Advertisement

ಕಾಸು ಕಳೆದುಕೊಳ್ಳಲು ಡಿಜಿಟಲ್‌ ವಿಧಾನ; ಹೆಚ್ಚುತ್ತಿದೆ, ಜೋಪಾನ!

06:00 AM Oct 15, 2018 | |

ವ್ಯಾಲೆಟ್‌ ಮೂಲಕ ಮಾಡುವ ಅಥವಾ ಇನ್ನಾವುದೇ ಮಾದರಿಯಲ್ಲಿ ಮಾಡುವ ತಂತ್ರಜ್ಞಾನ ಆಧಾರಿತ ಕಳ್ಳತನಗಳನ್ನು ಕಂಡುಹಿಡಿಯುವುದು ಕಷ್ಟವಲ್ಲ. ವ್ಯಾಲೆಟ್‌ಗೆ ಲಿಂಕ್‌ ಆದ ಬ್ಯಾಂಕ್‌ ಅಕೌಂಟ್‌ನ ಜಾಡು ಹಿಡಿದು ಹಣ ವಂಚನೆಯ ಜಾಲ ಪತ್ತೆಯೂ ಕಷ್ಟವಲ್ಲ. ಪ್ರಶ್ನೆ ಅದಲ್ಲ, ಒಂದು ಕಾರ್ಡ್‌ನ ವಿವರ ಪಡೆಯುವ ಖದೀಮರು, ಖಡಕ್ಕಾಗಿ ಆ ಖಾತೆಯಲ್ಲಿರಬಹುದಾದ ಮೊತ್ತವನ್ನೇ ನಮೂದಿಸಿ ವಂಚಿಸುವುದು ಗಮನಿಸಬೇಕಾದ ಅಂಶ. 

Advertisement

* ದುಬೈನಲ್ಲಿರುವವನ ಪತ್ನಿಗೆ ಡೆಬಿಟ್‌ ಕಾರ್ಡ್‌ನ್ನು ಒದಗಿಸಿದ ಬ್ಯಾಂಕ್‌ ಒಂದರಲ್ಲಿ ಖುದ್ದು ಬ್ಯಾಂಕ್‌ ಮ್ಯಾನೇಜರ್‌ ಪರಿಪರಿಯಾಗಿ ಮನದಟ್ಟು ಮಾಡಿಸುತ್ತಿದ್ದರು, ನಮ್ಮ ಬ್ಯಾಂಕ್‌ ಯಾವುದೇ ಕಾರಣಕ್ಕೆ ನಿಮ್ಮ ಕಾರ್ಡ್‌ ನಂಬರ್‌, ಸಿ, ಓಟಿಪಿ ಎಂದು ಫೋನ್‌ ಮಾಡುವುದಿಲ್ಲ. ಆ ಥರಹದ ಯಾವುದೇ ಕರೆಗೆ ಮಾಹಿತಿ ನೀಡಬೇಡಿ. ಸಮಸ್ಯೆ ಎನ್ನಿಸಿದ ತಕ್ಷಣ ಬ್ರಾಂಚ್‌ಗೆ ಬಂದು ನಮ್ಮನ್ನು ಕೇಳಿ. ಮೋಸ ಹೋಗಬೇಡಿ! 

* ಪಾಸ್‌ಬುಕ್‌ ಎಂಟ್ರಿ ಮಾಡಿಸಲು ಕ್ಯೂನಲ್ಲಿ ನಿಂತವನಿಗೆ ಕರೆ ಬರುತ್ತದೆ, ನಿಮ್ಮ ಎಟಿಎಂ ಕಾರ್ಡ್‌ ಬ್ಲಾಕ್‌ ಆಗುತ್ತಿದೆ. ದಯವಿಟ್ಟು ನಿಮ್ಮ ಕಾರ್ಡ್‌ ನಂಬರ್‌ ಹೇಳಿ, ಒಂದು ಓಟಿಪಿ ಬರುತ್ತದೆ ಹೇಳಿ. ಕ್ಯೂ ಕರಗಿ ಈತನ ಸರದಿ ಬರುವ ವೇಳೆಗೆ ಅಕೌಂಟ್‌ನಲ್ಲಿರುವ 20 ಸಾವಿರ ರೂ. ಕರಗಿರುತ್ತದೆ! ಒಬ್ಟಾಕೆ 18 ಬಾರಿ ಕರೆ ಮಾಡಿದಾತನಿಗೆ ಒಟಿಪಿ ಕೊಟ್ಟು 58 ಸಾವಿರ ರೂ. ಕಳೆದುಕೊಂಡಿದ್ದಿದೆ.

