ವಾಡಿ: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲು ಮುಸ್ಲಿಮ್‌ರಿಗೆ ಕರೆ ನೀಡಲಾಗಿದೆ. ರಂಜಾನ್ ಎಂದರೆ 30 ದಿನ ಕಠಿಣ ಉಪವಾಸ ನೆನಪಾಗುತ್ತದೆ. ದಿನದ ರೋಜಾ ಕೊನೆಗೊಳ್ಳುವ ಸಂಜೆ ನಮಾಜಿನ ನಂತರ ಇಪ್ತಿಯಾರ್ ಏರ್ಪಡಿಸುವುದು ಈ ಹಬ್ಬದ ವಿಶೇಷ.
ಹತ್ತಾರು ತರಹದ ರುಚಿಯಾದ ಹಣ್ಣುಗಳನ್ನು ಸವಿದು ದಿನದ ಉಪವಾಸ ಕೊನೆಗೊಳಿಸುವುದಕ್ಕೆ ಇಫ್ತಿಯಾರ್ ಎನ್ನುತ್ತಾರೆ. ಕೊರೊನಾ ಕರ್ಫ್ಯೂ ಘೋಷಣೆಗೂ ಮುನ್ನ ಮಸೀದಿಗಳಲ್ಲಿ ವಿಶೇಷ ನಮಾಜ್‌ಗಳು ನಡೆದಿವೆ. ಉಳಿದ ನಮಾಜ್‌ಗಳನ್ನು ಮನೆಗಳಲ್ಲೇ ಕೈಗೊಳ್ಳಿ ಎಂದು ಮಸೀದಿಯಲ್ಲಿ ಘೋಷಣೆ ಮಾಡಲಾಗಿದೆ.ಹೀಗಾಗಿ ಮನೆಯಲ್ಲೇ ಖುರಾನ್ ಪಠಣ ನಡೆದಿದೆ.
ರಂಜಾನ್ ಹಬ್ಬದಂದು ಕಡ್ಡಾಯವಾಗಿ ಪಾಲಿಸಲೇಬೇಕಾದ ಆಚರಣೆಯಂದರೆ 30 ದಿನಗಳ ಕಠಿಣ ರೋಜಾ. ಸೂರೊÂàದಯದಿಂದ ಸೂರ್ಯಾಸ್ತದ ವರೆಗೆ ರೋಜಾ ಜಾರಿಯಲ್ಲಿರುತ್ತದೆ. ರೋಜಾ, ಕಲ್ಮಾ, ನಮಾಜ್, ಜಕಾತ್, ಹಜ್ ಇವು ಇಸ್ಲಾಂ ಧರ್ಮದ ತತ್ವಗಳು. ಈ ರೋಜಾದ ನಿರಂತರ ಉಪವಾಸ ಕೊನೆಗೊಳ್ಳಲು ಹಣ್ಣುಗಳ ಪಾತ್ರ ಬಹುಮುಖ್ಯವಾಗಿದೆ. ಸಂಜೆ ನಮಾಜ್ ನಂತರ ಉಪವಾಸ ಕೊನೆಗೊಂಡು ಊಟಕ್ಕೂ ಮುಂಚೆ ಫಲ ಆಹಾರ ಸೇವಿಸುವುದು ಕಡ್ಡಾಯ. ಸಾಮೂಹಿಕವಾಗಿ ಹಣ್ಣು ಸೇವನೆ ನಂತರ ಬಗೆಬಗೆಯ ಭಕ್ಷ್ಯ ಭೋಜನಗಳು ಉಪವಾಸ ವ್ರತ ಕೈಗೊಂಡವರ ಉದರ ಸೇರುತ್ತವೆ. ಸದ್ಯ ನಗರದ ಮಾರುಕಟ್ಟೆಯಲ್ಲಿ ಈ ರೋಜಾ ಹಣ್ಣುಗಳದ್ದೇ ದರ್ಬಾರ್. ಅಂಗಡಿಗಳಲ್ಲಿ ಥರಥರಹದ ಹಣ್ಣುಗಳು ಘಮಘಮಿಸುತ್ತಿವೆ. ನಗರದ ಜಾಮಿಯಾ ಮಸೀದಿ ಎದುರು ಈಗ ಹಣ್ಣಿನ ಲೋಕವೇ ತೆರದುಕೊಂಡಿದೆ.
ಖರ್ಜೂರ, ಸೇಬು, ಸೀಬೆ, ಕಲ್ಲಂಗಡಿ, ಪೈನಾಫಲ್, ಚಿಕ್ಕು, ಮೋಸಂಬಿ, ಮಾವು, ಗೋಡಂಬಿ, ಕಿತ್ತಾಳೆ, ದ್ರಾಕ್ಷಿ, ಬಾಳೆ ಮತ್ತು ಹೈದ್ರಾಬಾದ್ ಸ್ಪೆಷಲ್ ಡ್ರಾಯ್‌ಗನ್ ಫ್ರೂಟ್ಸ್ ಸೇರಿದಂತೆ ಹಲವು ಬಗೆಯ ರುಚಿಕಟ್ಟಾದ ಹಣ್ಣಿನ ರಾಶಿಯೇ ರೋಜಾ ಬಂಧುಗಳಿಗಾಗಿ ಕಾಯುತ್ತಿವೆ. ಅಂಗಡಿಗಳಲ್ಲಿ ಜೋಡಿಸಿಟ್ಟ ಹಣ್ಣಿನ ಸಾಲುಗಳು ಹಬ್ಬದ ಸೌಂದರ್ಯ ಹೆಚ್ಚಿಸಿದೆ.