ಕಲಘಟಗಿ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಆರ್ಥಿಕ ದುರ್ಬಲರು ಮತ್ತು ಕಡುಬಡವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಕ್ಕಿ ಮತ್ತು ಬೇಳೆಯನ್ನು ಉಚಿತ ವಿತರಣೆಗೆ ಮುಂದಾಗಿವೆ. ಆದರೆ, ಮಧ್ಯವರ್ತಿಗಳ ಸಾಮೂಹಿಕ ತೂಕ ಕಡಿತದಿಂದ ಬಡವರ ಅನ್ನ ಭಾಗ್ಯಕ್ಕೂ ಕತ್ತರಿ ಹಾಕಿ ವಂಚಿಸುತ್ತಿರುವ ಬಗ್ಗೆ ತಾಲೂಕಿನಲ್ಲಿ ಆರೋಪಗಳು ಕೇಳಿ ಬರುತ್ತಿವೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 13,812.90 ಕ್ವಿಂಟಲ್ ಅಕ್ಕಿ ಹಾಗೂ 417.84 ಕ್ವಿಂಟಲ್ ತೊಗರಿಬೇಳೆ ತಾಲೂಕಿನಾದ್ಯಂತ ಪಡಿತರದಾರ ಕುಟುಂಬಗಳಿಗೆ ವಿತರಿಸಲು ಈಗಾಗಲೇ ದಾಸ್ತಾನು ಮಾಡಲಾಗಿದೆ. ತಾಲೂಕಿನಲ್ಲಿ ಅಂತ್ಯೋದಯ 5,012 ಕಾರ್ಡ್‌ದಾರರಿದ್ದು, 18.254 ಯುನಿಟ್ ಹಾಗೂ ಆದ್ಯತಾ ಕುಟುಂಬ (ಬಿಪಿಎಲ್)ನ 36.672 ಕಾರ್ಡ್‌ದಾರರಿದ್ದು, 1,19,875 ಯುನಿಟ್ ಪಡಿತರ ಧಾನ್ಯ ವಿತರಿಸಬೇಕಿದೆ.
ತಾಲೂಕಿನಲ್ಲಿ 27 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಸ್ಥಳೀಯ ಸಂಸ್ಥೆಯ 7, ಯುವತಿ ಹಾಗೂ ಯುವಕ ಮಂಡಳಗಳ 7 ಹಾಗೂ ವೈಯಕ್ತಿಕ 11 ನ್ಯಾಯಬೆಲೆ ಅಂಗಡಿಗಳಿದ್ದು, ಒಟ್ಟು 52 ಕೇಂದ್ರಗಳ ಮೂಲಕ ಆಯಾ ಭಾಗದ ಪಡಿತರದಾರರಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಈಗಾಗಲೇ ಮೇ 4ರಿಂದ ತಾಲೂಕಿನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಸಾಮೂಹಿಕವಾಗಿಯೇ ತೂಕವನ್ನು ಕಡಿತಗೊಳಿಸಿ ವಂಚಿಸುತ್ತಿದ್ದಾರೆ ಎಂದು ತಾಲೂಕಿನ ಬಹುತೇಕ ಗ್ರಾಮದಲ್ಲಿನ ಫಲಾನುಭವಿಗಳು ಆರೋಪಿಸುತ್ತಿದ್ದಾರೆ. ತಾಲೂಕಿನಲ್ಲಿ ವಿವಿಧ ಕೇಂದ್ರಗಳಲ್ಲಿಯೂ ಈ ಅವ್ಯವಹಾರ ಹಲವು ವರ್ಷಗಳಿಂದ ನಡೆದಿದ್ದು, ಇದೀಗ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಲ್ಲಿಯೂ ಮಧ್ಯವರ್ತಿಗಳು ಕತ್ತರಿ ಹಾಕುತ್ತಿದ್ದಾರೆ.
