ಉಡುಪಿ: ಒಂದೇ ಸಮಯ, ಒಂದೇ ಸ್ಥಳದಲ್ಲಿ ಹಲವು ಹಾವುಗಳು ಸೇರಿ ಮಿಲನ ನಡೆಸುವವೆ? ಹೌದು. ಈ ಹಾವುಗಳ ಸಮ್ಮಿಲನ ಪುತ್ತೂರಿನಲ್ಲಿ ಬುಧವಾರ ನಡೆಯಿತು. ಕನ್ನಡದಲ್ಲಿ ಹಗಲಮರಿ, ನೈಬಾ, ತೊಡಂಬಳಕ, ಕಡಂಬಳಕ, ತುಳುವಿನಲ್ಲಿ ಪಗಲೆ, ಪರೆಲ್ ಉಚ್ಚು, ಹಿಂದಿಯಲ್ಲಿ ಸೀತಾ ಕೀ ಲತ್, ಇಂಗ್ಲಿಷ್‌ನಲ್ಲಿ ಬಫ್ ಸ್ಟ್ರೈಪ್ಡ್ ಕೀಲ್ ಬ್ಯಾಕ್ ಎಂದು ಕರೆಯುತ್ತಾರೆ.
ಇವು ವಿಷರಹಿತ, ಸೌಮ್ಯವಾದ ಹಾವುಗಳು. ನೋವಾಗದಂತೆ ಹಿಡಿದರೆ ಕಚ್ಚುವುದಿಲ್ಲ, ಸಿಟ್ಟಾಗುವುದಿಲ್ಲ. ತೋಟ, ಹೊಲಗದ್ದೆ ಹೊಂದಿಕೊಂಡ ಮನೆಯಂಗಳದ ಆಸುಪಾಸುಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮಾರ್ಚ್‌ನಿಂದ ನವೆಂಬರ್ ವರೆಗೆ ಸಂತಾನೋತ್ಪತ್ತಿ ಕಾಲ. ಮಿಲನದ ವೇಳೆ ಒಂದು ಹೆಣ್ಣಿನೊಂದಿಗೆ ಹಲವು ಗಂಡುಹಾವುಗಳು ಕೂಡುತ್ತವೆ.
ಹಾವುಗಳನ್ನು ಕಂಡರೆ ಗಾಬರಿಯಾಗುವ ಅಗತ್ಯವಿಲ್ಲ. ಆಕಸ್ಮಿಕವಾಗಿ ಕಂಡಲ್ಲಿ ಹಾಗೆಯೇ ಬಿಡಬೇಕು, ಅವುಗಳ ಕ್ರಿಯೆಗೆ ತೊಂದರೆ ಮಾಡಬಾರದು. ಈ ಹಾವುಗಳು ನಮ್ಮ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ವಾಸಿಸುವುದರಿಂದ ಆಯಾ ಪರಿಸರದ ಸೂಕ್ಷ¾ ಜೀವರಾಶಿಗಳ ಸೃಷ್ಟಿಯಲ್ಲಿ ನಿಯಂತ್ರಣ ಸಾಧ್ಯವಾಗುತ್ತದೆ. ಈ ಹಾವಿನ ಮರಿಗಳು ಸೊಳ್ಳೆಗಳು ಮತ್ತು ಅದರ ಮೊಟ್ಟೆಯನ್ನು ತಿನ್ನುತ್ತವೆ. ಇದರಿಂದ ಸೋಂಕು ರೋಗಗಳು ನಿಯಂತ್ರಣವಾಗುತ್ತದೆ. ಹಾವಿಗೆ ಸಂಬಂಧಿಸಿ ಮೂಡನಂಬಿಕೆಗಳು ಬೇಡ ಎನ್ನುತ್ತಾರೆ ಉರಗತಜ್ಞ ಗುರುರಾಜ್ ಸನಿಲ್.
ಒಮ್ಮೆಲೆ ಹಲವು ಹಾವುಗಳು ಸೇರುತ್ತವೆ, ಒಂದೊಕ್ಕೊಂದು ಗಂಟು ಬಿಗಿದುಕೊಂಡು ಮಿಲನ ನಡೆಸುತ್ತವೆ. ಇದರ ಕೂಡುವಿಕೆ ಅಚ್ಚರಿ ತರುತ್ತದೆ. ಹೆಣ್ಣು ಹಾವು ತನ್ನ ಮಿಲನ ಬಯಕೆಯ ಸಂದರ್ಭದಲ್ಲಿ ಗಂಡು ಹಾವುಗಳನ್ನು ಆಕರ್ಷಿಸಲು ಫೆರೋಮೋನ್ (ಇದು ಎಲ್ಲಾ ಹಾವುಗಳಲ್ಲಿ ಸಾಮಾನ್ಯವಾಗಿರುತ್ತದೆ) ಎಂಬ ಒಂದು ಬಗೆಯ ವಾಸನಾ ದ್ರವ್ಯವನ್ನು ಹೊರ ಸೂಸುತ್ತದೆ. ಅನೇಕ ಗಂಡು ಹಾವುಗಳು ಇದನ್ನು ಗ್ರಹಿಸಿ ಹೆಣ್ಣು ಹಾವಿನತ್ತ ಬರುತ್ತವೆ. ಹಾವುಗಳು ಘಾಸಿಗೊಂಡರೂ, ಅಪಾಯದಲ್ಲಿದ್ದರೂ ಫೆರೋಮೋನ್ ದ್ರವ್ಯ ಹೊರಸೂಸಿ ರಕ್ಷಣೆಗೆ ಮೊರೆ ಇಡುತ್ತದೆ. ಆಗ ಅದೇ ಜಾತಿಯ ಹಲವಾರು ಹಾವುಗಳು ಅಲ್ಲಿಗೆ ಬರುವುದು ಪ್ರಕೃತಿಯ ಅದ್ಭುತ ಎನ್ನುತ್ತಾರೆ ಗುರುರಾಜ್ ಸನಿಲ್.