Advertisement

ದಿಗ್ಗಾವಿಗೆ ಪುರುಷೋತ್ತಮ ಪ್ರಶಸ್ತಿ ಪ್ರದಾನ

03:03 PM Apr 06, 2017 | Team Udayavani |

ಹೊಸನಗರ: ಬರಗಾಲದ ಬಲವಾದ ಪೆಟ್ಟು ಗೋವು ಸೇರಿದಂತೆ ಪ್ರಾಣಿ, ಪಕ್ಷಿಗಳ ಮೇಲೆ ಬೀರಿದ್ದು, ಗೋವಿನ ಮೇವಿಗಾಗಿ ದಾನ ಮಾಡಿ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಮನವಿ ಮಾಡಿದರು. ರಾಮೋತ್ಸವದ ಅಂಗವಾಗಿ ರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮಠವು ಶ್ರೀರಾಮ ಸ್ಮರಣೆಯಲ್ಲಿ ಕೊಡ ಮಾಡುವ ವಾರ್ಷಿಕ ಪುರುಷೋತ್ತಮ ಪ್ರಶಸ್ತಿಯನ್ನು ಗೋರಕ್ಷಕ ಕಲಬುರಗಿಯ ಬಸವರಾಜ ದಿಗ್ಗಾವಿ ಅವರಿಗೆ ಪ್ರದಾನ ಮಾಡಿದ ನಂತರ ಅವರು ಮಾತನಾಡಿದರು.

Advertisement

ಆಡಂಬರದ ಜೀವನ ಬಿಟ್ಟು ಸರಳ ಜೀವನಕ್ಕೆ ಮೊರೆ ಹೋಗಿರಿ. ಅದರಲ್ಲಿ ಉಳಿಸಿದ ಹಣವನ್ನು ಗೋ ಪ್ರಾಣ ಭಿಕ್ಷೆಯಾಗಿ ನೀಡಿ ಎಂದು ಕರೆ ನೀಡಿದರು. ಗೋವಿನ ಹೆಸರಿನಲ್ಲಿ ಮದ್ಯ, ಧೂಮಪಾನ ಸೇರಿದಂತೆ ಎಲ್ಲ ವ್ಯಸನ ದೂರ ಮಾಡಿ ಬಂದ ಉಳಿತಾಯದ ಹಣವನ್ನು ಗೋವಿನ ರಕ್ಷಣೆಗೆ ನೀಡಿ. ಇದರಿಂದ ಗೋವಿನ ಜೀವದ ಉಳಿವಿನ ಜತೆಗೆ ವ್ಯಸನಿಯ ದೇಹದ ಆರೋಗ್ಯವು ಉತ್ತಮ ಆಗುತ್ತದೆ ಎಂದರು. 

ಭೀಕರ ಬರಗಾಲದಲ್ಲಿಯೂ ಸಾವಿರಾರು ಅನಾಥ ಗೋವುಗಳಿಗೆ ಮೇವನ್ನು ನೀಡುತ್ತಿರುವ ಬಸವರಾಜ ದಿಗ್ಗಾವಿ ಅವರಿಗೆ ಈ ವರ್ಷದ ಪುರುಷೋತ್ತಮ ಪ್ರಶಸ್ತಿ ನೀಡಲಾಗಿದೆ ಎಂದರು. ಮಲೆಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ದೇಶಿ ಗೋ ಸಂತತಿಗಳು ಸರ್ಕಾರದ ಅವೈಜ್ಞಾನಿಕ ನಿರ್ಣಯದಿಂದಾಗಿ ಮೇವಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ.

ಶ್ರೀಮಠದ ಕಾಮದುಘಾ ಯೋಜನೆಯಲ್ಲಿ ಬೆಟ್ಟದ ತಪ್ಪಲಿನ ಗೋತಳಿಗೆ ಉಳಿವಿಗಾಗಿ ಮೇವು ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ದಿನಕ್ಕೆ 2ರಿಂದ 3 ಟ್ರಕ್‌ ಮೇವನ್ನು ಮಲೆಮಹದೇಶ್ವರ ಬೆಟ್ಟದ ಗೋವುಗಳಿಗೆ ಒದಗಿಸಲಾಗುತ್ತಿದೆ. ಅಲ್ಲಿರುವ ಜಾನುವಾರುಗಳಿಗೆ ಕನಿಷ್ಠ ಆಹಾರ ನೀಡಬೇಕಾದರೂ ಸುಮಾರು 15ರಿಂದ 20 ಟ್ರಕ್‌ ಮೇವಿನ ಅಗತ್ಯ ಇದೆ ಎಂದರು.

ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿದ ಬಸವರಾಜ ದಿಗ್ಗಾವಿ ಮಾತನಾಡಿ, ರೈತ ಕುಟುಂಬದಿಂದ ಬಂದ ತಮಗೆ ಗೋವುಗಳು ಕಟುಕರ ಪಾಲಗುವುದನ್ನು ತಡೆಯುವುದೇ ಜೀವನದ ಗುರಿ ಆಗಿದೆ. ಈ ಪ್ರಶಸ್ತಿಯಿಂದ ತಮ್ಮ ಗೋ ಸೇವಾ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದರು. 

Advertisement

ಅಂದವಳ್ಳಿ ನಂದಿ ಶಾಂತಿನಿಕೇತನದ ನಂದಿಕೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು. ದೊಡ್ಡ ಅರಸನಕರೆ ದೊಡ್ಡ ಬಸವಣ್ಣ (ಎತ್ತು) ಜನರ ಗಮನ ಸೆಳೆಯಿತು. ಬೆಳಗ್ಗೆ ರಾಮಜನ್ಮೋತ್ಸವ, ಮಧ್ಯಾಹ್ನ ಮನ್ಮಹಾರಥೋತ್ಸವ, ಸಭಾ ಕಾರ್ಯಕ್ರಮದಲ್ಲಿ ಸಂಜೆ ಸೀತಾ ಕಲ್ಯಾಣೋತ್ಸವ, ರಾತ್ರಿ ಉತ್ತರ ಭಾರತ ಶೈಲಿಯಲ್ಲಿ ರಾವಣ ದಹನ, ರಾಮಲೀಲಾ ಕಾರ್ಯಕ್ರಮ ನಡೆಯಿತು.  

Advertisement

Udayavani is now on Telegram. Click here to join our channel and stay updated with the latest news.

Next