ಈ ಹಿಂದೆ ಕನ್ನಡದಲ್ಲಿ ನಾಯಕ, ನಾಯಕಿ ಈ ಎರಡು ಪಾತ್ರಗಳನ್ನಿಟ್ಟುಕೊಂಡು ಹೊಸ ಬಗೆಯ “143′ ಎಂಬ ಚಿತ್ರ ಕಟ್ಟಿಕೊಟ್ಟಿದ್ದ ನಿರ್ದೇಶಕ ಚಂದ್ರಕಾಂತ್, ವರ್ಷಗಳ ಬಳಿಕ “ತ್ರಿಕೋನ’ ಎಂಬ ಸಿನಿಮಾ ಕೈಗೆತ್ತಿಕೊಂಡಿದ್ದು ಗೊತ್ತೇ ಇದೆ. ಈಗ ಆ ಸಿನಿಮಾ ಸಂಪೂರ್ಣಗೊಂಡಿದ್ದು, ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಕೊರೊನಾ ಸಮಸ್ಯೆಯಿಂದಾಗಿ ತನ್ನ ಚಟುವಟಿಕೆ ನಿಲ್ಲಿಸಿರುವ ಚಿತ್ರ, ಸೆನ್ಸಾರ್ ಬಾಕಿ ಉಳಿಸಿಕೊಂಡಿದೆ.
ಈ ಚಿತ್ರಕ್ಕೆ ಚಂದ್ರಕಾಂತ್, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಪ್ರಮುಖ ಆಕರ್ಷಣೆ ಸುರೇಶ್ ಹೆಬ್ಳೀಕರ್ ಮತ್ತು ಹಿರಿಯ ಕಲಾವಿದೆ ಲಕ್ಷ್ಮೀ. ಅಂದುಕೊಂಡಂತೆ ಇದು 60 ಪ್ಲಸ್ ಜೋಡಿಯ ಹೊಸ ಬಗೆಯ ಕಥೆ.ಇವರೊಂದಿಗೆ 45 ಪ್ಲಸ್ ಜೋಡಿಯ ಕಥೆಯೂ ಇರಲಿದೆ. ಇವರೊಂದಿಗೆ ಅಚ್ಯುತಕುಮಾರ್, ಸುಧಾರಾಣಿ ಕೂಡ ಇರಲಿದ್ದು, ಅವರ ಕಥೆಯಲ್ಲೂ ವಿಶೇಷತೆ ಇದೆ ಎಂಬುದು ನಿರ್ದೇಶಕ ಚಂದ್ರಕಾಂತ್ ಅವರ ಮಾತು.
ಇಷ್ಟೇ ಅಲ್ಲ, ಚಿತ್ರದಲ್ಲಿ 25 ಪ್ಲಸ್ ಹುಡುಗನ ಕಥೆಯೂ ಇದೆ. ರಾಜ್‌ವೀರ್ ಎಂಬ ಹುಡುಗ ಆ ವಯಸ್ಸಿನ ಕಥೆಯ ಹೈಲೈಟ್. ಎಲ್ಲಾ ಸರಿ, ಈ ಚಿತ್ರದ ವಿಶೇಷವೇನು? ಈ ಬಗ್ಗೆ ಹೇಳುವ ಅವರು, “ಇದೊಂದು ಆ್ಯಕ್ಷನ್ ಕಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ನೋವು,ನಲಿವು, ತಮಾಷೆ ಇತ್ಯಾದಿ ಅಂಶಗಳು ಇಲ್ಲಿರಲಿವೆ. ಒಂದು ಹೊಸತನದ ಹೂರಣ ಇಲ್ಲಿ ಉಣಬಡಿಸುವ ಪ್ರಯತ್ನ ಮಾಡಿದ್ದೇನೆ. ಇದೊಂದು ರೀತಿಯ ಅಜ್ಜ-ಅಜ್ಜಿಯ ಕಥೆ. ಸುಮಾರು 40 ದಿನಗಳ ಕಾಲ ಬೆಂಗಳೂರು, ಇತರೆಡೆಚಿತ್ರೀಕರಿಸಲಾಗಿದೆ. ರಾಜಶೇಖರ್ ಈ ಚಿತ್ರದ ನಿರ್ಮಾಪಕರು. ಅವರ ಒನ್ ಲೈನ್ ಸ್ಟೋರಿ ಚಿತ್ರದ ಹೈಲೈಟ್ ‘ ಎನ್ನುತ್ತಾರೆ ಚಂದ್ರಕಾಂತ್. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತವಿದೆ. ಶ್ರೀನಿವಾಸ್ ಛಾಯಾಗ್ರಹಣವಿದೆ.
ಇನ್ನು ಈ ಹಿಂದೆ “ಬರ್ಫಿ’’ ನಿರ್ಮಿಸಿದ್ದ ರಾಜಶೇಖರ್ ಅವರಿಗೂ “ತ್ರಿಕೋನ’ ಮೇಲೆ ಬಲವಾದ ನಂಬಿಕೆ ಇದೆ. ಸಿನಿಮಾ ಮುಗಿಸಿ, ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿರುವ ಅವರು, ಈ ಸಿನಿಮಾವನ್ನು ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಯಲ್ಲಿ ತಯಾರಿಸಲಾಗಿದೆ. ಈ ಬಗ್ಗೆ ಹೇಳುವ ನಿರ್ಮಾಪಕ ರಾಜಶೇಖರ್, ಮೊದಲ ಸಲ ಈ ಚಿತ್ರದಲ್ಲೊಂದು ಪ್ರಯೋಗವಾಗಿದೆ. ಮೂರು ಭಾಷೆಯಲ್ಲಿದ್ದರೂ, ನರೇಷನ್ ಬೇರೆ ಬೇರೆ ಇದೆ. ತಂತ್ರಜ್ಞರು ಕೂಡ ಬೇರೆ ಇದ್ದಾರೆ. ಕನ್ನಡದಲ್ಲಿರುವ ತಂತ್ರಜ್ಞರು ಅಲ್ಲಿರೋದಿಲ್ಲ ಎನ್ನುವ ರಾಜಶೇಖರ್, ಇದೊಂದು ತಾಳ್ಮೆ ಹಾಗು ಈಗೋ ಹಿನ್ನೆಲೆಯಲ್ಲಿನ ಕಥೆ. ಈ ಎರಡು ವಿಷಯಗಳಿಂದ ಮನುಷ್ಯನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ಎಂಬ ಅಂಶ ಇಲ್ಲಿದೆ. ಕಥೆಯೇ ಇಲ್ಲಿ ಹೀರೋ. ಕಥೆ ಮಾಡಿಕೊಂಡು, ಸ್ಕ್ರಿಪ್ಟ್ ಅನ್ನು ನಿರ್ದೇಶಕ ಚಂದ್ರಕಾಂತ್ ಅವರಿಗೆ ಕೊಟ್ಟಿದ್ದೆ. ಅವರು ಚೆನ್ನಾಗಿ ನರೇಷನ್ ಮಾಡಿಕೊಂಡು ಬಂದಿದ್ದರು. ಕೊನೆಗೆ ನೀವೇ ನಿರ್ದೇಶನ ಮಾಡಿ ಅಂತ ಹೇಳಿ, ಸಿನಿಮಾ ಮಾಡಿಸಿದ್ದೇನೆ. ಅದ್ಧೂರಿ ಬಜೆಟ್‌ನಲ್ಲೇ ಚಿತ್ರ ತಯಾರಾಗಿದೆ ಎಂದು ವಿವರ ಕೊಡುತ್ತಾರೆ ರಾಜಶೇಖರ್.