Advertisement

ಪ್ರಕೃತಿ ವಿಕೋಪದ ಹಾನಿ ತಡೆಗೆ ಡಿಜಿಟಲ್‌ ಮ್ಯಾಪ್‌

06:00 AM Oct 04, 2018 | |

ಶಿವಮೊಗ್ಗ: ಪ್ರಾಕೃತಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯ ಹಾಗೂ ಹಾನಿಯ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ “ಡಿಜಿಟಲ್‌ ಮ್ಯಾಪ್‌’ ಸಿದ್ಧವಾಗುತ್ತಿದೆ. ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಹೊಸ ಮ್ಯಾಪ್‌ ಸಿದ್ಧವಾಗುತ್ತಿದ್ದು, ಇಲ್ಲಿ ಯಶಸ್ವಿಯಾದರೆ ರಾಜ್ಯಾದ್ಯಂತ ಇದರ ವಿಸ್ತರಣೆ ಆಗಬಹುದು.

Advertisement

ಮೊದಲಿಗೆ ಅತಿ ಹೆಚ್ಚು ಮಳೆ ಬೀಳುವ ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಡಿಜಿಟಲ್‌ ಮ್ಯಾಪ್‌ ತಯಾರಿಸಲು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಸಿ.ತಮ್ಮಣ್ಣ ಸೂಚನೆ ನೀಡಿದ್ದು “ಇಂಟರ್‌ನ್ಯಾಷನಲ್‌ ರಿಸೋರ್ಸ್‌ ಡೆವಲಪ್‌ಮೆಂಟ್‌ ಸೆಂಟರ್‌’ ಎಂಬ ಎನ್‌ಜಿಒ ಇದರ ಉಸ್ತುವಾರಿ ವಹಿಸಿಕೊಂಡಿದೆ.

ಏನಿದು ಡಿಜಿಟಲ್‌ ಮ್ಯಾಪ್‌: ಈ ಮ್ಯಾಪ್‌ನಲ್ಲಿ ಪ್ರತಿ ಹಳ್ಳಿಗಳ ಪಕ್ಕಾ ಮಾಹಿತಿ ಇರಲಿದೆ. ಇಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಪ್ರದೇಶವನ್ನು ಹಾನಿಯಾಗಿರುವ ಪ್ರಮಾಣದ ಆಧಾರದ ಮೇಲೆ ನಾನಾ ಬಣ್ಣಗಳಿಂದ ಗುರುತು ಮಾಡಲಾಗುತ್ತದೆ. ಈ ಪ್ರದೇಶಕ್ಕೆ ಯಾವ ರೀತಿಯ ಸಹಾಯ ಬೇಕು ಎಂಬುದನ್ನು ಈ ಮ್ಯಾಪ್‌ ನೋಡಿ ವಿಪತ್ತು ನಿರ್ವಹಣಾ ಇಲಾಖೆ ಅಥವಾ ಜಿಲ್ಲಾಡಳಿತ ಯೋಜನೆ ರೂಪಿಸುತ್ತದೆ. ಒಟ್ಟು 17 ಇಲಾಖೆಗಳು ಇದರಡಿಯಲ್ಲ ಕಾರ್ಯ ನಿರ್ವಹಿಸಲಿವೆ.