* ಈಗೀಗ ಹೊಸ ಮಾದರಿಯ ಕರೆಗಳು ಬರುತ್ತವೆ. ಆದಾಯ ತೆರಿಗೆ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಟ್ಯಾಕ್ಸ್‌ ರೀಫ‌ಂಡ್‌ ಇದೆ. ಹಾಗಾಗಿ… ಮತ್ತೆ ಡೆಬಿಟ್‌ ಕಾರ್ಡ್‌, ಸಿ, ಓಟಿಪಿ. ಖಾತೆಯಲ್ಲಿನ ಹಣ ಹಾಗಾಗೇ ಮಾಯ!

ಈ ಹಿಂದಿನಿಂದಲೂ ಡೆಬಿಟ್‌ ಕಾರ್ಡ್‌ನ ವಿವರ ಪಡೆದು ತಕ್ಷಣಕ್ಕೇ ಅದರ ನಕಲು ಸೃಷ್ಟಿಸಿ ಎಟಿಎಂಗಳಿಂದ ಹಣ ಲಪಟಾಯಿಸುವ ವಿಧಾನ ಜಾರಿಯಲ್ಲಿತ್ತು. ಎಟಿಎಂಗಳಲ್ಲಿ ಪಿನ್‌ ಸಾಕು, ಓಟಿಪಿ ಇಲ್ಲ ಎಂಬುದು ಖದೀಮರಿಗೆ ವರ ಆಗಿತ್ತು. ಜನ ಇದರಿಂದ ಮೋಸ ಹೋಗುತ್ತಿದ್ದುದನ್ನು ಗಮನಿಸಿಯೇ ಬ್ಯಾಂಕ್‌ಗಳು ಹಿಂದಿನ ಮಾದರಿಯ ಡೆಬಿಟ್‌ ಕಾರ್ಡ್‌ಗಳನ್ನು ಉಚಿತವಾಗಿ ಬದಲಾಯಿಸಿ, ಎಲೆಕ್ಟ್ರಾನಿಕ್‌ ಚಿಪ್‌ ಸೇರಿಸಲ್ಪಟ್ಟ ಹೊಸ ಡೆಬಿಟ್‌ ಕಾರ್ಡ್‌ಗಳನ್ನು ತರಿಸುತ್ತಿದ್ದಾರೆ. ಇತ್ತೀಚೆಗೆ, ಹತ್ತಾರು ಬ್ಯಾಂಕ್‌ಗಳು ಇನ್ನೂ ಅವಧಿ ಪೂರೈಸದ ಹಿಂದಿನ ಡೆಬಿಟ್‌ ಕಾರ್ಡ್‌ಗಳನ್ನು ಕೂಡ ಬದಲಿಸಿ ಚಿಪ್‌ ಆಧಾರಿತ ಕಾರ್ಡ್‌ ವಿತರಣೆ ಮಾಡಿದ್ದಾರೆ. ಅಂದರೆ, ಈಗಿನ ಖದೀಮರು ಕಾರ್ಡ್‌ ನಕಲು ಮಾಡಿ ಎಟಿಎಂಗಳಿಂದ ಹಣ ಲಪಟಾಯಿಸುತ್ತಿಲ್ಲ. ಪಿಓಎಸ್‌ಗಳ ಸಹಾಯದಿಂದ ಹಣ ದೋಚುವುದು ಕೂಡ ಈಗ ಅಷ್ಟಾಗಿ ಕಂಡುಬರುತ್ತಿಲ್ಲ. ಆನ್‌ಲೈನ್‌ ಖರೀದಿ ಮಾದರಿ, ಪೇಮೆಂಟ್‌ ಬ್ಯಾಂಕ್‌ ವ್ಯವಸ್ಥೆಯಡಿ ವಂಚನೆ ನಡೆಸಲಾಗುತ್ತಿದೆ.

