ಸ್ಯಾಂಡಲ್‌ವುಡ್ ದೂದ್‌ಪೇಡಾ ಖ್ಯಾತಿಯ ನಟ ದಿಗಂತ್ ಈ ವಾರ ಡಬಲ್ “ಹುಟ್ಟುಹಬ್ಬ’ದ ಸಂಭ್ರಮದಲ್ಲಿದೆ. ಹೌದು, ಡಿ. 28 ಮಂಗಳವಾರ ದಿಗಂತ್ ಅವರ 38ನೇ ಜನ್ಮದಿನ. ಈ ಬಾರಿ ಒಮೆಕ್ರಾನ್ ಭಯ, ನೈಟ್ ಕರ್ಫ್ಯೂ ಆತಂಕದ ನಡುವೆಯೇ ದಿಗಂತ್, ಪತ್ನಿ ಐಂದ್ರಿತಾ ರೇ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆ “ಹುಟ್ಟುಹಬ್ಬ’ವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಇದು ದಿಗಂತ್ “ಹುಟ್ಟುಹಬ್ಬ’ಕ್ಕೆ ಸಂಬಂಧಿಸಿದ ಮೊದಲ ಸಂಭ್ರಮ.
ಇನ್ನೊಂದು ಸಂಭ್ರಮವೆಂದರೆ, ಅದು ಈ ವಾರ ತೆರೆಗೆ ಬರುತ್ತಿರುವ ದಿಗಂತ್ ಅಭಿನಯದ “ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾದ್ದು. ದಿಗಂತ್ ನಾಯಕ ನಟನಾಗಿ ಅಭಿನಯಿಸಿರುವ “ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಇದೇ ಡಿ. 31ಕ್ಕೆ ತೆರೆ ಕಾಣುತ್ತಿದೆ. ಇದು ಈ ವಾರ ದಿಗಂತ್ ಅವರಿಗೆ ಮತ್ತೂಂದು ಸಂಭ್ರಮಕ್ಕೆ ಕಾರಣವಾಗಿದೆ.
2019ರಲ್ಲಿ ತೆರೆಕಂಡ “ಫಾರ್ಚೂನರ್’ ಸಿನಿಮಾದಲ್ಲಿ ದಿಗಂತ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಅದಾದ ನಂತರ ಬಿಡುಗಡೆಯಾದ “ಪಂಚತಂತ್ರ’ ಹಾಗೂ “ಯುವರತ್ನ’ ಚಿತ್ರಗಳಲ್ಲಿ ದಿಗಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
“ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರ ಸುಮಾರು ಎರಡೂವರೆ ವರ್ಷಗಳ ಬಳಿಕ ದಿಗಂತ್ ಮತ್ತೆ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿರುವ ಚಿತ್ರವಾಗಿದ್ದು, ಸಹಜವಾಗಿಯೇ ಈ ಚಿತ್ರದ ಮೇಲೆ ದಿಗಂತ್ ಅವರಿಗೂ ನಿರೀಕ್ಷೆ ಹೆಚ್ಚಾಗಿಯೇ ಇದೆ. ಈಗಾಗಲೇ ಬಿಡುಗಡೆಯಾಗಿರುವ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಟ್ರೇಲರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಯು-ಟ್ಯೂಬ್‌ನಲ್ಲಿ ಟ್ರೇಲರ್ 1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದ್ದು, ಚಿತ್ರ ಕೂಡ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆಯಲ್ಲಿದ್ದಾರೆ ದಿಗಂತ್.
“ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್‌ನಲ್ಲಿ ಡಾ. ಟಿ. ಆರ್ ಚಂದ್ರಶೇಖರ್ ನಿರ್ಮಾಣ ಮಾಡಿರುವ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರಕ್ಕೆ ನಾಗರಾಜು ಬೇತೂರು ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ದಿಗಂತ್ ಅವರಿಗೆ ನಾಯಕಿಯಾಗಿ ಕವಿತಾ ಗೌಡ ಜೋಡಿಯಾಗಿದ್ದಾರೆ. ಉಳಿದಂತೆ ಚೇತನ್ ಗಂಧರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ವಿ.ಎಂ ಕಥೆ, ಚಿತ್ರಕಥೆ ಮತ್ತು ಯೋಗರಾಜ್ ಭಟ್ ಸಾಹಿತ್ಯವಿದೆ. ಬರೆದಿದ್ದು, ಚಿತ್ರಕ್ಕೆ ಅಭಿಲಾಶ್ ಕಲತಿ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಈ ವಾರವಿಡೀ “ಹುಟ್ಟುಹಬ್ಬ’ದ ಖುಷಿಯ ಮೂಡ್ ನಲ್ಲಿರುವ ದಿಗಂತ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲೂ ಸಿನಿಪ್ರಿಯರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.