ಐದಾರು ಹಂತದಲ್ಲಿ ಮಾಹಿತಿ ಸಂಗ್ರಹ: ಮೊದಲನೇ ಹಂತದಲ್ಲಿ ಊರಿನ ಇತಿಹಾಸದ ಬಗ್ಗೆ ತಿಳಿಯಲಾಗುತ್ತದೆ. 2ನೇ ಹಂತದಲ್ಲಿ ಊರಿನ ಜನಸಂಖ್ಯೆ, ಜಾನುವಾರು ಹಾಗೂ ಸಂಸ್ಕೃತಿಯ ಮಾಹಿತಿ, 3ನೇ ಹಂತದಲ್ಲಿ ಅ ಧಿಕಾರಿ ವರ್ಗದ ಮೊಬೈಲ್‌ ಸಂಖ್ಯೆಗಳು ಇರಲಿವೆ. ಹಳ್ಳಿಯ ಗ್ರಾಪಂ ಸದಸ್ಯರು, ಪಿಡಿಒನಿಂದ ಹಿಡಿದು ತಾಲೂಕು, ಜಿಲ್ಲಾಮಟ್ಟದ ಅಧಿ ಕಾರಿಗಳ ನಂಬರ್‌ಗಳೆಲ್ಲ ಒಂದೇ ಕಡೆ ಸಿಗಲಿವೆ. 4ನೇ ಹಂತದಲ್ಲಿ ಸಂಪನ್ಮೂಲದ ಬಗ್ಗೆ ಲೆಕ್ಕ ಹಾಕಲಾಗುತ್ತದೆ. ಅಂದರೆ, ಒಂದು ತಾಲೂಕಿನಲ್ಲಿ ಎಷ್ಟು ಬುಲ್ಡೋಜರ್‌, ಜೆಸಿಬಿ ಇದೆ. ರಕ್ತನಿ ಧಿ ಕೇಂದ್ರ, ಆಸ್ಪತ್ರೆಗಳು ಎಷ್ಟಿವೆ? ಅಲ್ಲಿ ಎಷ್ಟು ಜನಕ್ಕೆ ಹಾಸಿಗೆ ಲಭ್ಯವಿದೆ. ಸರಕಾರಿ, ಖಾಸಗಿ ಆ್ಯಂಬುಲೆನ್ಸ್‌ ಎಷ್ಟಿವೆ. ಅದರ ವಾರಸುದಾರರು ಯಾರು? ಅವರ ವಿಳಾಸ, ನಂಬರ್‌, ಜತೆಗೆ ಇಲಾಖಾವಾರು ಮಾಹಿತಿ ಸಂಗ್ರಹಿಸಲಾಗುತ್ತದೆ.
ಒಟ್ಟು 17 ಇಲಾಖೆಗಳು: ಈ ಮ್ಯಾಪ್‌ನಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ನೀರಾವರಿ, ಲೊಕೋಪಯೋಗಿ ಸೇರಿದಂತೆ 17 ಇಲಾಖೆಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಆಯಾ ಇಲಾಖೆಯ ಅಧಿಕಾರಿಗಳು ಮ್ಯಾಪ್‌ ಸಿದ್ಧಪಡಿಸುವವರಿಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಿ ಒಂದೇ ಮ್ಯಾಪ್‌ನಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ಹೀಗೆ ಮಾಹಿತಿಗಳೆಲ್ಲ ಒಂದೇ ಕಡೆ ಸಿಕ್ಕಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸ್ಥಳದಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಕಾರ್ಯಗಳು, ಆ ಪ್ರದೇಶದಲ್ಲಿ ಅಗತ್ಯವಿರುವ ವಸ್ತುಗಳು, ಅಲ್ಲಿಯ ಜನರಿಗೆ ಬೇಕಾದ ಆಹಾರ, ಔಷಧಿ ಇತ್ಯಾದಿ ಎಲ್ಲವನ್ನೂ ಕ್ಷಣಾರ್ಧದಲ್ಲಿ ದೊರಕಿಸಲು ಸಾಧ್ಯವಾಗಲಿದೆ.

Advertisement

ಸರ್ವೇ ನಂಬರ್‌ ಆಧಾರದ ಮೇಲೆ ಹಾನಿಯನ್ನು ಗುರುತಿಸಲಾಗುತ್ತದೆ. 17 ಇಲಾಖೆಗಳ ಮಾಹಿತಿ ಆಧಾರದ ಮೇಲೆ ತಕ್ಷಣ ಪರಿಹಾರ ಕಾರ್ಯ ಶುರು ಮಾಡಲಾಗುತ್ತದೆ. ಅಲ್ಲಿ ಆಗಿದೆ, ಇಲ್ಲಿ ಆಗಿದೆ ಎನ್ನುವುದಕ್ಕಿಂತ ಇದೇ ಸರ್ವೇ ನಂಬರ್‌, ಇಷ್ಟೇ ಜನ, ದನ, ಆಸ್ತಿ, ಪಾಸ್ತಿ ಹಾನಿಯಾಗಿದೆ ಎಂದು ಹೇಳುವುದರಿಂದ ಯಾವ ರೀತಿ ಪರಿಹಾರ ಬೇಕು ಎಂಬುದು ತಕ್ಷಣ ತಿಳಿಯುತ್ತದೆ.
– ಸುಭಾಷ್‌ಕರ್‌ ರೆಡ್ಡಿ, ಟೀಂ ಲೀಡರ್‌, ಇಂಟರ್‌ನ್ಯಾಶನಲ್‌ ರಿಸೋರ್ಸ್‌ ಡೆವೆಲಪ್‌ಮೆಂಟ್‌ ಸೆಂಟರ್‌

ಕೊಡಗಿನಲ್ಲಿ ಸಂಭವಿಸಿದಂತಹ ಪ್ರಕೃತಿ ವಿಕೋಪ ಎಲ್ಲಿ ಬೇಕಾದರೂ ಸಂಭವಿಸಬಹುದು. ಇಂತಹ ಪ್ರಕೃತಿ ವಿಕೋಪಗಳನ್ನು ತಡೆಯವುದು ಸಾಧ್ಯವಿಲ್ಲ. ಮುಂಜಾಗ್ರತೆ ವಹಿಸಿದರೆ ಹೆಚ್ಚಿನ ಆಸ್ತಿಪಾಸ್ತಿ, ಪ್ರಾಣ ಹಾನಿಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಮ್ಯಾಪ್‌ ರೂಪಿಸಲು ಸೂಚಿಸಿರುವೆ.
– ಡಿ.ಸಿ. ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next