Advertisement

ಏನಿದು ಪಿಓಎಸ್‌?
ಒಬ್ಬ ವ್ಯಾಪಾರಿ ಹಾಗೂ ಗ್ರಾಹಕನ ನಡುನ ಸೇವೆ ಅಥವಾ ಪದಾರ್ಥ ಖರೀದಿಗೆ ಬಳಕೆದಾರ ಮಾಡುವ ಪಾವತಿಯನ್ನು ಸ್ವೀಕರಿಸುವ ವಿಧಾನಗಳಲ್ಲಿ ತಂತ್ರಜ್ಞಾನವನ್ನು ಆಧರಿಸಿರುವುದು ಪಿಓಎಸ್‌ ಅರ್ಥಾತ್‌ ಪಾಯಿಂಟ್‌ ಆಫ್ ಸೇಲ್‌. ಪಿಓಎಸ್‌ ಮೂಲಕ ಹಣ ಪಾವತಿಸಲು ವ್ಯಾಪಾರಿ ಒಂದು ಟರ್ಮಿನಲ್‌ಅನ್ನು ಹೊಂದಿರಬೇಕಾಗುತ್ತದೆ. ಈ ಟರ್ಮಿನಲ್‌ ಮೂಲಕ ಗ್ರಾಹಕ ತನ್ನ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಸ್ವೀಪ್‌ ಮಾಡಿ, ಪಿನ್‌ ನಂಬರ್‌ ದಾಖಲಿಸಿದಾಗ ಟರ್ಮಿನಲ್‌ನಲ್ಲಿ ನಮೂದಿಸಿದ ಮೊತ್ತ ಗ್ರಾಹಕನ ಬ್ಯಾಂಕ್‌ ಖಾತೆಯಿಂದ ವ್ಯಾಪಾರಿಯ ಖಾತೆಗೆ ಜಮಾಗೊಳ್ಳುತ್ತದೆ. ಬೆಲೆಯ ಆಧಾರದಲ್ಲಿ ಪಿಓಎಸ್‌ ಟರ್ಮಿನಲ್‌ನಲ್ಲಿ ಸೌಕರ್ಯಗಳು ವ್ಯತ್ಯಾಸಗೊಳ್ಳುತ್ತವೆ. ರಸೀದಿ ಮುದ್ರಣಗೊಳ್ಳುವ, ರಸೀದಿ ಮುದ್ರಿಸಿಕೊಡದ ಪಿಓಎಸ್‌ಗಳಿವೆ. ಇದರಲ್ಲೇ ಸಾಫ್ಟ್ವೇರ್‌ ನವೀಕರಣಗೊಂಡಿರುವುದು. ಪಿನ್‌ ಬದಲು ಡಿಜಟಲ್‌ ಸಿಗ್ನೇಚರ್‌ ಕೇಳುವಂತಹದ್ದಿದೆ, ಕೆಲವು ಬೆರಳಚ್ಚಿನ ಮೂಲಕವೂ ಕಾರ್ಯ ನಿರ್ವಹಿಸುತ್ತವೆ. 

ಪಿಓಎಸ್‌ಗಳನ್ನು ಬ್ಯಾಂಕ್‌ಗಳು ಒಡಂಬಡಿಕೆಯ ಅನ್ವಯ ತರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ಹಾಗೂ ಮೊಬೈಲ್‌ ಡಾಟಾ ಸೇವೆಗಳ ಒಪ್ಪಂದ ಸಮೇತದ ವಿಶೇಷ ಆಫ‌ರ್‌ಗಳನ್ನು ಬ್ಯಾಂಕ್‌ಗಳು ಘೋಷಿಸಿ ವ್ಯಾಪಾರಿಗಳನ್ನು ಆಕರ್ಷಿಸುತ್ತಿವೆ. ಏಕಾಏಕಿ ಪಿಓಎಸ್‌ ಯಾರಿಗೋ ವಿತರಣೆಯಾಗುವುದಿಲ್ಲ. ಸಾಮಾನ್ಯವಾಗಿ, ಚಾಲ್ತಿ ಖಾತೆ ಅಥವಾ ಓವರ್‌ ಡ್ರಾಫ್ಟ್ ಸೌಲಭ್ಯ ಹೊಂದಿದವರಿಗೆ ಮಾತ್ರ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಪಿಎಸ್‌ಓಗಳನ್ನು ತರಿಸುತ್ತಾರೆ. ಈ ಪಿಓಎಸ್‌ಗಳಿಗೆ ಶುಲ್ಕವಿದೆ, ಬಾಡಿಗೆ ಇದೆ, ಸೇವಾ ತೆರಿಗೆಗಳಿವೆ.

