Advertisement

ಶಿಕ್ಷಣಾಭಿವೃದ್ಧಿಗೆ ಏಕಲವ್ಯ ಲಕ್ಷ್ಯ

09:15 AM Feb 02, 2018 | Team Udayavani |

ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಕೈಗೊಳ್ಳಲು ಕೇಂದ್ರ ನಿರ್ಧರಿಸಿದ್ದು, ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನವೋದಯ ವಸತಿ ಶಾಲೆಗಳ ಮಾದರಿಯಲ್ಲಿ ಏಕಲವ್ಯ ವಸತಿ ಶಾಲೆ, 13 ಲಕ್ಷ ಬಿ.ಎಡ್‌ಶಿಕ್ಷಕರಿಗೆ ತರಬೇತಿ, ಪ್ರಿ ನರ್ಸರಿಯಿಂದ ಪದವಿ ಪೂರ್ವವರೆಗಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮಗಳಂಥ ಮಹತ್ವದ ಯೋಜನೆಗಳಿಗೆ ಕೈ ಹಾಕಲಾಗಿದೆ. 2022ರೊಳಗೆ ಶಿಕ್ಷಣ ಕ್ಷೇತ್ರವನ್ನು ಉಚ್ಛ್ರಾಯ ಮಟ್ಟಕ್ಕೇರಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ, 1 ಲಕ್ಷ ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದೆ.

Advertisement

ಮಹತ್ವಾಕಾಂಕ್ಷೆಯ ‘ಏಕಲವ್ಯ’
ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಅವರ ವಾಸಸ್ಥಳಗಳಲ್ಲೇ ಶಿಕ್ಷಣ ನೀಡಲು ರೂಪಿಸಲಾಗಿರುವ ಈ ಯೋಜನೆಯಡಿಯಲ್ಲಿ,  ಶೇ. 50ಕ್ಕಿಂತ ಹೆಚ್ಚು ಪರಿಶಿಷ್ಟ ವರ್ಗ ಹಾಗೂ ಕನಿಷ್ಠ 20 ಸಾವಿರ ಬುಡಕಟ್ಟು ಜನಾಂಗ ವಾಸವಾಗಿರುವ ಪ್ರತಿ ಬ್ಲಾಕ್‌ಗಳಲ್ಲಿ ‘ಏಕಲವ್ಯ ಮಾದರಿ ವಸತಿ ಶಾಲೆ’ಗಳು ಅನುಷ್ಠಾನಕ್ಕೆ ಬರಲಿವೆ. ಈ ಮೂಲಕ, 2022ರ ವೇಳೆಗೆ, ಎಲ್ಲಾ ಬುಡಕಟ್ಟು ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸ ಸೌರ್ಯ ಕಲ್ಪಿಸುವ ಮಹದೋದ್ದೇಶವನ್ನು ಹೊಂದಲಾಗಿದೆ. ನವೋದಯ ಶಾಲೆಗಳಂತೆಯೇ ಕಾರ್ಯ ನಿರ್ವಹಿಸಲಿರುವ ಈ ಶಾಲೆಗಳಲ್ಲಿ ಬುಡಕಟ್ಟು ಹಾಗೂ ಪರಿಶಿಷ್ಟರ ಪಾರಂಪರಿಕ ಕಲೆಗಳು, ಸಂಸ್ಕೃತಿ ಸಂರಕ್ಷಣೆ ಮಾಡುವುದರೊಂದಿಗೆ, ಶಿಕ್ಷಣ ಹಾಗೂ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ. 

ಶಿಕ್ಷಕರ ಕೌಶಲಾಭಿವೃದ್ಧಿ
ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಬಿ.ಎಡ್‌. ಕಾರ್ಯಕ್ರಮ ರೂಪಿಸಲಾಗಿದ್ದು, ಈ ವಿಶೇಷ ಯೋಜನೆಯಡಿ, 13 ಲಕ್ಷ ಸಮರ್ಪಕ ತರಬೇತಿ ಪಡೆಯದ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದೆ. 

ಸಮಗ್ರ ಶಿಕ್ಷಣ
ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಗುಣಮಟ್ಟದ ಕೊರತೆ ಹೋಗಲಾಡಿಸಲು ಕೇಂದ್ರ ತೀರ್ಮಾನಿಸಿದೆ. ಅದೇ ಕಾರಣಕ್ಕೆ 20 ಲಕ್ಷ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿ ಸಮಸ್ಯೆಗಳ ಪತ್ತೆಹಚ್ಚಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಗುಣಮಟ್ಟ ವೃದ್ಧಿಸುವ ಚಿಂತನೆ ನಡೆಸಿದೆ. ಇಡೀ ದೇಶದಲ್ಲೇ ಸಮಗ್ರ ಶಿಕ್ಷಣ ಜಾರಿ ಈಗ ಕೇಂದ್ರದ ಆದ್ಯತೆ. ಆದ್ದರಿಂದ ಪ್ರಿ ನರ್ಸರಿಯಿಂದ ದ್ವಿತೀಯ ಪಿಯುಸಿವರೆಗೆ ಸಮಗ್ರ ವ್ಯವಸ್ಥೆ ಮಾಡುವುದಾಗಿ ಹೇಳಿಕೊಂಡಿದೆ. 

