Advertisement

ಕಷ್ಟ ಮರೆತು ನಗುವಿನ ಅಲೆಯಲ್ಲಿ ತೇಲಿದ ಅಂಗವಿಕಲರು

04:49 PM May 07, 2019 | sudhir |

ಉಡುಪಿ: ಪಡುಬಿದ್ರಿ ಬೀಚ್‌ನಲ್ಲಿ ಮಾ. 24ರಂದು ವಿಶೇಷ ಅತಿಥಿಗಳು ನೆರೆದಿದ್ದರು. ಇವರದ್ದೆಲ್ಲಾ ಕಥೆಗಳು ಹಲವು. ಆದರೂ ಇವರ ಕುಟುಂಬವೊಂದೇ. ಕುಂದಾಪುರ, ಕಾರ್ಕಳ, ಬೆಳ್ಮಣ್‌, ಅಡ್ವೆಗಳಿಂದ ಬಂದಿದ್ದ ವಿಕಲಾಂಗರು ಪಡುಬಿದ್ರಿ ಬೀಚ್‌ನಲ್ಲಿ ಸೇರಿ ತಮ್ಮ ತಮ್ಮೊಳಗೇ ಹಾಸ್ಯ ಚಟಾಕಿಗಳನ್ನು ಹಾರಿಸಿಕೊಂಡು, ಕಷ್ಟಗಳನ್ನೆಲ್ಲಾ ಮರೆತು ನಗುವಿನ ಅಲೆಯಲ್ಲೇ ಸಮಯ ಕಳೆದಿದ್ದಾರೆ.

Advertisement

ಎರ್ಮಾಳಿನ ಹಿದಾಯತ್‌ ಕುಟುಂಬವು ನಮ್ಮೂರ ಬೀಚ್‌ ನೋಡಬನ್ನಿ ಎಂದು ತಮ್ಮೆಲ್ಲಾ ಸಹೋದರ, ಸಹೋದರಿಯರನ್ನು ಅಹ್ವಾನಿಸಿದ್ದರು. ಹಾಗಾಗಿ ಕುಂದಾಪುರ ಹೆಮ್ಮಾಡಿಯ ನಂದ್ಯಪ್ಪ ಶೆಟ್ಟಿ, ಶಾರದಾ ಹಟ್ಟಿಯಂಗಡಿ, ಭಾಗ್ಯವತಿ ಮರವಂತೆ, ಶಶಿಧರ ಪೂಜಾರಿ ಕಲ್ಲಮುಂಡ್ಕೂರು, ವಿದ್ಯಾ ಶೆಟ್ಟಿ ಅಡ್ವೆ, ಉಮೇಶ ಶೆಟ್ಟಿ ಕಾರ್ಕಳ ಸೇರಿದಂತೆ ಸುಮಾರು 20ಮಂದಿ ಪಡುಬಿದ್ರಿ ಬೀಚ್‌ನ ಗಾಳಿಗೋಪುರಕ್ಕೆ ಆಗಮಿಸಿ ಸಂಭ್ರಮಿಸಿದರು.