ಸುಲಭವಿತ್ತು ಪತ್ತೆ!
ಪೊಲೀಸ್‌ ವ್ಯವಸ್ಥೆ ಹಾಗೂ ಬ್ಯಾಂಕ್‌ಗಳು ಸಮನ್ವಯದಿಂದ ಮತ್ತು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ಪಿಓಎಸ್‌ ಬಳಸಿ ಹಣ ದೋಚುವ ಕಳ್ಳರನ್ನು ಸುಲಭವಾಗಿ ಹಿಡಿಯಬಹುದಿತ್ತು. ಗ್ರಾಹಕನೊಬ್ಬ ಹಣ ವಂಚನೆಯ ಬಗ್ಗೆ ಬ್ಯಾಂಕ್‌ಗೆ ದೂರಿದಾಗ ಬ್ಯಾಂಕ್‌ಗಳಿಗೆ ಯಾವ ಪಿಓಎಸ್‌ನಿಂದ ಹಣ ಎತ್ತಲಾಗಿದೆ ಎಂಬುದು ಗೊತ್ತಾಗುತ್ತದೆ. ಆ ಪಿಓಎಸ್‌ ಯಾರಿಗೆ ಸೇರಿದ್ದು ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದು. ಅವರ ಹೆಸರು, ವಿಳಾಸ ಸಿಗುತ್ತದೆ. ಒಂದೊಮ್ಮೆ ಪಿಓಎಸ್‌ ಮೂಲಕ ಸಂಗ್ರಹವಾದ ಹಣ ಚಾಲ್ತಿ ಖಾತೆಯಲ್ಲಿಯೇ ಉಳಿದಿದ್ದರೆ ಅದನ್ನು ಹಿಂಪಡೆಯದಂತೆ ನಿರ್ಬಂಧಿಸಬಹುದು. ಸೈಬರ್‌ ಕ್ರೆ„ಮ್‌ ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಇಂತಹ ವ್ಯಕ್ತಿಗಳನ್ನು ಬಂಧಿಸಬಹುದಿತ್ತು.

ಸಾಮಾನ್ಯವಾಗಿ ಇಂಥ ಘಟನೆ ನಡೆಯುವುದಿಲ್ಲ. ವಂಚನೆಗೊಳಗಾದ ಗ್ರಾಹಕ, ತನ್ನ ಮೂರ್ಖತನವನ್ನು ಬರಂಗ ಪಡಿಸಿಕೊಳ್ಳಲು ಹಿಂಜರಿದು ಸುಮ್ಮನಾಗಿಬಿಡುತ್ತಾನೆ. ಹಾಗೊಮ್ಮೆ ಗ್ರಾಹಕ ಗೋಳು ತೋಡಿಕೊಂಡಾಗ ಅವನ ಕಾರ್ಡ್‌ಅನ್ನು ಸ್ಥಗಿತಗೊಳಿಸುವುದಕಷ್ಟೇ ಬ್ಯಾಂಕ್‌ಗಳು ಸೀಮಿತವಾಗಿವೆ. ಸದರಿ ಬಳಕೆದಾರನೇ ಫೋನ್‌ ಮಾಡಿದವರಿಗೆ ಮಾಹಿತಿ ಕೊಟ್ಟವನಾದುದರಿಂದ ಅವನಲ್ಲಿ ಅಪರಾಧಿ ಪ್ರಜ್ಞೆ ಇರುತ್ತದೆ. ಕೊನೆಪಕ್ಷ, ಇನ್ನು ಮುಂದೆ ಖಾತೆಯ ಹಣ ಮಾಯವಾಗದಿದ್ದರೆ ಸಾಕು ಎಂಬ ನಿರೀಕ್ಷೆಯಷ್ಟೇ ಇರುತ್ತದೆ. ಹಾಗಾಗಿ ಆತ ದೂರಿನ ಬೆನ್ನು ಹತ್ತುವುದಿಲ್ಲ.

