ಬಾಗಲಕೋಟೆ: ಬಿಸಿಯೂಟವೆಂದರೆ ಇನ್ನು ಅನ್ನ-ಸಾಂಬಾರ ಅಷ್ಟೇ ಅಲ್ಲ, ಪ್ರತಿದಿನವೂ ಇನ್ನು ಒಂದೊಂದು ತರಹದ ಊಟ ಮಕ್ಕಳಿಗೆ ಸಿಗಲಿದೆ.
ಹೌದು. ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಇನ್ಮುಂದೆ “ಪ್ರತಿದಿನವೂ ಒಂದೊಂದು ತರಹದ ಊಟ’ ಬಡಿಸುವ ಚಿಂತನೆ ನಡೆಸಿದ್ದು, ಬಿಸಿಯೂಟದಲ್ಲಿ ನಿತ್ಯವೂ ಬೇರೆ ಬೇರೆ ಅಡುಗೆ ಸಿದ್ಧಪಡಿಸಿ ನೀಡಲು ಜಿಪಂ ಸಿಇಒ ಗಂಗೂಬಾಯಿ ಮಾನಕರ ಸೂಚನೆ ಹೊರಡಿಸಿದ್ದಾರೆ. ಇಂತಹ ಪ್ರಯೋಗ ರಾಜ್ಯದಲ್ಲೇ ಮೊದಲು ಎನ್ನಲಾಗಿದೆ.
ಸೋಮವಾರ-ಅನ್ನ-ಸಾಂಬಾರ್, ಮಂಗಳವಾರ-ಇಡ್ಲಿ, ಬುಧವಾರ-ಪಲಾವು/ಬಿಸಿ ಬೇಳೆಬಾತ್, ಗುರುವಾರ-ಅನ್ನ-ಸಾಂಬಾರ್, ಶುಕ್ರವಾರ-ಸಿಹಿ ಪೊಂಗಲ್, ಶನಿವಾರ-ಉಪ್ಪಿಟ್ಟು/ಪುರಿ/ಸಜ್ಜಕ (ಸಿಹಿ ಪದಾರ್ಥ) ಮುಂತಾದ ಊಟ ನೀಡಲು ಮೆನು ಸಿದ್ಧಪಡಿಸಿ ಎಲ್ಲ ಶಾಲೆಗಳಿಗೆ ಕಳುಹಿಸಲಾಗಿದೆ. ಇದು ಜಿಲ್ಲೆಯ ಬಹುತೇಕ ಶಾಲೆಯಲ್ಲಿ ಆರಂಭಗೊಂಡಿದೆ.
ಶಾಲೆಗಳಲ್ಲಿ ಪ್ರತಿದಿನ ಬಿಸಿಯೂಟ ನೀಡುವ ಮೂಲಕ ಹಾಜರಾತಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಿಸಬೇಕೆಂಬ ಉದ್ದೇಶದಿಂದಲೇ ಸರ್ಕಾರ ಶಾಲೆಗಳಲ್ಲಿ ಆರಂಭಿಸಿರುವ ಮಧ್ಯಾಹ್ನ ಬಿಸಿಯೂಟದಲ್ಲಿ ಬರೀ ಅನ್ನ-ಸಾಂಬಾರ್ ಎನ್ನುವಂತಾಗಿತ್ತು. ನಿತ್ಯವೂ ಅನ್ನ-ಸಾಂಬಾರ್‌ವನ್ನೇ ಮಾಡುವುದರಿಂದ ಹೆಚ್ಚಿನ ಮಕ್ಕಳು ಊಟ ಮಾಡಲ್ಲ. ಕೆಲ ಮಕ್ಕಳು ಮನೆಯಿಂದ ಊಟದ ಡಬ್ಬಿಯನ್ನೂ ತರುತ್ತಿದ್ದರು. ಇದನ್ನರಿತ ಜಿಪಂ ಈ ನಿರ್ಧಾರ ತೆಗೆದುಕೊಂಡಿದೆ.