ಉನ್ನತೀಕರಣಕ್ಕಾಗಿ ‘ರೈಸ್‌’
ದೇಶದ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಸಂಶೋಧನೆ, ಮೂಲ ಸೌಕರ್ಯಾಭಿವೃದ್ಧಿಗಾಗಿ ‘ರೈಸ್‌’ (ರಿವಿಟಲೈಸಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ ಆ್ಯಂಡ್‌ ಸಿಸ್ಟಮ್ಸ್‌ ಇನ್‌ ಎಜುಕೇಷನ್‌) ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯ ಮೂಲ ಉದ್ದೇಶಗಳ ಸಾಕಾರಕ್ಕಾಗಿ, ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿಯಲ್ಲಿ (ಎಚ್‌ಇಎಫ್ಎ) ಮುಂದಿನ ನಾಲ್ಕು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ. 

Advertisement

ಎಸ್‌ಪಿಎ ಸ್ಥಾಪನೆ
ದೇಶದ ನಾನಾ ಐಐಟಿ ಹಾಗೂ ಎನ್‌ಐಟಿಗಳಲ್ಲಿ 18 ಸುಸಜ್ಜಿತ ‘ಸ್ಕೂಲ್ಸ್‌ ಆಫ್ ಪ್ಲಾನಿಂಗ್‌ ಆ್ಯಂಡ್‌ ಆರ್ಕಿಟೆಕ್ಟರ್‌’ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇವು ಸ್ವಾಯತ್ತ ವಿದ್ಯಾಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಲಿವೆ. 

ಫೆಲೋಶಿಪ್‌
1000 ಪ್ರತಿಭಾವಂತ ಬಿ.ಟೆಕ್‌ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ನೀಡಿ ಅವರು ಸ್ವಪ್ರೇರಣೆಯಿಂದ ಶಿಕ್ಷಣ ಸಂಸ್ಥೆಗಳಲ್ಲಿ ವಾರದಲ್ಲಿ ಕೆಲವು ಗಂಟೆಗಳು ತರಬೇತಿ ನೀಡುವಂತೆ ಮಾಡಬೇಕೆನ್ನುವುದು ಕೇಂದ್ರದ ಮತ್ತೂಂದು ಮಹತ್ವದ ಯೋಜನೆ.

ಕಪ್ಪು ಬೋರ್ಡ್‌ ಬದಲಿಗೆ ಡಿಜಿಟಲ್‌ ಬೋರ್ಡ್‌
ಶಿಕ್ಷಣ ಕ್ಷೇತ್ರದಲ್ಲಿ ತಾಂತ್ರಿಕ ಕ್ರಾಂತಿ ಮಾಡುವುದು ಕೇಂದ್ರದ ಉದ್ದೇಶ. ಇದುವರೆಗೆ ಎಲ್ಲ ಕಡೆ ಕಪ್ಪುಹಲಗೆಯನ್ನು ಶಿಕ್ಷಕರು ಬಳಸುತ್ತಿದ್ದಾರೆ. ಇನ್ನು ಮುಂದೆ ಆ ಜಾಗದಲ್ಲಿ ಕಂಪ್ಯೂಟರೀಕೃತ ಡಿಜಿಟಲ್‌ ಬೋರ್ಡ್‌ ಬರಲಿದೆ! ಅದಕ್ಕಾಗಿ ಈಗಾಗಲೇ ‘ಧಿಕ್ಷಾ’ ಎನ್ನುವ ಶಿಕ್ಷಕರ ಕೌಶಲಾಭಿವೃದ್ಧಿ ವೆಬ್‌ಸೈಟ್‌ ಆರಂಭಿಸಲಾಗಿದೆ.

1000 ಬಿಟೆಕ್‌ ವಿದ್ಯಾರ್ಥಿಗಳಿಗೆ ನೆರವು 
ಇದೇ ವರ್ಷದಿಂದ ಕೇಂದ್ರಸರ್ಕಾರ ಪ್ರೈಮ್‌ ಮಿನಿಸ್ಟರ್ಸ್‌ ರೀಸರ್ಚ್‌ ಫೆಲೋಸ್‌ (ಪಿಎಂಆರ್‌ಎಫ್) ಎನ್ನುವ ಯೋಜನೆ ಆರಂಭಿಸಲಿದೆ. ಇದರ ಉದ್ದೇಶ ದೇಶದ ಪ್ರಮುಖ ವಿದ್ಯಾಸಂಸ್ಥೆಗಳ ಪ್ರತಿಭಾವಂತ 1000 ಬಿಟೆಕ್‌ ವಿದ್ಯಾರ್ಥಿಗಳನ್ನು ಗುರುತಿಸುವುದು. ಈ ವಿದ್ಯಾರ್ಥಿಗಳು ಐಐಟಿ ಮತ್ತು ಐಐಎಸ್ಸಿಗಳಲ್ಲಿ ಪಿಎಚ್‌ಡಿ ಮಾಡುವಂತೆ ಪ್ರೋತ್ಸಾಹಿಸಲಾಗುತ್ತದೆ. ಅದಕ್ಕಾಗಿ ಗರಿಷ್ಠ ಆರ್ಥಿಕ ನೆರವು (ಫೆಲೋಶಿಪ್‌) ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next