ಇತ್ತ ಬ್ಯಾಂಕ್‌ ಅಧಿಕಾರಿಗಳು, ಈಗಿರುವ ಕೆಲಸದ ಜೊತೆ ಇನ್ನಷ್ಟು ಕೆಲಸವನ್ನು ಮತ್ತೇಕೆ ಮೈಮೇಲೆ ಎಳೆದುಕೊಳ್ಳುತ್ತಾರೆ? ಅಷ್ಟಕ್ಕೂ ವಂಚಕರಿಗೆ ಪಿಓಎಸ್‌ ನೀಡುವಲ್ಲಿ ನಡೆದಿರುವ ಗೋಲ್‌ಮಾಲ್‌ಗೆ ಯಾವುದೋ ಬ್ಯಾಂಕ್‌ ಅಧಿಕಾರಿಯೇ ಶಾಮೀಲಾಗಿರುತ್ತಾನೆ ಅಥವಾ ಯಾಮಾರಿರುತ್ತಾನೆ. ತಮ್ಮವರನ್ನು ಸಂಕಷ್ಟಕ್ಕೀಡು ಮಾಡಲು ಯಾರು ಸಿದ್ಧರಿರುತ್ತಾರೆ? ದೂರು ಕಡಿಮೆ ಬಂದಷ್ಟೂ ಪೊಲೀಸರಿಗೆ ನೆಮ್ಮದಿ, ಕ್ರೆ„ಮ್‌ ಅಂಕಿಅಂಶಕ್ಕೆ ಸಮಾಧಾನ! ಈ ಕಾರಣದಿಂದ, 10 ಪ್ರಕರಣಗಳಲ್ಲಿ ದಾಖಲೆ ಸೇರುವುದು ಒಂದು ಮಾತ್ರ.

ಈಗ ವ್ಯಾಲೆಟ್‌!
ಪೇಮೆಂಟ್‌ ಬ್ಯಾಂಕ್‌ ಪದ್ಧತಿ ಬಂದ ಮೇಲೆ ವಂಚಕರು ಈ ಹಾದಿ ಹಿಡಿದಂತಿದೆ. ಇಲ್ಲಿ ಹಣ ವರ್ಗಾಯಿಸಲು ಡೆಬಿಟ್‌ ಕಾರ್ಡ್‌, ಸಿ ಹಾಗೂ ಒಟಿಪಿ ಸಾಕಾಗುತ್ತದೆ. ಪೇಟಿಎಂ, ಮೊಬಿಕ್‌, ಫ್ರೀಚಾರ್ಜ್‌ ಮೊದಲಾದ ವ್ಯಾಲೆಟ್‌ಗಳಲ್ಲಿ ತಂದು ತುಂಬಿಕೊಂಡ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿ ನಗದೀಕರಿಸಿಕೊಳ್ಳಬಹುದು. ಕೆವೈಸಿ ಇಲ್ಲದಿದ್ದರೆ 10 ಸಾವಿರ, ಕೆವೈಸಿ ಕೊಟ್ಟರೆ ಒಂದು ಲಕ್ಷದವರೆಗೂ ಹಣ ಚಲಾವಣೆಗೆ ಅವಕಾಶ ಇರುವಾಗ ಕೆಲಸ ಸಲೀಸು. ಈ ಹಿನ್ನೆಲೆಯಲ್ಲಿ “ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಕಾರ್ಡ್‌ ಬ್ಲಾಕ್‌ ಆಗಿದೆ…..’ ಎಂಬಂಥ ದೂರವಾಣಿ ಕರೆಯನ್ನು ನೀವು ಸ್ವೀಕರಿಸಬಹುದು!