ಎಷ್ಟು ಮಕ್ಕಳಿಗೆ ಊಟ?: ಜಿಲ್ಲೆಯಲ್ಲಿ ಬಿಸಿಯೂಟ ಪ್ರಯೋಜನ ಪಡೆಯುವ ಮಕ್ಕಳ ಸಂಖ್ಯೆ 2.29 ಲಕ್ಷ ಇದೆ. 2,74,023 ಮಕ್ಕಳು ಶಾಲಾ ದಾಖಲಾತಿ ಪಡೆದಿದ್ದು, ಅದರಲ್ಲಿ 2,52,101 ಜನ ಮಕ್ಕಳು ಶಾಲೆಗೆ ಹಾಜರಾಗುತ್ತಾರೆ. ಅದರಲ್ಲಿ ಶಾಲೆಯಲ್ಲಿ ನಿತ್ಯವೂ ಬಿಸಿಯೂಟ ಮಾಡುವವರ ಸಂಖ್ಯೆ 2,29,739ರಷ್ಟಿದೆ. ಈ ಮಕ್ಕಳಿಗೆ ನಿತ್ಯವೂ ಬೇರೆ ಬೇರೆ ಊಟ ದೊರೆಯಲಿದೆ. ಅಲ್ಲದೇ ನಿತ್ಯ ಬೇರೆ ಬೇರೆ ಊಟ ನೀಡುವುದರಿಂದ ದಾಖಲಾತಿ ಮಕ್ಕಳಷ್ಟೇ ಹಾಜರಾತಿ ಬರಲಿದೆ. ಜತೆಗೆ ಎಲ್ಲ ಮಕ್ಕಳೂ ಶಾಲೆಯಲ್ಲೇ ಊಟ ಮಾಡುತ್ತಾರೆಂಬುದು ಜಿಪಂನ ಕಲ್ಪನೆ. ಇದರಿಂದ ಪ್ರತಿದಿನ ಬೆಳಗ್ಗೆ ಹಾಲು ಹಾಗೂ ಜಿಪಂನಿಂದ ಸಿದ್ಧಪಡಿಸಿದ ಮೆನುವಿನ ಪ್ರಕಾರ ಬೇರೆ ಬೇರೆ ಊಟ ಶಾಲಾ ಮಕ್ಕಳಿಗೆ ಇನ್ಮುಂದೆ ದೊರೆಯಲಿದೆ.
ಶಾಲೆಗಳೆಷ್ಟು?: ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು 1291, ಅನುದಾನಿತ ಪ್ರಾಥಮಿಕ ಶಾಲೆಗಳು 107 ಸೇರಿ ಒಟ್ಟು 1398 ಪ್ರಾಥಮಿಕ ಶಾಲೆಗಳು ಬಿಸಿಯೂಟ ಯೋಜನೆಗೆ ಒಳಪಟ್ಟಿವೆ. ಇನ್ನು ಸರ್ಕಾರಿ ಪ್ರೌಢಶಾಲೆಗಳು 174, ಅನುದಾನಿತ ಪ್ರೌಢ ಶಾಲೆಗಳು 124 ಸೇರಿ ಒಟ್ಟು 298 ಪ್ರೌಢ ಶಾಲೆಗಳು ಬಿಸಿಯೂಟ ಯೋಜನೆಯಡಿ ಬರುತ್ತವೆ. ಪ್ರಾಥಮಿಕ ಮತ್ತು ಪ್ರೌಢ ಸೇರಿ ಒಟ್ಟು 1696 ಶಾಲೆಗಳು ಬಿಸಿಯೂಟ ಯೋಜನೆಯಡಿ ಬರಲಿವೆ.
ಜಿಲ್ಲೆಯಲ್ಲಿದ್ದಾರೆ 4,686 ಸಿಬ್ಬಂದಿ: ಜಿಲ್ಲೆಯಲ್ಲಿ 1533 ಅಡುಗೆ ಕೇಂದ್ರ (ಪ್ರಾಥಮಿಕ-1282, ಪ್ರೌಢ-251) ಗಳಿವೆ. ಶಾಲಾ ಮಕ್ಕಳಿಗೆ ಅಡುಗೆ ಸಿದ್ಧಪಡಿಸಲು ಒಟ್ಟು 4,686 ಸಿಬ್ಬಂದಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಜತೆಗೆ ಖಾಸಗಿ ಸಂಘ-ಸಂಸ್ಥೆಗಳಿಗೂ ಬಿಸಿಯೂಟ ಸಿದ್ಧಪಡಿಸುವ ಜವಾಬ್ದಾರಿ ವಹಿಸಿದ್ದು, ಪ್ರಾಥಮಿಕ ವಿಭಾಗದಲ್ಲಿ 46, ಪ್ರೌಢ ಶಾಲೆ ವಿಭಾಗದಲ್ಲಿ 7 (ಸರ್ಕಾರಿ ಶಾಲೆಗಳು), ಅನುದಾನಿತ ಪ್ರಾಥಮಿಕ-8 ಮತ್ತು ಪ್ರೌಢ-9 ಸೇರಿ ಒಟ್ಟು 70 ಶಾಲೆಗಳಿಗೆ ಖಾಸಗಿ ಎನ್‌ಜಿಒಗಳ ಮೂಲಕ ಬಿಸಿಯೂಟ ಸಿದ್ಧಪಡಿಸಿ ಪೂರೈಸಲಾಗುತ್ತಿದೆ.
-ವಿಶೇಷ ವರದಿ