈಗ ಶುಚಿತ್ವದ ಅಭಿಯಾನವನ್ನು ಜನರು ತಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಭಾವಿಸಿ ಅದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಲಾಲಿ ಹಾಡಿಗೆ ಮೋದಿ ಮೆಚ್ಚುಗೆ
ಚಾಮರಾಜ ನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಅವರ “ಮಲಗು ಕಂದ, ಮಲಗು ಕೂಸೆ’ ಜೋಗುಳ ಹಾಡಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ ಪ್ರಯುಕ್ತ ಆಯೋಜಿಸಲಾಗಿದ್ದ ಜೋಗುಳ ಹಾಡು, ರಂಗೋಲಿ ಗೀತೆ ಬರೆಯುವ ರಾಷ್ಟ್ರ ಮಟ್ಟದ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮಂಜುನಾಥ್ ಜೋಗುಳ ಹಾಡು ಬರೆಯುವ ಸ್ಪರ್ಧೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿಯೇ ಘೋಷಿಸಿದ್ದಾರೆ. ಒಟ್ಟು 35 ಸೆಕೆಂಡುಗಳ ಕಾಲ ಹಾಡಿನ ಒಂದು ಭಾಗವನ್ನು ಕಾರ್ಯಕ್ರಮದಲ್ಲಿ ಕೇಳಿಸಲಾಯಿತು.