ವ್ಯಾಲೆಟ್‌ ಮೂಲಕ ಮಾಡುವ ಅಥವಾ ಇನ್ನಾವುದೇ ಮಾದರಿಯಲ್ಲಿ ಮಾಡುವ ತಂತ್ರಜಾnನ ಆಧಾರಿತ ಕಳ್ಳತನಗಳನ್ನು ಕಂಡುಹಿಡಿಯುವುದು ಕಷ್ಟವಲ್ಲ. ವ್ಯಾಲೆಟ್‌ಗೆ ಲಿಂಕ್‌ ಆದ ಬ್ಯಾಂಕ್‌ ಅಕೌಂಟ್‌ನ ಜಾಡು ಹಿಡಿದು ಹಣ ವಂಚನೆಯ ಜಾಲ ಪತ್ತೆಯೂ ಕಷ್ಟವಲ್ಲ. ಪ್ರಶ್ನೆ ಅದಲ್ಲ, ಒಂದು ಕಾರ್ಡ್‌ನ ವಿವರ ಪಡೆಯುವ ಖದೀಮರು, ಖಡಕ್ಕಾಗಿ ಆ ಖಾತೆಯಲ್ಲಿರಬಹುದಾದ ಮೊತ್ತವನ್ನೇ ನಮೂದಿಸಿ ವಂಚಿಸುವುದು ಗಮನಿಸಬೇಕಾದ ಅಂಶ. ಒಬ್ಬರ ಖಾತೆಯಲ್ಲಿ ಕೇವಲ ಒಂದು ಸಾವಿರ ಇದ್ದಾಗ ಅಷ್ಟೇ ಮೊತ್ತ ವಿತ್‌ಡ್ರಾ ಆಗುತ್ತದೆ. 30-40 ಸಾವಿರ ಇದ್ದರೆ ಆ ಮೊತ್ತಕ್ಕೆ ಕನ್ನ ಹಾಕಲಾಗುತ್ತದೆ. 

ಹೀಗೆ ಮಾಡಲು ಹೇಗೆ ಸಾಧ್ಯ ಎಂಬುದಕ್ಕೆ ಒಂದು ತರ್ಕ ಮಾಡಬಹುದು. ಇವತ್ತು ಪ್ರತಿ ಬ್ಯಾಂಕ್‌ ತನ್ನ ಕ್ರೆಡಿಟ್‌ ಕಾರ್ಡ್‌ ಪ್ರಚಾರದ ಹೊಣೆಯನ್ನು ವಹಿವಾಟು ಹೆಚ್ಚಳಕ್ಕೆ ಖಾಸಗಿಯವರಿಗೆ ಗುತ್ತಿಗೆ ಕೊಡುತ್ತವೆ. ಈ ಏಜೆನ್ಸಿಗೆ ಖುದ್ದು ಬ್ಯಾಂಕ್‌ ಸಂಭಾವ್ಯರ ಪಟ್ಟಿ ನೀಡಿ ಅವರ ಖಾತೆಯ ವಿವರಗಳನ್ನು ಕೂಡ ಫೋನ್‌ ನಂಬರ್‌ ಸಮೇತ ಒದಗಿಸಿಕೊಡುತ್ತದೆ. ಏಜೆನ್ಸಿಯ ಸಿಬ್ಬಂದಿ ಬ್ಯಾಂಕ್‌ ಖಾತೆದಾರರಿಗೆ ಕರೆ ಮಾಡಿ ಕ್ರೆಡಿಟ್‌ ಕಾರ್ಡ್‌ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡಿ ಅಂಥ ಕಾರ್ಡ್‌ಗಳನ್ನು ಖಾತೆದಾರ ಪಡೆಯುವಂತೆ ಮನವೊಲಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಆದರೆ, ಈ ದಾಖಲೆ ಸೈಬರ್‌ ಕಳ್ಳರಿಗೆ ಸೋರಿಕೆ ಆಗುವುದರಿಂದಲೇ ಜನರಿಗೆ ಫೋನ್‌ ಕರೆ ಬರುತ್ತದೆ.  ಮತ್ತದೇ ಟಿಪ್ಪಣಿಯನ್ನು ಪುನರಾವರ್ತಿಸುವುದಾದರೆ, ಸೈಬರ್‌ ಕ್ರೆ„ಮ್‌ಅನ್ನು ಬ್ಯಾಂಕ್‌ ಹಾಗೂ ಪೊಲೀಸರ ಸಮನ್ವಯತೆಯಿಂದ ಸುಲಭವಾಗಿ ಕಂಡು ಹಿಡಿಯಬಹುದು.