ಕಳೆದ ಮಂಗಳವಾರ ಬೇಗೂರ ಗ್ರಾಮದ ವೃದ್ಧೆಯೊಬ್ಬಳಿಗೆ 10 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ತೊಗರಿ ಬೇಳೆ ವಿತರಣೆ ಮಾಡಲಾಗಿತ್ತು. ಈ ವೃದ್ಧೆಯ ಪಡಿತರ ಧಾನ್ಯದ ಚೀಲವನ್ನು ಬೇರೆ ಅಂಗಡಿಯಲ್ಲಿ ತೂಕ ಮಾಡಿಸಿದಾಗ 1 ಕೆ.ಜಿ ಅಕ್ಕಿ ಮತ್ತು 124 ಗ್ರಾಂ ತೊಗರಿಬೇಳೆ ಕಡಿಮೆ ಬಂದಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಡವರ ಜೀವನೋಪಾಯಕ್ಕಾಗಿ ಅಂತ್ಯೋದಯಮತ್ತು ಆದ್ಯತಾ ಕುಟುಂಬ (ಬಿಪಿಎಲ್) ಕಾರ್ಡ್‌ದಾರ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಮತ್ತು ಪ್ರತಿ ಒಂದು ಕಾರ್ಡ್‌ಗೆ 1 ಕೆ.ಜಿ ತೊಗರಿಬೇಳೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಆದ್ಯತೇತರ ಕುಟುಂಬ (ಎಪಿಎಲ್) ಕಾರ್ಡ್‌ದಾರರಿಗೆ ಪ್ರತಿ ಕೆ.ಜಿಗೆ 15 ರೂ.ಗೆ ಒಬ್ಬ ಸದಸ್ಯರಿದ್ದ ಚೀಟಿಗೆ 5 ಕೆ.ಜಿ ಅಕ್ಕಿ ಹಾಗೂ ಇಬ್ಬರು ಸದಸ್ಯರು ಮೇಲ್ಪಟ್ಟ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
“ನಮ್ಮೆದುರಿಗೆ ಅಕ್ಕಿ ಬೇಳೆಯನ್ನು ತೂಕ ಮಾಡಿ ನಮ್ಮ ಚೀಲಗಳಿಗೆ ಹಾಕುತ್ತಾರೆ. ಅದೇ ಚೀಲವನ್ನ ಬೇರೆ ತಕ್ಕಡಿಯಲ್ಲಿ ತೂಗಿದಾಗ 1 ರಿಂದ 2 ಕೆಜಿ ಕಡಿಮೆ ಅಕ್ಕಿ ಬರುತ್ತದೆ. ಇದರಿಂದ ಪ್ರತಿ ತಿಂಗಳು 2ರಿಂದ ಮೂರು ಕೆ.ಜಿ ಅಕ್ಕಿ ಕಡಿಮೆ ವಿತರಿಸುತ್ತಾ ಬಂದಿದ್ದಾರೆ. ತೂಕದ ತಕ್ಕಡಿಯನ್ನು ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ತಪಾಸಣೆ ಮಾಡಬೇಕು’ ಎಂದು ಬೇಗೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರಕಾರದಿಂದ ಕೊಡ ಮಾಡಿದ ಕೆಲವೊಂದು ಅಕ್ಕಿ ಚೀಲಗಳ ತೂಕವು ಕಡಿಮೆ ಇರುತ್ತದೆ. ಕೇಂದ್ರಗಳಲ್ಲಿ ಆಹಾರ ಧಾನ್ಯವನ್ನು ವಿತರಿಸುವಲ್ಲಿ ತೂಕ ಕಡಿಮೆ ಮಾಡುವುದಿಲ್ಲ. ಅಲ್ಲದೆ ದಾಸ್ತಾನು ಮಳಿಗೆಗಳಿಂದ ಪಡಿತರ ಧಾನ್ಯಗಳನ್ನು ತರುವಾಗಲೇ ಸೋರಿಕೆಯಾಗುತ್ತಿದೆ. ಅದನ್ನು ಸರಿಪಡಿಸಲು ತೂಕವನ್ನು ಕಡಿತಗೊಳಿಸಲಾಗುತ್ತಿದೆ. –
ಎಸ್.ಐ. ಬೋಳಣ್ಣವರ, ಬೇಗೂರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ
ಯಾವುದೇ ಪಡಿತರ ಧಾನ್ಯ ವಿತರಕರು ತೂಕದಲ್ಲಿ ವಂಚಿಸುವಂತಿಲ್ಲ ಹಾಗೂ ಸರಕಾರ ನಿಗದಿಪಡಿಸಿದ ಪ್ರಮಾಣವನ್ನು ಆಯಾ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವುದು ಕಡ್ಡಾಯ. ನಿಖರ ಆರೋಪಗಳು ಸಾಬೀತಾದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. –
ಆರ್.ಎಸ್. ಬೆಂಗಳೂರಕರ್, ತಾಲೂಕು ಆಹಾರ ನಿರೀಕ್ಷಕ
-ಪ್ರಭಾಕರ್ ನಾಯಕ