ಶಿರಸಿ: ಹೋಂ ಕ್ವಾರಂಟೈನ್ ನಿಯಮ ಸರಕಾರಿ ವೈದ್ಯರಿಗೊಂದು ಹಾಗೂ ಖಾಸಗಿ ಆಸ್ಪತ್ರೆ ವೈದ್ಯರಿಗೊಂದು ಎಂಬಆರೋಪ ಬಲವಾಗಿ ಕೇಳಿ ಬಂದಿದೆ. ಈ ನೋವು ಈಗ ಜನಸಾಮಾನ್ಯರ ಆರೋಗ್ಯ ರಕ್ಷಣೆಗೂ ತೊಡಕಾಗುವ ಸಾಧ್ಯತೆ ಎದುರಾಗಿದೆ.
ಶಿರಸಿಯಲ್ಲಿ ಕೋವಿಡ್ 19ರ ಆತಂಕ ಹಾಗೂ ಕ್ವಾರಂಟೈನ್ ನಿಯಮ ಕಾರಣದಿಂದ ಅನೇಕ ಆಸ್ಪತ್ರೆಗಳು, ವೈದ್ಯರು ಸೇವೆ ಸಲ್ಲಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶಾಲನ ನಗರದ ಸೋಂಕಿತ ವ್ಯಕ್ತಿಗೆ ಎರಡು ಖಾಸಗಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ ಕಾರಣಕ್ಕೆ ವೈದ್ಯರು ಗಂಟಲು ದ್ರವ ಕೊಟ್ಟು ಕ್ವಾರಂಟೈನ್ ಆಗಿದ್ದರು. ಇದಾದ ಬಳಿಕವೇ ಈ ಸಮಸ್ಯೆ ಉಲ್ಬಣಗೊಂಡಿದೆ. ವೈದ್ಯರಿಗೆ, ಸಿಬ್ಬಂದಿಗೆ ನೆಗೆಟಿವ್ ಬಂದರೂ ದವಾಖಾನೆಗೆ ಎಷ್ಟು ದಿನ ಸೀಲ್‌ಡೌನ್, ಕ್ವಾರಂಟೈನ್ ಎಂಬುದಕ್ಕೆ ಗೊಂದಲಗಳಿವೆ. ಇವರು ಪುನಃ ಸೇವೆ ಯಾವಾಗ ಕೊಡಬೇಕು ಎಂಬುದು ಆಡಳಿತದವರು ಸ್ಪಷ್ಟಗೊಳಿಸಬೇಕಿದೆ.
ಈ ಮಧ್ಯೆ ಖಾಸಗಿ ಆಸ್ಪತೆಗಳಿಗೆ ಕಿಡ್ನಿ, ಹೃದಯ ಸಂಬಂಧಿಸಿ ತೆರಳಿದವರೂ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಇಲ್ಲ, ಜ್ವರ ಇಲ್ಲ ಎಂದು ಪತ್ರ ತರಬೇಕಾಗಿದೆ. ರೋಗಿಯೊಬ್ಬರನ್ನು ಕರೆದುಕೊಂಡು ಹೋಗಿ ಸರಕಾರಿ ವೈದ್ಯರನ್ನು ಕಂಡು ಪತ್ರ ತರುವ ತನಕ ಹೈರಾಣಾದ ಉದಾಹರಣೆ ಕೂಡ ನಡೆಯುತ್ತಿದೆ. ಕೋವಿಡ್ 19ರ ಆತಂಕದ ನಡುವೆ ಸಣ್ಣಪುಟ್ಟ ಕಾಯಿಲೆಗಳಿಗೆ ಕೂಡ ಚಿಕಿತ್ಸೆಗೆ ಕಷ್ಟವಾಗುತ್ತಿದೆ.
ಪ್ರಶ್ನೆಗಳು ಹಲವು: ಎಲ್ಲ ಸೌಲಭ್ಯವನ್ನೂ ಸರಕಾರಿ ಆಸ್ಪತ್ರೆಯಲ್ಲಿ ಕೊಡಿಸಲು ಸಾಧ್ಯವಿಲ್ಲ.ಕೆಲ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳು ಅನಿವಾರ್ಯವಾಗಿದೆ. ಅವುಗಳಲ್ಲಿ ಉಳಿಸಿಕೊಂಡು ಚಿಕಿತ್ಸೆ ಕೊಡಬೇಕಾದರೆ ಸರಕಾರಿ ಆಸ್ಪತ್ರೆಯ ಕೋವಿಡ್ ಟೆಸ್ಟ್ ಆಗಬೇಕು. ಅದರ ವರದಿ ಬರುವ ತನಕ ಏನು? ಚಿಕಿತ್ಸೆ ಯಾರು ಕೊಡುತ್ತಾರೆ? ಒಮ್ಮೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ನಂತರ ಕೋವಿಡ್ ಬಂದರೆ ಕ್ವಾರಂಟೈನ್ ಕಷ್ಟ. ಈ ಕಾರಣದಿಂದ ಅಂತರ ಕಾಯ್ದುಕೊಳ್ಳುವಂತಾಗಿದೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ ಕೂಡ ಉಂಟಾಗಿದೆ. ಕೋವಿಡ್ ಆತಂಕದಿಂದ ಕೆಲ ನರ್ಸ್‌ಗಳು ಕೂಡ ಆಸ್ಪತ್ರೆ ತೊರೆದದ್ದೂ ಇದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿ ರೋಗಿಗಳಿಗೆ ಉಂಟಾಗುವ ಆತಂಕ ದೂರ ಮಾಡಬೇಕಿದೆ. ಅನೇಕರು ಆಸ್ಪತ್ರೆಗೇ ಬರಲು ಹಿಂದೇಟು ಹಾಕುವವರೂ ಇದ್ದಾರೆ. ಈ ವಿಲಕ್ಷಣ ಸಂಕಟ ಹೋಗಲಾಡಿಸಬೇಕಿದೆ.
ಕ್ವಾರಂಟೈನ್ ನಿಯಮ ಖಾಸಗಿ, ಸರಕಾರಿ ಆಸ್ಪತ್ರೆಗಳಿಗೆ ಬೇರೆ ಬೇರೆ ಇಲ್ಲ. ಗೊಂದಲಗಳನ್ನು ಶೀಘ್ರ ಇತ್ಯರ್ಥಗೊಳಿಸುತ್ತೇವೆ. ಯಾರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.-
ಡಾ| ಈಶ್ವರ ಉಳ್ಳಾಗಡ್ಡಿ, ಎಸಿ ಶಿರಸಿ
ಕೋವಿಡ್ ನೆಗೆಟಿವ್ ಬಂದರೂ ಎಷ್ಟ ದಿನಗಳ ಕ್ವಾರಂಟೈನ್ ನಿಯಮ ಎಂಬುದು ಪಕ್ಕಾ ಆಗಬೇಕು. ಚಿಕಿತ್ಸೆ ಕೊಡಲು ತೊಂದರೆ ಇಲ್ಲ. ಆದರೆ, ನಿಯಮಗಳದ್ದೇ ಆತಂಕ. –
ಹೆಸರು ಹೇಳದ ಪ್ರಸಿದ್ಧ ಖಾಸಗಿ ಆಸ್ಪತ್ರೆ ವೈದ್ಯ