ಇನ್ನಷ್ಟು ಸುರಕ್ಷತೆಯ ಕ್ರಮ ಬೇಕೇ ಬೇಕು. ಎಸ್‌ಬಿಐನ ಮಾಸ್ಟ್ರೋ ಕಾರ್ಡ್‌ಗಳಲ್ಲಿ ಸಿ ದಾಖಲಿಸಬೇಕಾದ ಅಗತ್ಯವೇ ಇಲ್ಲ. ಇದರಿಂದ ಬ್ಯಾಂಕ್‌ ಆ್ಯಪ್‌ ಹಾಕಿಕೊಂಡಾತನ ಸ್ಮಾರ್ಟ್‌ ಫೋನ್‌ಗೆ ಒಟಿಪಿ ಬರುವುದಾದರೆ ಹಣ ಕಳ್ಳತನ ನೀರು ಕುಡಿದಂತೆ. ಕೆಲವು ಬ್ಯಾಂಕ್‌ಗಳು ಇನ್‌ವೆಸ್ಟಮೆಂಟ್‌ ಆಗಿ ಡೆಬಿಟ್‌ ಕಾರ್ಡ್‌ ತರಿಸುತ್ತಿದ್ದು, ಈ ಕಾರ್ಡ್‌ಗಳಲ್ಲಿ ಕಾರ್ಡ್‌ದಾರರ ಹೆಸರು ನಮೂದು ಇರುವುದಿಲ್ಲ. ಸಿವಿವಿ ಮತ್ತು ಕಾರ್ಡ್‌ ನಂಬರ್‌ ಜೊತೆ ಕಾರ್ಡ್‌ದಾರರ ಹೆಸರು ನಮೂದಿಸುವುದು ಕಡ್ಡಾಯವಾದಾಗ ಅಷ್ಟರಮಟ್ಟಿಗೆ ಸುರಕ್ಷತೆ ಹೆಚ್ಚಿದಂತಾಗುತ್ತದೆ. ಎಲ್ಲ ಬ್ಯಾಕಿಂಗ್‌ ವ್ಯವಹಾರಕ್ಕೆ ಒಟಿಪಿಯನ್ನು ಕಡ್ಡಾಯಗೊಳಿಸಬೇಕು. ಇನ್ನು ನಾವು, ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇವೆ ಎಂಬ ಖದೀಮರಿಗೆ ಚಳ್ಳೆ ಹಣ್ಣು ತಿನ್ನಿಸಲು ಸುಳ್ಳು ಸುಳ್ಳೇ ಕಾರ್ಡ್‌ ನಂಬರ್‌, ಸಿವಿವಿ ಹೇಳಬೇಕು! ಆಗ ಹೇಳಿಕೊಳ್ಳಲು ನಮಗೆ ಕಥೆ ಸಿಗುತ್ತದೆ….

ಕೊನೆ ಮಾತು: ಇತ್ತೀಚೆಗೆ ಸೈಬರ್‌ ವಂಚನೆ ತಡೆಗಾಗಿ ಎಸ್‌ಬಿಐ ಎಟಿಎಂ ಕಾರ್ಡ್‌ ಹಣ ಹಿಂಪಡೆಯುಕೆಯ ಮಿತಿಯನ್ನು 40ರಿಂದ 20 ಸಾವಿರ ರೂ.ಗೆ ಇಳಿಸಿದೆ. ಇದರಿಂದ ವಂಚನೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದೇವೆ ಎಂದು ಎದೆಯುಬ್ಬಿಸಿದೆ. ಇದರರ್ಥ ಇಷ್ಟೇ, ಚಿಪ್‌ ಆಧಾರಿತ ಕಾರ್ಡ್‌ಗಳನ್ನು ಮಾಡಿಯೂ ವಂಚನೆ ಕಡಿಮೆ ಮಾಡಲಾಗುತ್ತಿಲ್ಲ ಎಂದು ಅದು ಒಪ್ಪಿಕೊಳ್ಳುತ್ತಿದೆ!

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next