ಈ ವೇಳೆ ಅವರು ಮಾತನಾಡಿ ಜಿಲ್ಲೆಯಲ್ಲಿ ಸುಮಾರು 17000 – 18000 ವಿಕಲಾಂಗರಿದ್ದಾರೆ. ನಮ್ಮನ್ನು ವಿಶ್ವ ವಿಕಲಾಂಗರ ದಿನದಂದು ಜಿಲ್ಲಾಡಳಿತವು ಕರೆಸಿ ಸಮಾರಂಭವನ್ನು ಮಾಡುತ್ತದೆ. ಬಳಿಕ ನೆನಪಾಗುವುದು ಮುಂದಿನ ವರ್ಷ. ಇದು ಸಲ್ಲದು. ನಮಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.ನಾವು ಅನ್ಯರಿಗಿಂತ ಉತ್ತಮವಾಗಿ ಕೆಲಸ ನಿಭಾಯಿಸಿ ತೋರಿಸಬಲ್ಲೆವು. ಸಹಾನುಭೂತಿಯ ಅಗತ್ಯ ತಮಗಿಲ್ಲ. ನಮ್ಮ ಹಕ್ಕುಗಳನ್ನು ರಕ್ಷಿಸಿ, ನಮಗೆ ನೀಡಿ ಎಂಬ ಬೇಡಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ತ್ರಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸಬ್ಸಿಡಿ ನೀಡಿ
ಇಂದಿಲ್ಲಿ ಆಗಮಿಸಿದ್ದ ವಿದ್ಯಾ ಶೆಟ್ಟಿ ದೂರದ ಮುಂಬಯಿನಲ್ಲಿ ಫಿಲ್ಮ್ ಶೂಟಿಂಗ್‌ ವೇಳೆ ಬಿದ್ದು ಕಾಲುಗಳ ಸ್ವಾಧೀನವನ್ನು ಕಳೆದುಕೊಂಡು ಈಗ ಅತ್ತಿತ್ತ ಓಡಾಡಲು ವೀಲ್‌ ಚಯರನ್ನೇ ಸದ್ಯ ನೆಚ್ಚಿಕೊಂಡಿದ್ದಾರೆ. ಶಶಿಧರ್‌ ಪೂಜಾರಿ ಅವರು ಲಿಪ್ಟ್ನಿಂದ ಬಿದ್ದು ಬೆನ್ನು ಹುರಿಯ ತೊಂದರೆಗೊಳಗಾಗಿ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ. ಶಾರದಾ ಅವರ ಕಾಲಲ್ಲಿ ಬಲವಿಲ್ಲ. ತೆವಳುತ್ತಲೇ ಸಾಗಬೇಕಾದ ಅನಿವಾರ್ಯತೆಯಿದೆ. ಸಂಕಷ್ಟಕ್ಕೆ ನಾವು ಒಳಗಾಗಿದ್ದರೂ ತಮ್ಮಲ್ಲಿ ಜೀವನೋತ್ಸಾಹವು ಕುಗ್ಗಿಲ್ಲ. ತಮ್ಮಲ್ಲಿ ಕೆಲವರಿಗೆ ಅನುಕಂಪದೊಂದಿಗೆ ರುಡ್‌ಸೆಟ್‌ನಲ್ಲಿ ವಾರದ ತರಬೇತಿ ಸಹಿತ ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ. ಆದರೆ ತಾವು ಬಳಸುವ ಪೆಟ್ರೋಲ್‌ಗ‌ೂ ಜಿಲ್ಲೆಯಲ್ಲಿ ಮೀನುಗಾರರ ಬೋಟ್‌ಗಳಿಗೆ ನೀಡುವ ಡೀಸೆಲ್‌ ಸಬ್ಸಿಡಿಯಂತೆ ಸಬ್ಸಿಡಿ ನೀಡಬೇಕೆಂಬ ಮನವಿಯನ್ನು ಇವರು ಮಾಡಿಕೊಂಡಿದ್ದಾರೆ.

ಸರಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ರ್‍ಯಾಂಪ್‌ ನಿರ್ಮಿಸಿ
ತಮಗೆ ಜಿಲ್ಲಾ ಸರಕಾರಿ ಕಚೇರಿಗಳಲ್ಲಿ ಒಳಗೆ ಹೋಗಲು ಅನುಕೂಲವಾಗುವಂತೆ ರ್‍ಯಾಂಪ್‌ಗ್ಳನ್ನು ಕಡ್ಡಾಯವಾಗಿ ರಚಿಸಬೇಕು. ಇದೇ ರ್‍ಯಾಂಪನ್ನು ಪ್ರವಾಸೀ ಕೇಂದ್ರಗಳಾಗಿರುವ ಕಾಪು, ಪಡುಬಿದ್ರಿ ಬೀಚ್‌ ಸಹಿತ ಇತರೆಡೆಗಳಲ್ಲೂ ಅವಶ್ಯವಾಗಿ ನಿರ್ಮಿಸಬೇಕೆಂದು ಇವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕಾಪುವಿನಲ್ಲಿ ತಹಶೀಲ್ದಾರರ ಭೇಟಿಗೆ ಮೊದಲನೇ ಮಹಡಿ ಏರುವುದು ಕಷ್ಟಕರರವಾಗಿದೆ ಎಂದು ಒಬ್ಬರು ಹೇಳಿದರೆ, ಈಗ ನಮ್ಮ ಪರವಾಗಿ ಯಾವುದೇ ಅಧಿಕಾರಿ ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಮತ್ತೂಬ್ಬರು ಬೇಸರ ವ್ಯಕ್ತಪಡಿಸಿದರು.

Advertisement

ಎಲ್ಲರೂ ಮತದಾನ ಮಾಡಿ
ಮತದಾನ ನಮ್ಮ ಹಕ್ಕು. ನಮ್ಮನ್ನೂ ಕಳೆದ ಬಾರಿ ಮತದಾನ ಕುರಿತಾದ ಜಾಗೃತಿಗೆ ಬಳಸಿಕೊಂಡಿದ್ದಾರೆ. ಈ ಬಾರಿಯೂ ಮತದಾನವನ್ನು ಅವಶ್ಯ ಮಾಡುವಂತೆ ಎಲ್ಲಾ ಮತದಾರರನ್ನೂ ವಿನಂತಿಸುತ್ತೇವೆ ಎಂದು ವಿಕಲಾಂಗರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next