Advertisement
1893ರಲ್ಲಿ ಅಮೆರಿಕಾದ ಚಿಕಾಗೋ ಎಂಬಲ್ಲಿ ವಿಶ್ವಧರ್ಮ ಸಮ್ಮೇಳನ ನಡೆದಾಗ, ವಿವೇಕಾನಂದರು, ಭಾರತವನ್ನೂ ಹಿಂದೂ ಧರ್ಮವನ್ನೂ ಪ್ರತಿನಿಧಿಸಿದ್ದರು. ಸೆಪ್ಟೆಂಬರ್ 11ರಿಂದ 27ರವರೆಗೆ ಈ ಸಮ್ಮೇಳನ ನಡೆಯಿತು. ಭಾರತವೆಂದರೆ ಬ್ರಿಟಿಷ್ ದಾಸ್ಯದಲ್ಲಿದ್ದ ಒಂದು ದೇಶವಷ್ಟೇ ಎಂದು ನಂಬಿದ್ದ ಜಗತ್ತಿನ ಇತರ ರಾಷ್ಟ್ರಗಳ ವಿದ್ವಾಂಸರ ಗ್ರಹಿಕೆಯು ಈ ಸಮ್ಮೇಳನದ ಬಳಿಕ ಬದಲಾಯಿತು. ಜಗತ್ತಿನ ಜನರಲ್ಲಿದ್ದ ಪೂರ್ವಗ್ರಹಗಳು ಬದಲಾಗುವಂತೆ ಸ್ವಾಮಿ ವಿವೇಕಾನಂದರು ಭಾರತದ ಕುರಿತು, ಭಾರತೀಯ ಸಂಸ್ಕೃತಿಯ ಕುರಿತು ಮಂಡಿಸಿದ ವಿಚಾರಗಳೇನು ಎಂಬುದು ಇಂದಿಗೂ ಅಧ್ಯಯನಕ್ಕೆ ಅರ್ಹವಾಗಿವೆ.
Related Articles
Advertisement
ಕಾವಿಧಾರಿಯಾಗಿ ವಿದೇಶಕ್ಕೆ ಹೋದ ಸ್ವಾಮೀಜಿ, ಹೊರ ಆವರಣಕ್ಕೆ ಮಣೆ ಹಾಕುವ ಮನಸ್ಸುಗಳನ್ನು ತಮ್ಮತ್ತ¤ ಸೆಳೆದು, ಜೀವನದ ನಿಜ ಹೂರಣವನ್ನು ಅವರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದರು. ಅವರ ಮಾತುಗಳು ಬರೀ ಒಣ ವೇದಾಂತಗಳಾಗಿರಲಿಲ್ಲ. ಆದ್ದರಿಂದಲೇ ಅವರು, ತಮ್ಮ ಪ್ರಯತ್ನದಲ್ಲಿ ಯಶಸ್ವಿ ಕಂಡರು. ಅವರ ಪ್ರಯತ್ನ ನಮಗಿಂದು ಪಾಠವಾಗುವುದಾದರೆ, ಇಂದಿನ ಡಿಜಿಟಲ್ ಯುಗದ ಬಣ್ಣಗಳ ಒಳಗೆ ನಾವು ಕಳೆದುಹೋಗದೇ, ಅದನ್ನೇ ಬಳಸಿಕೊಂಡು ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮ ದೇಶದ ಮಹತ್ವವನ್ನು ಅರಿತು, ಹೊರಜಗತ್ತಿಗೆ ಅದನ್ನು ತಿಳಿಯಪಡಿಸಬಹುದು.
ಸೌಂದರ್ಯ ಮತ್ತು ಹಣದ ಮೂಲಕ ಇತರರನ್ನು ಆಕರ್ಷಿಸಲು ಮತ್ತು ಬಲಿಷ್ಟರನ್ನು ಮೆಚ್ಚಿಸುವುದಕ್ಕಾಗಿ ತಮ್ಮ ಸಹಾಯ-ಸಹಾನುಭೂತಿಯನ್ನು ತೋರ್ಪಡಿಸಲು ಉಪಯೋಗವಾಗುತ್ತಿರುವ ಇವತ್ತಿನ ಡಿಜಿಟಲ್ ಸಂಪತ್ತನ್ನು ನೊಂದವರ ಕಲ್ಯಾಣಕ್ಕಾಗಿ ಅಜ್ಞಾನಿಗಳಲ್ಲಿ ಸುಜ್ಞಾನ ತುಂಬಲು ಉಪಯೋಗಿಸಿದರೆ ಅದೇ ವಿವೇಕಾನಂದರ ದಾರಿಯಲ್ಲಿ ನಡೆಯುವ ನಿಜವಾದ ಪ್ರಯತ್ನ. ಇನ್ನೂ ಸರಳವಾಗಿ ಹೇಳಬೇಕಾದರೆ, ಭಾರತೀಯ ಜ್ಞಾನ ಸಂಪತ್ತನ್ನು ಅರ್ಥ ಮಾಡಿಕೊಂಡು, ಭಾರತೀಯ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಡೆಸಿದರೆ, ಅದುವೇ ಜಗತ್ತಿಗೆ ನಾವು ನೀಡುವ ಸಂದೇಶವಾಗಿರುತ್ತದೆ. ಮಾತಿಗಿಂತ ಕೃತಿ ಮುಖ್ಯ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರರಲ್ಲ !
ಪ್ರಕಾಶ್ ಮಲ್ಪೆ, ವಡಭಾಂಡೇಶ್ವರ